ಶುಕ್ರವಾರ, ಜನವರಿ 24, 2020
28 °C
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈದ್ಗಾ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ

'ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶ ಸಿದ್ಧರಾಗಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: 'ನಾವು ಪರಕೀಯರು ಅನ್ನುವ ಭಾವನೆ ಮೂಡಿಸುತ್ತಿರುವ ಮತ್ತು ಸಮಾನತೆಯ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕು' ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಪಾಟೀಲ ಕರೆ ನೀಡಿದರು.

ನಗರದ ಈದ್ಗಾ ಮೈದಾನದಲ್ಲಿ ಶನಿವಾರ ನಾಗರಿಕತ್ವ ಕಾಯ್ದೆ, ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯ, ಎಡಪಕ್ಷಗಳು, ದಲಿತ ಸಂಘಟನೆ ಮತ್ತು ಇತರೆ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಇನ್ನೂ ಬಡತನವಿದೆ. ಆರ್ಥಿಕ ಸಬಲತೆ ಇಲ್ಲ. ಹಿಂದೂಗಳ ಮತಗಳಿಕೆಗಾಗಿ ರಾಷ್ಟ್ರದಲ್ಲಿ ಇಂತಹ ಕೃತ್ಯಗಳು ನಡೆಯುತ್ತಿವೆ. ಈ ಎರಡು ಕಾಯ್ದೆಗಳು ಜಾತಿಯಾಗಿವೆ. ಬೇರೆ ದೇಶದಿಂದ ಬರುವ ಎಲ್ಲರನ್ನು ಸಮಾನವಾಗಿ ಕಾಣಬೇಕು. ಮುಸ್ಲಿಂರನ್ನು ಹೊರತು ಪಡಿಸಿ ಉಳಿದವರಿಗೆ ಯಾವುದೇ ನಿರ್ಬಂಧಗಳು ಇಲ್ಲದೆ ಪೌರತ್ವ ನೀಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ವ್ಯವಸ್ಥೆಯ ವಿರುದ್ಧ ಹಾಗೂ ಮನುವಾದದ ವಿರುದ್ಧ ಡಾ.ಅಂಬೇಡ್ಕರ್ ಅವರು ಧ್ವನಿ ಎತ್ತಿ ಮನುಸ್ಮೃತಿ ಸುಟ್ಟುಹಾಕಿದ್ದರು. ಅಂಬೇಡ್ಕರ್ ನೀಡಿದ ಸಂವಿಧಾನವನ್ನು ನಾವು ಉಳಿಸಬೇಕಾಗಿದೆ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಂಘಟಿತ ಹೋರಾಟಗಳು ಇನ್ನಷ್ಟು ಬಲಗೊಂಡು ನಿರಂತರವಾಗಿ ನಡೆಯಬೇಕಾಗಿದೆ. ಕೇಂದ್ರ ಸರ್ಕಾರ ಸಿಎಎ ಮತ್ತು ಎನ್‌ಆರ್ಸಿ ಜಾರಿಗೆ ತರುವ ಮುನ್ನ ದೇಶದ ಜನರ ಮುಂದೆ ಚರ್ಚೆಗೆ ಒಳಪಡಿಸದೆ ಬಲವಂತವಾಗಿ ಕಾನೂನು ಹೇರಲಾಗಿರುವುದು ಅಕ್ಷಮ್ಯ ಎಂದು ಖಂಡಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ‌ ಮಾತನಾಡಿ, ಇವತ್ತು ದೇಶದಾದ್ಯಂತ ಬೃಹತ್ ಪ್ರತಿಭಟನೆ ನಡೆದಿವೆ. ಮೋದಿ ಮತ್ತು ಅಮಿತ್ ಶಾ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರಿಸಲು ಆಗದೆ, ಜನರ ದಿಕ್ಕನ್ನು‌ ಬೇರೆಯೆಡೆ ಸೆಳೆಯಲು‌ ಕೆಲ ಭಾವನಾತ್ಮಕ ವಿಷಯಗಳ ಆಧಾರದ ಮೇಲೆ ಒಡೆದು ಆಳುವ ನೀತಿ‌ ಮೂಲಕ ಆತಂಕದತ್ತ ತಳ್ಳುತ್ತಿವೆ. ಸಂವಿಧಾನಕ್ಕೆ ಅಪಚಾರವೆಸಗುವ ಕೃತ್ಯ ಮತ್ತು ಜನ ವಿರೋಧಿ ಆಡಳಿತಕ್ಕೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಹಿರಿಯ ವಕೀಲ ಆಸೀಫ್ ಅಲಿ, ಅಮ್ಜದ್ ಪಟೇಲ್, ಡಿ.ಎಚ್.ಪೂಜಾರ, ಮುಕುಂದರಾವ್ ಭವಾನಿಮಠ, ರಜಾಕ್ ಉಸ್ತಾದ್, ಬಸವರಾಜ ಶೀಲವಂತರ ಮುಂತಾದವರು ಮಾತನಾಡಿದರು. ಕೆ.ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಹಿಟ್ನಾಳ, ಮುಖಂಡ ಸುರೇಶ ಭೂಮರಡ್ಡಿ, ನಗರಸಭೆ ಸದಸ್ಯರಾದ ಅಕ್ಬರ್ ಪಾಶಾ, ಮುತ್ತುರಾಜ ಕುಷ್ಟಗಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್, ಸಲೀಂ ಮಂಡಲಗೇರಿ, ರಾಜಶೇಖರ್ ಹಿಟ್ನಾಳ, ಸುರೇಶ್ ಭೂಮರಡ್ಡಿ, ಮುಸ್ಲಿಂ ಸಮಾಜದ ಧರ್ಮಗುರುಗಳು ಪಾಲ್ಗೊಂಡು ಮಾತನಾಡಿದರು.

ಮೈದಾನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿ.ಸಂಗೀತಾ ಅವರಿಗೆ ಪ್ರತಿಭಟನಾಕಾರರು ಗುಲಾಬಿ ಹೂವು ನೀಡಿ ಶಾಂತಿಯುತ ಹೋರಾಟಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. 

ಮಧ್ಯಾಹ್ನ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಕಾಯ್ದೆ ವಿರುದ್ಧ ಆಜಾದಿ ಘೋಷಣೆ, ಫಲಕಗಳು ಗಮನ ಸೆಳೆದವು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು