ಬುಧವಾರ, ಏಪ್ರಿಲ್ 14, 2021
31 °C
‘ತಾರತಮ್ಯ ನೀತಿಯ ಪರಮಾವಧಿ’

ಬಿಜೆಪಿಯೇತರ ಶಾಸಕರ ಕ್ಷೇತ್ರಗಳಿಗೆ ಬಿಡಿಗಾಸೂ ಇಲ್ಲ: ಶಾಸಕ ಬಯ್ಯಾಪುರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ: ‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದರೂ ಬಿಜೆಪಿಯೇತರ ಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಬಿಡಿಗಾಸು ಅನುದಾನವನ್ನೂ ಹಂಚಿಕೆ ಮಾಡಿಲ್ಲ. ಇದು ತಾರತಮ್ಯ ನೀತಿಯ ಪರಮಾವಧಿಯಾಗಿದೆ. ಹಿಂದಿನ ಯಾವುದೇ ಸರ್ಕಾರಗಳು ಈ ರೀತಿ ನಡೆದುಕೊಂಡಿರಲಿಲ್ಲ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿಗೆ ಮಾ.1 ರಂದು ಸಚಿವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು,‘ಅಭಿವೃದ್ಧಿ ಕೆಲಸಗಳ ವಿಚಾರದಲ್ಲಿ ಅನುದಾನ ಹಂಚಿಕೆ ವಿಷಯದಲ್ಲಿ ಹಿಂದೆ ಆಯಾ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿದ್ದಾಗ ತಮ್ಮ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಅಘೋಷಿತ ಸಂಪ್ರದಾಯ ಇತ್ತು ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಅದೇ ರೀತಿ ಬೇರೆ ಬೇರೆ ಪಕ್ಷಗಳ ಶಾಸಕರು ಇರುವ ಕ್ಷೇತ್ರಗಳಿಗೂ ಕನಿಷ್ಠ ಶೇಕಡ ಅರ್ಧದಷ್ಟಾದರೂ ಅನುದಾನ ನೀಡಲಾಗುತ್ತಿತ್ತು. ಆದರೆ ಈಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಲ್ಲಿಯವರೆಗೂ ಬೇರೆ ಪಕ್ಷಗಳ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಒಟ್ಟಾರೆ ಹಣ ನೀಡದೆ ಶೇಕಡ ನೂರಕ್ಕೆ ನೂರರಷ್ಟು ಅನ್ಯಾಯ ನೀತಿ ಮುಂದುವರಿಸಿದೆ’ ಎಂದು ಅತೃಪ್ತಿ ಹೊರಹಾಕಿದರು.

‘ಈ ಹಿಂದೆ ಕಾಂಗ್ರೆಸ್‌–ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಈ ಕ್ಷೇತ್ರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗೆ ₹4-5 ಕೋಟಿ ಮೊತ್ತದ ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದರು. ಬಹಳಷ್ಟು ಶ್ರಮಪಟ್ಟು ಆ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗುತ್ತಿದೆ’ ಎಂದರು.

‘ಸಮಿಶ್ರ ಸರ್ಕಾರ ಇದ್ದಾಗ ಮಂಜೂರಾದ ಕಾಮಗಾರಿಗಳಿಗೆ ಇನ್ನೂ ಹಣ ನೀಡಿಲ್ಲ. ಹಾಗಂತ ಸಿಟ್ಟಿಗೆದ್ದು ಮಾತನಾಡಿದರೂ ಪ್ರಯೋಜನವಿಲ್ಲ. ಸುಮ್ಮನೆ ಕುಳಿತುಕೊಳ್ಳದೆ ಸಾಧ್ಯವಿರುವ ಕೆಲಸಗಳಿಗೆ ಚಾಲನೆ ನೀಡುತ್ತಿದ್ದೇನೆ. ಅಧಿವೇಶನದಲ್ಲಿಯ ಗಂಟಲು ಹರಿದುಕೊಂಡರೂ ಈ ಸರ್ಕಾರಕ್ಕೆ ಕಿವಿ ಇಲ್ಲ. ಸ್ವತಃ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಪತ್ರ ನೀಡಿದರೂ ಒಂದು ರೂಪಾಯಿ ಕೊಡಲಿಲ್ಲ’ ಎಂದು ಆರೋಪಿಸಿದರು.

‘ಸಚಿವ ಕೆ.ಎಸ್‌.ಈಶ್ವರಪ್ಪ ಪ್ರವಾಸದ ಕುರಿತು ಅಧಿಕೃತ ಮಾಹಿತಿ ಬಂದಿಲ್ಲ. ಅಧಿಕಾರಿಗಳು ಹೇಳಿದ್ದಾರೆ. ಆದರೂ ಸಚಿವರ ಪ್ರಗತಿ ಪರಿಶೀಲನೆ ವೇಳೆ ಹಾಜರಿರುತ್ತೇನೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು