ಮಂಗಳವಾರ, ಮಾರ್ಚ್ 21, 2023
23 °C
ಶಿವದಾಸ್ ಘೋಷ್‍ರ ಜನ್ಮ ಶತಾಬ್ದಿಯ ಅಂಗವಾಗಿ ಕಾರ್ಯಕ್ರಮ ಆಯೋಜನೆ

25ರಿಂದ ರಾಜ್ಯಮಟ್ಟದ ಯುವಜನ ಶಿಬಿರ

ಪ್ರಜಾವಾಣಿ ವಾರ್ತೆ ‌‌ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ಯುವಜನರಲ್ಲಿ ವೈಚಾರಿಕ ಸ್ಪಷ್ಟತೆ, ಸೈದ್ಧಾಂತಿಕತೆ ತೀಕ್ಷ್ಣತೆಯನ್ನು ಬೆಳೆಸುವ ಸಲುವಾಗಿ ಫೆ. 25 ಹಾಗೂ 26ರಂದು ಇಲ್ಲಿನ ಮಳೆ ಮಲ್ಲೇಶ್ವರ ಯಾತ್ರಾ ನಿವಾಸದಲ್ಲಿ ರಾಜ್ಯಮಟ್ಟದ ಯುವಜನ ಶಿಬಿರ ಹಮ್ಮಿಕೊಂಡಿದೆ ಎಂದು ಸಂಘಟನೆ ರಾಜ್ಯ ಸಮಿತಿಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ತಿಳಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಯುವಜನರು ಭಾಗವಹಿಸಲಿದ್ದು, ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಎಐಡಿವೈಒನ ಸಂಸ್ಥಾಪನೆಗೆ ಮಾರ್ಗದರ್ಶನ ನೀಡಿದ ಶಿವದಾಸ್ ಘೋಷ್‍ರ ಜನ್ಮ ಶತಾಬ್ದಿಯ ಅಂಗವಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಶಿಬಿರದಲ್ಲಿ ಎಐಡಿವೈಒ ಅಖಿಲ ಭಾರತ ಮಟ್ಟದ ನಾಯಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ‘ಕ್ರಾಂತಿಕಾರಿಗಳು ಕಂಡ ಸ್ವತಂತ್ರ ಭಾರತದ ಕನಸು’, ‘ಪ್ರಸಕ್ತ ಸಮಾಜದ ತಲ್ಲಣಗಳು ಹಾಗೂ ಯುವಜನರ ಮುಂದಿರುವ ಕರ್ತವ್ಯಗಳು’ ‘ನಿರುದ್ಯೋಗ ನಿವಾರಿಸಲಾಗದ ಸಮಸ್ಯೆಯೇ?’ ಹಾಗೂ ‘ವೈಚಾರಿಕತೆ ಮತ್ತು ಯುವಜನತೆ’ ಎಂಬ ವಿಷಯಗಳ ಬಗ್ಗೆ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಆದ್ದರಿಂದ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

‘ಯುವಜನರನ್ನು ದಾರಿ ತಪ್ಪಿಸಲು ಅಶ್ಲೀಲತೆ, ಹಿಂಸೆಗಳನ್ನು ಎಲ್ಲೆಡೆ ಪ್ರಚುರಪಡಿಸಿ ಅತ್ಯಾಚಾರ-ಕೊಲೆಗಳಂತಹ ಅಪರಾಧಗಳಲ್ಲಿ ಸಿಲುಕಿಸಲಾಗಿದೆ. ಪ್ರತಿ ಚುನಾವಣೆಗಳಲ್ಲೂ ಪಕ್ಷಗಳು ನೀಡುವ ಭರವಸೆಗಳಿಗೆ ಮರುಳಾಗಿ ಮತ ನೀಡಿ ಮೋಸ ಹೋಗುವುದು, ಆಳ್ವಿಕೆ ಸರ್ಕಾರಗಳ ಹುನ್ನಾರಗಳಿಗೆ ಬಲಿಯಾಗಿ ಮದ್ಯ ಮಾದಕ ವ್ಯಸನಗಳಿಗೆ ತುತ್ತಾಗುವವರು, ಪಬ್ಜಿ ಮೊದಲಾದ ಆನ್‍ಲೈನ್ ಜೂಜುಗಳಿಗೆ ಬಲಿಯಾಗುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಶರಣು ಗಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ವಂಕಲಕುಂಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.