ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ದಿನಾಚರಣೆ: ಅರಿವಿನ ಹಣತೆ ಬೆಳಗಿದ ಸಾಧಕರು...

ಶಿಕ್ಷಕರ ಊರು ಅಳವಂಡಿಯ ಕಥನ, ತರಗತಿ ಆಚೆಗೂ ಕೀರ್ತಿ ಪಸರಿಸುತ್ತಿರುವ ಜಿಲ್ಲೆಯ ಶಿಕ್ಷಕರು
Last Updated 5 ಸೆಪ್ಟೆಂಬರ್ 2022, 5:20 IST
ಅಕ್ಷರ ಗಾತ್ರ

ಕೊಪ್ಪಳ: ಮಕ್ಕಳಿಗೆ ಪಾಠ ಮಾಡುವುದು, ಶಾಲೆಯ ಕೆಲಸಗಳನ್ನು ಪೂರ್ಣಗೊಳಿಸುವುದು, ಕ್ರೀಡೆ, ಸಾಂಸ್ಕೃತಿಕ, ಕಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಹೀಗೆ ನಿತ್ಯದ ಕೆಲಸಗಳ ಹೊರತಾಗಿಯೂ ಜಿಲ್ಲೆಯ ಶೈಕ್ಷಣಿಕ ವಲಯ ಸಕ್ರಿಯವಾಗಿದೆ. ತರಗತಿ ಆಚೆಗೂ ಶಿಕ್ಷಕರು ಕ್ರಿಯಾಶೀಲವಾಗಿ ಮೆಚ್ಚುವಂತಹ ಕೆಲಸಗಳನ್ನು ಮಾಡುತ್ತಿದ್ದಾರೆ.

ಹೆಚ್ಚು ಶಿಕ್ಷಕರು ಇರುವ ಊರು ಎನ್ನುವ ಖ್ಯಾತಿ ಹೊಂದಿದ ಅಳವಂಡಿ, ಸ್ವಂತ ಖರ್ಚಿನಿಂದ ಸರ್ಕಾರಿ ಶಾಲೆಗಳಿಗೆ ಸುಣ್ಣ, ಬಣ್ಣ ಬಳಿದು ಅಂದ ಹೆಚ್ಚಿಸಿದ ಶಿಕ್ಷಕರು, ರಂಗ ಶಿಕ್ಷಕನ ಪ್ರಯೋಗ ಶಾಲೆ ಹೀಗೆ ವಿವಿಧ ಕೆಲಸಗಳ ಮೂಲಕ ಶಿಕ್ಷಕರು ಗಮನ ಸೆಳೆಯುತ್ತಿದ್ದಾರೆ. ಅಂಥವರ ಪರಿಚಯ ಇಲ್ಲಿದೆ.

ಅಳವಂಡಿಯ ಕಥನ

ಈ ಗ್ರಾಮದ ಬಹುತೇಕ ಎಲ್ಲ ಮನೆಗಳಲ್ಲಿ ಶಿಕ್ಷಕರಿದ್ದಾರೆ. ಒಂದೇ ಮನೆಯಲ್ಲಿ ಐದಾರು ಜನ ಶಿಕ್ಷಕರಿರುವ ಹಲವು ಕುಟುಂಬಗಳು ಕೂಡ ಇಲ್ಲಿವೆ. ಅಳವಂಡಿಯ ಶಿಕ್ಷಕರು ಜಿಲ್ಲೆಯ ರಾಜ್ಯದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಗ್ರಾಮದಲ್ಲಿ ಎಲ್ಲೇ ನಿಂತು ಕಲ್ಲು ತೂರಿದರೆ ಅದು ಒಬ್ಬ ಶಿಕ್ಷಕನ ಅಂಗಳದಲ್ಲಿ ಹೋಗಿ ಬೀಳುತ್ತದೆ ಎನ್ನುವ ಮಾತು ಜನಜನಿತವಾಗಿದೆ.

1980ರ ದಶಕದಲ್ಲಿ ಪಿಯುಸಿ ನಂತರ ಐಟಿಸಿ ಎಂಬ ಶಿಕ್ಷಕ ತರಬೇತಿಯ ಕೋರ್ಸ್‌ ಅಳವಂಡಿ ಪಕ್ಕದ ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜಿನಲ್ಲಿ ಪ್ರಾರಂಭವಾಗಿತ್ತು. ಅಳವಂಡಿಯಲ್ಲಿ ಪಿಯುಸಿ ಮುಗಿಸಿದವರು ಐಟಿಸಿ ಶಿಕ್ಷಕ ತರಬೇತಿ ಮುಗಿಸಿ ನೇರವಾಗಿ ಶಿಕ್ಷಕ ವೃತ್ತಿಗೆ ಸ್ಪರ್ಧೆ ಎದುರಿಸುತ್ತಿದ್ದರು.

ಅಳವಂಡಿಯ ಸಿದ್ದೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಎ.ಟಿ.ಕಲ್ಮಠ ಹಾಗೂ ಎಂ.ಎಸ್.ಹೊಟ್ಟಿನ ಹಾಗೂ ಹಲವಾರು ಉಪನ್ಯಾಸಕರ ಮಾರ್ಗದರ್ಶನ ಮತ್ತು ಬೋಧನೆಗೆ ಆಕರ್ಷಿತರಾಗಿ ಸಾಕಷ್ಟು ವಿದ್ಯಾರ್ಥಿಗಳು ಶೈಕ್ಷಣಿಕ ವಿಷಯವನ್ನೇ ಮುಖ್ಯವಾಗಿಟ್ಟುಕೊಂಡು, ಪಿಯುಸಿ ಕಲಿಯುತ್ತಿದ್ದರು.

1989ರ ಆಸುಪಾಸಿನಲ್ಲಿ ಶಿಕ್ಷಣ ಪ್ರೇಮಿ ಸಿದ್ದಲಿಂಗಯ್ಯ ಅವರ ನೇತೃತ್ವದಲ್ಲಿ ವಿನೂತನ ವಿದ್ಯಾಸಂಸ್ಥೆ ಎಂಬ ಹೊಸ ಸಂಸ್ಥೆ ಉದಯವಾಯಿತು. ಇಲ್ಲಿಯೂ ಕೂಡ ಶಿಕ್ಷಕ ತರಬೇತಿ ಕೋರ್ಸ್ ಅಂದರೆ ಟಿಸಿಎಚ್ ಕಾಲೇಜು ಆರಂಭಿಸಲಾಯಿತು. ಸುತ್ತಮುತ್ತ ಗ್ರಾಮದ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಕರಾಗಲು ವೇದಿಕೆಯಾಯಿತು. ಸೇವಾ ಬಳಗದ ಅನುಕರಣೀಯ ಕಾರ್ಯ: ಸರಿಯಾಗಿ ಒಂದು ವರ್ಷದ ಹಿಂದೆ ಸಮಾನ ಮನಸ್ಕರ ಗೆಳೆಯರು ಸೇರಿಕೊಂಡು ಕೊಪ್ಪಳದ ಕಲರವ ಶಿಕ್ಷಕರ ಸೇವಾ ಬಳಗ ಕಟ್ಟಿಕೊಂಡರು. ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ‘ಶಾಲೆ ನಿಮ್ಮದು ಸೇವೆ ನಮ್ಮದು‘ ಎನ್ನುವ ಘೋಷವಾಕ್ಯದಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಸ್ವಂತ ಹಣದಲ್ಲಿ ಸುಣ್ಣ ಬಣ್ಣ ಹಚ್ಚಿ ಶೃಂಗಾರಗೊಳಿಸುವ ಕೆಲಸವನ್ನು ಈ ತಂಡ ಮಾಡುತ್ತಿದೆ.

ಪ್ರತಿ ತಿಂಗಳ ಕೊನೆಯ ಭಾನುವಾರ ಸುಣ್ಣ ಬಣ್ಣ ಅವಶ್ಯಕತೆ ಇರುವ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಆ ಶಾಲೆಯನ್ನು ಅಂದಗೊಳಿಸಲಾಗುತ್ತದೆ. ಈಗ 15 ಶಾಲೆಗಳನ್ನು ಈ ತಂಡ ಬಣ್ಣಗಳ ಮೂಲಕ ಅಂದಗೊಳಿಸಿದೆ.

ಕಾಶೀನಾಥ್ ಸಿರಿಗೇರಿ, ಬೀರಪ್ಪ ಅಂಡಗಿ, ಶರಣಪ್ಪ ರಡ್ಡೇರ್, ಹನುಮಂತಪ್ಪ ಕುರಿ, ಅಣ್ಣಪ್ಪ ಹಳ್ಳಿ, ಗುರುಸ್ವಾಮಿ ಆರ್., ಮಲ್ಲಪ್ಪ ಗುಡದಣ್ಣವರ, ಸುರೇಶ ಕಂಬಳಿ, ಚಂದ್ರು ಹೆಳವರ, ಹುಲಗಪ್ಪ ಭಜಂತ್ರಿ ಮತ್ತು ವೀರೇಶ್ ಕೌಟಿ ಈ ತಂಡದ ಸದಸ್ಯರು.

ಅಪರೂಪದ ಶಿಕ್ಷಕ ಗುರುಸ್ವಾಮಿ: ಶಿಕ್ಷಕ ಗುರುಸ್ವಾಮಿ ಗಮನಾರ್ಹ ಕೆಲಸ ಮಾಡುತ್ತಿದ್ದಾರೆ. ಹಿರೇಸಿಂಧೋಗಿಯ ರೋಟರಿ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಮುಖ್ಯ ಶಿಕ್ಷಕರಾಗಿದ್ದಾರೆ.

ಶಾಲೆಗೆ ದಾಖಲಾಗುವ ಪ್ರತಿ ಮಗುವಿಗೆ ₹1,000 ಠೇವಣಿ ರೂಪದಲ್ಲಿ ಮಕ್ಕಳ ಬ್ಯಾಂಕ್ ಖಾತೆಗೆ ಜಮಾ ಮಾಡಿಸುತ್ತಾ ಪ್ರತಿವರ್ಷ ದಾಖಲಾತಿ ಹೆಚ್ಚಿಸುತ್ತಿದ್ದಾರೆ. ಹಾಗೆಯೇ ಶಾಲೆಗೆ ದಾಖಲಾಗುವ ಪ್ರತಿ ಮಗುವಿಗೂ ಸ್ವಂತ ಹಣದಲ್ಲಿ ಮಕ್ಕಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್, ನೋಟ್‌ಬುಕ್‌, ಪೆನ್‌ ಹಾಗೂ ಸಮವಸ್ತ್ರ ನೀಡುತ್ತಾರೆ. ಸ್ವಂತ ಹಣದಲ್ಲಿ ಸುಣ್ಣ ಬಣ್ಣ ಬಳಿಸಿದ್ದಾರೆ.

ಮರೆಯದ ಶಿಕ್ಷಕ ಪಂಚಾಕ್ಷರಯ್ಯ ಹಿರೇಮಠ

ಹನುಮಸಾಗರ: ಅದು 1973-75ನೇ ವರ್ಷ; ಹನುಮಸಾಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದೆ. ಆ ಸಮಯದಲ್ಲಿ ಹತ್ತಾರು ಜನ ಶಿಕ್ಷಕರಿದ್ದರೂ ನನ್ನ ಕಣ್ಮುಂದೆ ಈಗಲೂ ಬಂದು ನಿಲ್ಲುವ ಏಕೈಕ ಶಿಕ್ಷಕರೆಂದರೆ ಪಂಚಾಕ್ಷರಯ್ಯ ಹಿರೇಮಠ ಅವರು.

ನಾನು ಐದನೇ ತರಗತಿಯಲ್ಲಿ ಇರುವಾಗಲೇ ಪಂಚಾಕ್ಷರಿ ಸರ್ ಅವರ ಮಾರ್ಗದರ್ಶನದಲ್ಲಿ ಕನ್ನಡ ಸ್ಪಷ್ಟವಾಗಿ ಓದುವುದು, ಬರೆಯುವುದು, ಪತ್ರಲೇಖನ, ಪ್ರಬಂಧ, ಭಾಷಣ ಹೀಗೆ ಬರಹ ಪ್ರಪಂಚದ ಎಲ್ಲ ಮಗ್ಗಲುಗಳನ್ನು ಪರಚಯಿಸಿದರು. ಇಂದು ನಾನು ಶಿಕ್ಷಕನಾಗಲೂ ನನಗರಿವಿಲ್ಲದಂತೆ ನನ್ನ ಮೇಲೆ ಪ್ರಭಾವ ಬೀರಿದವರೂ ಅವರೇ.

– ಚಂದಪ್ಪ ಹಕ್ಕಿ, ಪ್ರಾಥಮಿಕ ಶಾಲಾ ಶಿಕ್ಷಕರು ಹನುಮಸಾಗರ

ಹೊಸಮನಿ ಸರ್ ಕಾಳಜಿ ಎಲ್ಲರಿಗೂ ಮಾದರಿ

ಹನುಮಸಾಗರ: ಎಂ.ಎಚ್.ಹೊಸಮನಿ ಗುರುಗಳು ನನ್ನ ಬದುಕಿನ ಪಥ ಬದಲಾಯಿಸಿದ ಮರೆಯದ ಪ್ರಾಥಮಿಕ ಶಾಲಾ ಶಿಕ್ಷಕರು.

1ರಿಂದ 7ನೇ ತರಗತಿವರೆಗೆ ಹಾವೇರಿ ಜಿಲ್ಲೆ ಹುಕ್ಕೇರಿಮಠದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಓದಿದೆ. ಎಲ್ಲ ಮಕ್ಕಳನ್ನು ತಮ್ಮ ಮಕ್ಕಳಂತೆ ಕಕ್ಕುಲತೆಯಿಂದ ಕಾಣುವ ಸ್ವಭಾವ ಹೊಸಮನಿ ಸರ್ ಅವರದಾಗಿತ್ತು. ಹಬ್ಬ ಹುಣ್ಣಿಮೆ ಬಂದರೆ, ಪ್ರವಾಸಕ್ಕೆ ಹೋದರೆ ಅವರು ಮಾಡುವಷ್ಟು ಕಾಳಜಿ ನಮ್ಮ ಮನೆಯಲ್ಲೂ ಮಾಡುತ್ತಿದ್ದಿಲ್ಲ ಎನ್ನಿ. ಈಗ ನಾನು ಶಾಲೆಯಲ್ಲಿ ಮಕ್ಕಳಿಗೆ ಬಹುಮಾನ ನೀಡುವಾಗ ನಮ್ಮ ಹೊಸಮನಿ ಸರ್ ನೆನಪಿಗೆ ಬರುತ್ತಾರೆ.

– ಮಂಜುನಾಥ ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರು, ಅಡವಿಭಾವಿ

ಪಠ್ಯಗಳನ್ನೇ ರಂಗಕ್ಕೆ ತಂದ ಶಿಕ್ಷಕ

ಹನುಮಸಾಗರ: ಒಬ್ಬ ರಂಗ ಶಿಕ್ಷಕ ಶಾಲೆಯಲ್ಲಿ ಏನೂ ತಾನೆ ಮಾಡಬಹುದು? ಎಂದು ರಂಗಶಿಕ್ಷಣದ ಬಗ್ಗೆ ಅರಿವಿಲ್ಲದವರು ಹೀಗೂ ಕೇಳಬಹುದು. ಆದರೆ, ಶಾಲೆಯಲ್ಲಿ ಒಬ್ಬ ಕ್ರಿಯಾಶೀಲ ರಂಗ ಶಿಕ್ಷಕನಿದ್ದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಸಮೀಪದ ಜಹಗೀರಗುಡದೂರ ಸರ್ಕಾರಿ ಪ್ರೌಢಶಾಲೆಯ ಗುರುರಾಜ ಹೊಸಪೇಟಿ ತೋರಿಸಿಕೊಟ್ಟಿದ್ದಾರೆ.

ನೀನಾಸಂ ಗರಡಿಯಲ್ಲಿ ಪಳಗಿ ಮುಂದೆ ರಂಗ ಶಿಕ್ಷಕರಾದ ಗುರುರಾಜ ಆರಂಭದಲ್ಲಿ ತಮ್ಮ ಕಾರ್ಯಕ್ಷೇತ್ರಕ್ಕೆ ಸೀಮಿತರಾಗಿದ್ದರು. ಬಳಿಕ ತಿಂಗಳಾನುಗಟ್ಟಲೆ ಶಾಲಾ ಪಠ್ಯ ಪುಸ್ತಕಗಳನ್ನು ಮುಂದಿಟ್ಟುಕೊಂಡು ರಂಗದ ಸಂಭಾಷಣೆ ಬರೆದು ಪಠ್ಯಕ್ರಮಕ್ಕೆ ಜೋಡಿಸಿದರು. ಬಹುತೇಕ ಶಾಲಾ ಅವಧಿಯ ನಂತರ ವಿದ್ಯಾರ್ಥಿಗಳಿಗೆ ತಾಲೀಮು ಮಾಡಿಸಿ ಪಠ್ಯವಿಷಯವನ್ನೇ ರಂಗವೇದಿಕೆಗೆ ತಂದರು. ಇಂತಹ ಒಂದು ಹೊಸಬಗೆಯ ವಿಧಾನವನ್ನು ಕಂಡುಕೊಂಡಿರುವ ಗುರುರಾಜ ಈಗಾಗಲೆ ರಾಜ್ಯ ಮಟ್ಟದ ವಿದ್ಯಾರ್ಥಿಗಳ ರಂಗ ಸ್ಪರ್ಧೆಯಲ್ಲಿ ಮಕ್ಕಳನ್ನು ಭಾಗವಹಿಸುವಂತೆ ಮಾಡಿ ಪಠ್ಯವಿಷಯದ ನಾಟಕಗಳನ್ನು ಪ್ರದರ್ಶನ ಮಾಡಿ ಬಹುಮಾನ ಪಡೆದಿದ್ದಾರೆ. ಮಕ್ಕಳಿಗೆ ಇಂಡಿಯಾ ಫೌಂಡೇಷನ್ ಫಾರ್ ದಿ ಆರ್ಟ್ ಸಹಯೋಗದಲ್ಲಿ 'ಮಕ್ಕಳ ಹೆಜ್ಜೆಗಳು ಜಾನಪದದತ್ತ' ಎಂಬ ವಿಶೇಷ ತರಬೇತಿ ಕಾರ್ಯಕ್ರಮ ಮಾಡಿದ್ದಾರೆ.

ಹಂತಿಪದ, ಸೋಬಾನೆಪದ, ಬೀಸುವ ಕಲ್ಲಿನ ಪದ, ಕುಟ್ಟೋ ಪದ, ರಿವಾಯತ್ ಹಾಗೂ ಮೊಹರಂ ಅಲಾವಿ ಕುಣಿತವನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ಮಕ್ಕಳು ಹುಟ್ಟಿನಿಂದಲೇ ಕಲಾವಿದರು. ಬಾಲ್ಯದಲ್ಲಿ ಅಪ್ಪ, ಅಮ್ಮ, ಮಾವ, ಕಾಕಾ, ಬೀದಿಯಲ್ಲಿ ತರಕಾರಿ ಮಾರಾಟಗಾರ, ಗೆಳೆಯ, ಗೆಳತಿ ಎಲ್ಲರನ್ನೂ ಅನುಕರಿಸಿ ಆಟವಾಡುತ್ತಾರೆ. ಇವುಗಳನ್ನೇ ಮೂಲವಾಗಿರಿಸಿಕೊಂಡು ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡುತ್ತಿದ್ದಾರೆ. 'ಮಕ್ಕಳು ಚಿಕ್ಕವರಿದ್ದಾಗ ಕಲ್ಲು- ಮಣ್ಣಿನಲ್ಲಿ ವಸ್ತುಗಳನ್ನು ಸೃಷ್ಟಿಸುತ್ತಾರೆ. ಮಕ್ಕಳೇ ಪಾತ್ರಧಾರಿಗಳಾಗಿ ಇತರ ಗೆಳೆಯರನ್ನು ಸೇರಿಸಿಕೊಂಡು ನೀನು ಹೀಗೆ ಮಾಡು ಎನ್ನುತ್ತಾರೆ. ಇದು ಅವರೊಳಗೊಬ್ಬ ಇರುವ ಕಲಾವಿದನನ್ನು ತೋರಿಸುತ್ತದೆ. ಇದಕ್ಕೆ ಯಾರೊಬ್ಬರ ನೆರವು ಇರುವುದಿಲ್ಲ’ ಎಂದು ಗುರುರಾಜ ಹೇಳುತ್ತಾರೆ.

ತಂದೆ-ತಾಯಿ ಬದುಕೇ ಮಾದರಿ

ಗಂಗಾವತಿ: ಮನೆಯೇ ಮೊದಲ ಪಾಠಶಾಲೆ. ತಂದೆ-ತಾಯಿ ಮೊದಲ ಗುರು. ಚಿಕ್ಕಂದಿನಿಂದಲೇ ಮನೆಯಲ್ಲಿ ಹೋಂವರ್ಕ್ ಮಾಡಿಸುವ ಜೊತೆಗೆ ಓದಿಗೆ ಪ್ರೋತ್ಸಾಹ, ಬದುಕಿನ ನೀತಿ, ಗುರಿ, ಗೆಲ್ಲುವ ಛಲ, ಸಾಧಿಸಬೇಕೆಂಬ ಹಠ, ವಿಶ್ವಾಸ ಮೂಡಿಸಿದ್ದು, ನನ್ನ ಬದುಕಿಗೆ ಅವರೇ ಮಾದರಿ.

ಬದುಕಿನ ಏಳಿಗೆಯಲ್ಲಿ ಅನೇಕ ಶಿಕ್ಷಕರ ನೆರವಾದರೂ ಇಂಗ್ಲಿಷ್ ಭಾಷೆಯ ಧನರಾಜ್ ಮೇಷ್ಟ್ರು ಸದಾ ಸ್ಮರಣೀಯ. ವಿದ್ಯಾರ್ಥಿಗಳನ್ನು ಸ್ನೇಹಿತರಂತೆ ಕಂಡು, ಓದಿನಲ್ಲಿನ ತಪ್ಪುಗಳು ತಿದ್ದುತ್ತಾ, ಪರೀಕ್ಷೆಗೂ ಮುನ್ನ ಪುಸ್ತಕವೆಲ್ಲ ಓದಿ, ಅದರಲ್ಲಿನ ಪ್ರಶ್ನೆಗಳು ಕೇಳಿ ಪರೀಕ್ಷೆ ಮಾಡುತ್ತಿದ್ದರು. ಕಠಿಣ ವಿಷಯ ನೆನಪಿಡುವ ಕೌಶಲ ಕಲಿಸುತ್ತಿದ್ದರು.

ಅಶ್ವಿನಿ ಗುರುರಾಜ್, ಪ್ರಾಚಾರ್ಯೆ, ಅಪ್ಸಾನಿ ಎನ್.ಆರ್ ಕಾನೂನು ಮಹಾವಿದ್ಯಾಲಯ, ಗಂಗಾವತಿ

ಸೃಜನಶೀಲ ಶಿಕ್ಷಕ ಸೋಮು

ತೆಲುಗು ಭಾಷೆಯೇ ಹೆಚ್ಚಾಗಿರುವ ಕಾರಟಗಿ ತಾಲ್ಲೂಕಿನ ಲಕ್ಷ್ಮೀಕ್ಯಾಂಪ್‌ನ ಕುಂಟೋಜಿಯ ಶಾಲೆಯಲ್ಲಿ ಶಿಕ್ಷಕರಾಗಿರುವ ಸೋಮು ಕುದರಿಹಾಳ ಸೃಜನಶೀಲ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಗಳು ಮುಚ್ಚಬಾರದು ಎನ್ನುವ ಉದ್ದೇಶದಿಂದ ದಾನಿಗಳ ನೆರವಿನೊಂದಿಗೆ ಶಾಲೆಯಲ್ಲಿ ಗಮನಾರ್ಹ ಬದಲಾವಣೆ ಮಾಡಿದ್ದಾರೆ. ಕೋವಿಡ್‌ ಸಮಯದಲ್ಲಿ ವಠಾರ ಶಾಲೆ ಆರಂಭಿಸಿ ಕಲಿಕಾ ಕೊರತೆ ನೀಗಿಸಿದರು.

ಸರ್ಕಾರಿ ಶಾಲೆ ನಮ್ಮ ಹೆಮ್ಮೆ ಎಂಬ ಯೋಜನೆಯ ಭಾಗವಾಗಿ ಸಂಪ್ರೀತಿ ಶಿಕ್ಷಕರ ಕಲಾ ಬಳಗದ ಸದಸ್ಯರಾಗಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಕುಂಚ ಸೇವೆ ಮಾಡಿದ್ದಾರೆ. ಶೈಕ್ಷಣಿಕ ಗೀತೆಗಳು ಹಾಗೂ ಜಾಗೃತಿ ಗೀತೆಗಳ ರಚನೆ ಇವರ ಹವ್ಯಾಸ. ಸಾಹಿತ್ಯಿಕವಾಗಿ ಮಕ್ಕಳ ಸಾಹಿತ್ಯ ಮತ್ತು ಕಥೆ ಕವನ ರಚನೆ ಮಾಡುತ್ತಿದ್ದು ಪುಸ್ತಕಗಳು ಪ್ರಕಟವಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT