ಕೊಪ್ಪಳ: ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿದ್ದ ಗದಗ ಜಿಲ್ಲೆಯ ದಂಪತಿಗೆ ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಧಾರವಾಡದ ಹೈಕೋರ್ಟ್ ಪೀಠ ಹೇಳಿದ್ದರಿಂದ ಆ ದಂಪತಿಯ ಸಂಬಂಧಿಕರು ಮಠಕ್ಕೆ ಭೇಟಿ ನೀಡಿದರು.
ಶನಿವಾರ ಹುಡುಗಿಯ ಕಡೆಯುವರು ಹಾಗೂ ಭಾನುವಾರ ಹುಡುಗನ ಕಡೆಯುವರು ಮಠಕ್ಕೆ ಬಂದಿದ್ದರು. ಆದರೆ ಆ ದಂಪತಿ ಮಠಕ್ಕೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
‘ಈ ಸಮಸ್ಯೆ ಕುರಿತು ಸ್ವಾಮೀಜಿ ಜೊತೆ ಚರ್ಚಿಸಲಾಗಿದ್ದು ಎಲ್ಲರ ಬದುಕಿನಲ್ಲಿಯೂ ಏರಿಳಿತಗಳು ಇದ್ದೇ ಇರುತ್ತವೆ. ಹೊಂದಿಕೊಂಡು ಹೋಗುವಂತೆ ಇಬ್ಬರಿಗೂ ತಿಳಿಹೇಳಿ ಎಂದು ಸ್ವಾಮೀಜಿ ನಮಗೆ ತಿಳಿಸಿದ್ದಾರೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹುಡುಗನ ಸಂಬಂಧಿಕರು, ಸ್ನೇಹಿತರು ಹೇಳಿದರು.
‘ಸ್ವಾಮೀಜಿ ಮಾರ್ಗದರ್ಶನದಂತೆಯೇ ನಡೆಯಬೇಕೆಂಬ ಸಂಕಲ್ಪದೊಂದಿಗೆ ಮಠಕ್ಕೆ ಆಗಮಿಸಿದ್ದೆವು. ಅದರಂತೆಯೇ ನಡೆಯುತ್ತೇವೆ. ದಂಪತಿ ಜೊತೆಗೂ ಸ್ವಾಮೀಜಿ ಮಾತನಾಡಲಿದ್ದಾರೆ' ಎಂದರು.
ವಿರೋಧ: ನ್ಯಾಯಕೋರಿ ಬಂದಿದ್ದ ಸತಿ–ಪತಿಗಳಿಬ್ಬರನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ಸ್ವಾಮೀಜಿ ಮಧ್ಯಸ್ಥಿಕೆಯಲ್ಲಿ ವಿವಾದ ಬಗೆಹರಿಸಿಕೊಳ್ಳಲು ಸೂಚಿಸಿರುವುದು ವಿಷಾದನೀಯ ಮತ್ತು ಕಾನೂನು ಬಾಹಿರ ನಡೆಯಾಗಿದೆ ಎಂದು ನಾಡಿನ ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ವಿ.ಪಿ.ನಿರಂಜನಾರಾಧ್ಯ, ಬಸವರಾಜ ಸೂಳಿಭಾವಿ, ಡಾ. ವಸುಂಧರಾ ಭೂಪತಿ, ಬಿ. ಸುರೇಶ, ಸಬಿಹಾ ಭೂಮಿಗೌಡ, ಮೂಡ್ನಾಕೂಡು ಚಿನ್ನಸ್ವಾಮಿ, ಕ.ಮ.ರವಿಶಂಕರ, ಲಕ್ಷ್ಮಣ ಕೊಡಸೆ, ಜಯಲಕ್ಷ್ಮಿ ಎಚ್.ಜಿ., ಮಂಜುನಾಥ್ ಬಿ.ಆರ್., ನಗರಗೆರೆ ರಮೇಶ, ಶರೀಫ್ ಬಿಳೆಯಲಿ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಜಂಟಿ ಹೇಳಿಕೆಗೆ ಸಹಿ ಮಾಡಿ, ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
‘ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತದೆ ಎನ್ನುವ ಭರವಸೆಯಿಂದ ಜನ ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ, ನ್ಯಾಯಾಧೀಶರು ತಮ್ಮ ಕಾನೂನುಬದ್ಧ ಕರ್ತವ್ಯ ನಿರ್ವಹಿಸುವ ಬದಲು, ಸತಿ–ಪತಿಯನ್ನು ಮಠಾಧೀಶರ ಬಳಿ ಮಧ್ಯಸ್ಥಿಕೆ ವಹಿಸಿ ವಿವಾದ ಬಗೆಹರಿಸಲು ಸೂಚಿಸುವುದು ಅಥವಾ ನಿರ್ದೇಶಿಸುವುದು, ಮಠಗಳು ಸಂವಿಧಾನ ಕೊಡಮಾಡಿರುವ ನ್ಯಾಯಾಲಯಗಳಿಗಿಂತ ದೊಡ್ಡವು ಎಂಬ ಭಾವನೆಯನ್ನು ಜನರಲ್ಲಿ ಬೆಳೆಸುತ್ತವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.