ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಕನೂರು: ಕುಡಿಯುವ ನೀರಿಗೆ ಪರದಾಟ

ಕುಕನೂರಿನ 14,15ನೇ ವಾರ್ಡಿನಲ್ಲಿ ತೀವ್ರ ಸಮಸ್ಯೆ; ನಿವಾಸಿಗಳ ಆರೋಪ
Published 14 ಡಿಸೆಂಬರ್ 2023, 5:07 IST
Last Updated 14 ಡಿಸೆಂಬರ್ 2023, 5:07 IST
ಅಕ್ಷರ ಗಾತ್ರ

ಕುಕನೂರು: ಪಟ್ಟಣದ 14 ಮತ್ತು 15ನೇ ವಾರ್ಡಿನಲ್ಲಿ ಹಲವು ದಿನಗಳಿಂದ ನೀರು ಸರಬರಾಜಿನಲ್ಲಿ ಸಮಸ್ಯೆಯಾಗುತ್ತಿದ್ದು ಇದರಿಂದ ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ.

ಬೇಸಿಗೆಗೆ ಇನ್ನೂ ಮೂರ್ನಾಲ್ಕು ತಿಂಗಳು ಇರುವಂತೆಯೇ ಸಮಸ್ಯೆ ಆರಂಭವಾಗಿದೆ. ಈಗಲೇ ಇಷ್ಟೊಂದು ಸಮಸ್ಯೆಯಾದರೆ ಬೇಸಿಗೆಯಲ್ಲಿ ಪರಿಸ್ಥಿತಿ ಹೇಗೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ. ಈ ಬಾರಿ ಮಳೆಯಾಗದ ಕಾರಣ ಜಿಲ್ಲೆಯಲ್ಲಿ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಕಾಲೊನಿಯಲ್ಲಿ 200 ರಿಂದ 300 ಕುಟಂಬಗಳು ವಾಸ ಮಾಡುತ್ತಿದ್ದು, ನೀರಿನ ಸಮಸ್ಯೆ ಬಗೆಹರಿಸಲು ಅಧಿಕಾರಿ ಮತ್ತು ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಈ ಸಮಸ್ಯೆ ಕುರಿತು ಸ್ಥಳೀಯ ಪಟ್ಟಣ ಪಂಚಾಯಿತಿ ಗಮನಕ್ಕೆ ತರಲಾಗಿದೆ. ನೀರು ಪೂರೈಕೆ ಮಾಡುವ ವಾಟರ್‌ ಮನ್‌ಗಳನ್ನು ಕೇಳಿದರೆ ಬೆಳಿಗ್ಗೆ ಬಿಡ್ತೀವಿ, ಸಂಜೆ ಬಿಡ್ತೀವಿ, ಕರೆಂಟ್ ಬಂದ್ ಮೇಲೆ ಬಿಡ್ತೀವಿ ಎಂಬ ಉತ್ತರ ನೀಡುತ್ತಾರೆ. ಈ ಕಾಲೊನಿಗಳ ಜನರು ನೀರಿಗಾಗಿ ಕಾಯುವುದೇ ಒಂದು ಕೆಲಸವಾಗಿದೆ. ವಾಟರ್‌ಮನ್‌ಗಳು ತಾರತಮ್ಯ ಮಾಡುತ್ತಿದ್ದು ಬೇರೆ ವಾರ್ಡ್‌ಗಳಿಗೆ ಮೂರು ದಿನ ನಾಲ್ಕು ದಿನಕ್ಕೊಮ್ಮೆ ನೀರು ಬಿಟ್ಟರೆ, ನಮ್ಮ ವಾರ್ಡ್‌ಗಳಿಗೆ 15 ರಿಂದ 20 ದಿನಕ್ಕೆ ನೀರು ಬಿಡುತ್ತಾರೆ. ಇದರಿಂದ ಬಹಳ ತೊಂದರೆಯಾಗುತ್ತಿದೆ’ ಎಂದು ವಾರ್ಡ್ ನಿವಾಸಿ ಸರೋಜಮ್ಮ ಅತ್ತಾರ್ ದೂರಿದರು.

ದಿನನಿತ್ಯದ ಚಟುವಟಿಕೆಗಳಿಗೆ ನೀರು ಅತ್ಯಗತ್ಯ. ಆದರೆ ನಮ್ಮ ಮಕ್ಕಳಿಗೆ ಸ್ನಾನ, ಮುಸುರೆ, ಬಟ್ಟೆ ಒಗೆಯಲು ನೀರಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಸಮರ್ಪಕವಾಗಿ ಕಾರ್ಯ ನಿರ್ವಹಿಸದ ವಾಟರ್‌ಮನ್‌ಗಳನ್ನು ಬದಲಿಸಬೇಕು. ಸಮಸ್ಯೆಗೆ ಸ್ಪಂದಿಸದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು. ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ವಾರ್ಡ್‌ಗಳ ನಿವಾಸಿಗಳು ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದು ವಾರ್ಡ್ ನಿವಾಸಿಗಳಾದ ಮೈಲಾರಪ್ಪ, ಸರೋಜಮ್ಮ, ದೇವಮ್ಮ, ರಫೀಸಾಬ್, ಚನ್ನವ್ವ, ಹುಸೇನಬಿ, ಸಯ್ಯದಬೀ, ಹೊನ್ನುರಬಿ, ಕಾಳಮ್ಮ, ಚಾಂದಬೀ ಅಗ್ರಹಿಸಿದ್ದಾರೆ.

ಸರೋಜಮ್ಮ ಅತ್ತಾರ್
ಸರೋಜಮ್ಮ ಅತ್ತಾರ್
ಮೈಲಾರಪ್ಪ ಚಲವಾದಿ
ಮೈಲಾರಪ್ಪ ಚಲವಾದಿ

ನೀರಿಗಾಗಿ ಸಾಕಷ್ಟು ಪರದಾಡುವಂತಾಗಿದೆ. 15 ರಿಂದ 20 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದ್ದು ಇದರಿಂದ ಮಕ್ಕಳಿಗೆ ವೃದ್ಧರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.

–ಸರೋಜಮ್ಮ ಅತ್ತಾರ್ ಸ್ಥಳೀಯ ನಿವಾಸಿ

ಕುಕನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಈ ವಿಷಯದ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಜನರಿಗೆ ನೀರಿಗಾಗಿ ಅಲೆದಾಡುವುದು ತಪ್ಪುತ್ತಿಲ್ಲ.

–ಮೈಲಾರಪ್ಪ ಚಲವಾದಿ ವಾರ್ಡ್ ನಿವಾಸಿ

ಕುಕನೂರಿನ 14 ಹಾಗೂ 15ನೇ ವಾರ್ಡ್‌ಗಳಿಗೆ ನಿತ್ಯ ನೀರು ಬಿಡುತ್ತಿದ್ದೇವೆ ನೀರಿನ ಸಮಸ್ಯೆಯಾಗುತ್ತಿಲ್ಲ. ವಾರ್ಡ್ ನಿವಾಸಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ.

–ಪಿ ಸುಬ್ರಮಣ್ಯ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕುಕನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT