ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಳಗಿದ ‘ಕಾಯಕ ದೇವೋಭವ’ ಘೋಷಣೆ

ಗವಿಮಠದ ಜಾತ್ರೆ: ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವ ಭಿತ್ತಿಪತ್ರಗಳ ಪ್ರದರ್ಶನ
Published 24 ಜನವರಿ 2024, 14:19 IST
Last Updated 24 ಜನವರಿ 2024, 14:19 IST
ಅಕ್ಷರ ಗಾತ್ರ

ಕೊಪ್ಪಳ: ಬೆಳ್ಳಂಬೆಳಿಗ್ಗೆ ನಗರದ ರಸ್ತೆಗಳೆಲ್ಲವೂ ಝಗಮಗವೆನ್ನುತ್ತಿದ್ದವು. ವಿವಿಧ ಸಂಘಟನೆಗಳ ದಂಡು ಒಂದೆಡೆಯಾದರೆ, ಇನ್ನೊಂದೆಡೆ ವಿದ್ಯಾರ್ಥಿಗಳ ಕಲರವ. ನಗರದ ವಿವಿಧ ಭಾಗಗಳಿಂದ ತೊರೆಯಾಗಿ ಹರಿದು ಬಂದ ಜನ ತಾಲ್ಲೂಕು ಕ್ರೀಡಾಂಗಣದಲ್ಲಿ ಸೇರಿ ‘ಕಾಯಕ ದೇವೋಭವ’ ಜಾಗೃತಿ ಜಾಥಾದಲ್ಲಿ ಕಾಯಕದ ಮಹತ್ವ ಸಾರಿದರು.

ಇಲ್ಲಿನ ಗವಿಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಠವು ಪ್ರತಿವರ್ಷ ನಿರ್ದಿಷ್ಟ ವಿಷಯ ನಿಗದಿ ಮಾಡಿ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಜಾಥಾ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಸ್ವಾವಲಂಬಿ ಬದುಕು ಸಮೃದ್ಧಿ ಬದುಕು ಸಂತೋಷದ ಬದುಕು ಎನ್ನುವ ಘೋಷವಾಕ್ಯದೊಂದಿಗೆ ‘ಕಾಯಕ ದೇವೋಭವ’ ಎನ್ನುವ ಜಾಥಾ ನಡೆಯಿತು.

ಜಿಲ್ಲಾಧಿಕಾರಿ ನಲಿನ್ ಅತುಲ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ‘ಗವಿಮಠವು ಇಂಥ ವಿಶೇಷ ಕಾರ್ಯಕ್ರಮವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಇದರಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಯಾರು ಕೆಲಸ ಮಾಡುತ್ತಾರೋ ಅವರೇ ದೇವರು. ಹೀಗಾಗಿ ತಾವೆಲ್ಲರೂ ತಮ್ಮ ತಮ್ಮ ಕಾಯಕದಲ್ಲಿ ದೇವರನ್ನು ಕಾಣಬೇಕು’ ಎಂದರು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೂ ಆಗಿದ್ದರಿಂದ ವಿದ್ಯಾರ್ಥಿನಿಯರಿಗೆ ಶುಭಾಶಯ ಕೋರಿ ಹೆಣ್ಣುಮಕ್ಕಳಿಗೆ ಸಮಾನ ಅವಕಾಶ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ‘ಕೆಲಸ ಮಾಡುವವರೇ ನಿಜವಾದ ದೇವರು. ಕೆಲಸದಲ್ಲಿ ಮೇಲು ಕೀಳು ಎಂಬುದಿಲ್ಲ, ಎಲ್ಲಾ ಕೆಲಸಗಳೂ ಶ್ರೇಷ್ಠವೇ ಎಂದು ಭಾವಿಸಬೇಕು. ಜಾಗೃತಿ ಕಾರ್ಯಗಳ ಮೂಲಕ ತಮ್ಮ ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ‘ಸ್ವಾವಲಂಬಿ ಬದುಕಿನಿಂದ ನಿಜವಾದ ಸಂತೋಷ ಸಿಗುತ್ತದೆ. ಸರ್ಕಾರಿ ಕೆಲಸ ಇತ್ಯಾದಿ ಹುದ್ದೆಗಳ ಮೇಲೆ ಅವಲಂಬನೆಯಾಗದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಈ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಆಗಬೇಕು’ ಎಂದು ಸಲಹೆ ನೀಡಿದರು. ತಾಲ್ಲೂಕು ಕ್ರೀಡಾಂಗಣದಲ್ಲಿ ಆರಂಭವಾದ ಜಾಥಾ ಅಶೋಕ ವೃತ್ತ, ಗಡಿಯಾರ ಕಂಬದ ಮೂಲಕ ಗವಿಮಠ ತಲುಪಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ವಿಭಾಗದ ಉಪ ನಿರ್ದೇಶಕ ಜಗದೀಶ್ ಜಿ.ಎಚ್, ಜಿ.ಪಂ. ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಬಿರಾದರ, ಕೌಶಲ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಾಣೇಶ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ವಿರಕ್ತಮಠ ಬಿಜಕಲ್‍ನ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪೇಪರ್‌ ಬ್ಯಾಗ್‌ ತಯಾರಕ ಸಿದ್ದಣ್ಣ ಅವರನ್ನು ಸನ್ಮಾನಿಸಲಾಯಿತು.

ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು
ಕೊಪ್ಪಳ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಜಿಲ್ಲಾಧಿಕಾರಿ ನಲಿನ್‌ ಅತುಲ್‌ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು
ಕೊಪ್ಪಳದಲ್ಲಿ ಜಾಗೃತಿ ಜಾಥಾಕ್ಕೆ ತೆರಳುವ ಮಾರ್ಗದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಗುವಿನ ಜೊತೆ ಆಟವಾಡಿದ್ದು ಹೀಗೆ
ಕೊಪ್ಪಳದಲ್ಲಿ ಜಾಗೃತಿ ಜಾಥಾಕ್ಕೆ ತೆರಳುವ ಮಾರ್ಗದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಗುವಿನ ಜೊತೆ ಆಟವಾಡಿದ್ದು ಹೀಗೆ
ಜಾಗೃತಿ ಜಾಥಾದ ಸಮಾರೋಪದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು
ಜಾಗೃತಿ ಜಾಥಾದ ಸಮಾರೋಪದಲ್ಲಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು
ಕೊಪ್ಪಳದಲ್ಲಿ ಶಿಕ್ಷಕರ ಕಲರವ ಬಳಗದಿಂದ ನಡೆದ ಜಾಗೃತಿ ಜಾಥಾದ ನೋಟ
ಕೊಪ್ಪಳದಲ್ಲಿ ಶಿಕ್ಷಕರ ಕಲರವ ಬಳಗದಿಂದ ನಡೆದ ಜಾಗೃತಿ ಜಾಥಾದ ನೋಟ

ಭಾಷಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ 81ಕ್ಕೂ ಹೆಚ್ಚು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗಿ 100 ಸಾಧಕರಿಂದ ಕೌಶಲ ಕಲಿಕೆಯ ಬಗ್ಗೆ ಮಾಹಿತಿ

‘ನೀರು ಹರಿಯಬೇಕು ಮನುಷ್ಯ ದುಡಿಯಬೇಕು’

ಜಾಥಾದ ಸಮಾರೋಪದಲ್ಲಿ ಆಶೀರ್ವಚನ ನೀಡಿದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ‘ಮನುಷ್ಯ ಕಣ್ಣು ಕಾಲು ಇಲ್ಲದೇ ಹುಟ್ಟಿ ಬದುಕುತ್ತಾರೆ. ಬುದ್ದಿಮಾಂಧ್ಯರೂ ಇದ್ದಾರೆ. ಆದರೆ ಹೊಟ್ಟೆ ಇಲ್ಲದವರು ಯಾರು ಇಲ್ಲ. ದೇವರು ಹೊಟ್ಟೆ ನೀಡಿದ್ದು ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕಿದೆ’ ಎಂದರು. ‘ಅನೇಕರು ತಮ್ಮ ತೋಳ್ಬಲದಿಂದ ದೊಡ್ಡವರಾಗುತ್ತಾರೆ ಹೊರತು ಹಣೆ ಬರಹದಿಂದ ಅಲ್ಲ. ನಿಂತರೆ ನೀರು ಕೆಡುತ್ತದೆ ಕುಳಿತರೆ ಮನುಷ್ಯ ಕೆಡುತ್ತಾನೆ ಎಂಬ ಮಾತಿದೆ. ಅದರಂತೆ ನೀರು ಹರಿಯುತ್ತಿರಬೇಕು ಮನುಷ್ಯ ದುಡಿಯುತ್ತಿರಬೇಕು. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು. ‘ಜಾತ್ರಾ ಮಹೋತ್ಸವದಲ್ಲಿ ನೂರು ಕೌಶಲ ಅಭಿವೃದ್ಧಿ ಮಳಿಗೆ ಇರುತ್ತವೆ. ಪ್ರತಿ ಮಳೆಗೆಯಲ್ಲಿ ಸ್ವಯಂ ಉದ್ಯೋಗ ಆರಂಭಿಸಿ ಯಶಸ್ಸು ಕಂಡವರೇ ಇರುತ್ತಾರೆ. ಅವರ ಬದುಕಿನ ಯಶೋಗಾಥೆ ತಾವು ಅರಿತುಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಶಿಕ್ಷಕರ ಕಲಾಸಂಘದಿಂದಲೂ ಜಾಥಾ ಜಾತ್ರೆಯ ಅಂಗವಾಗಿ ಕೊಪ್ಪಳದ ಶಿಕ್ಷಕರ ಕಲಾಸಂಘ ಅಶೋಕ ಸರ್ಕಲ್ ನಾಟಕ ತಂಡ ಕಲರವ ಶಿಕ್ಷಕರ ಬಳಗ ಪತಂಜಲಿ ಯೋಗ ಸಮಿತಿ ಹಾಗೂ ಗಾಂಧಿ ವಿಚಾರ ವೇದಿಕೆ ಪ್ರಗತಿ ಪರ ಚಿಂತಕರು ಸಾಹಿತಿಗಳು ಸರ್ಕಾರಿ ನೌಕರರ ಸಂಯುಕ್ತಾಶ್ರಯದಲ್ಲಿ ಜಾಗೃತಿ ಜಾಥಾ ನಡೆಯಿತು. ಭಾಗ್ಯನಗರದ ಪಟ್ಟಣ ಪಂಚಾಯಿತಿಯಿಂದ ಆರಂಭವಾದ ಜಾಥಾ ಲೇಬರ್‌ ಸರ್ಕಲ್‌ ಮೂಲಕ ತಾಲ್ಲೂಕು ಕ್ರೀಡಾಂಗಣ ತಲುಪಿತು. ಮಾರ್ಗದುದ್ದಕ್ಕೂ ಗಾಂಧೀಜಿ ಅವರ ಚಿಂತನೆಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಾಡಲಾಯಿತು. ಸಾಹಿತಿ ಸಾವಿತ್ರಿ ಮುಜುಮದಾರ ಶಿಕ್ಷಕರ ಕಲಾ ಬಳಗದ ಅಧ್ಯಕ್ಷ ರಾಮಣ್ಣ ಶ್ಯಾವಿ ಕಾರ್ಯದರ್ಶಿ ಪ್ರಾಣೇಶ ಪೂಜಾರ ನಾಗರಾಜ ಡೊಳ್ಳಿನ ಬಸವರಾಜ ಸವಡಿ ಯಮನೂರಪ್ಪ ರವಿ ಯಲಿಗಾರ ಪರಶುರಾಮ ಭಾವಿ ಮಂಜುಳಾ ಶ್ಯಾವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT