ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಊರುಗಳಿಗೆ ಖಾಸಗಿ ಬಸ್‌ಗಳೇ ಆಧಾರ!

Published 5 ಡಿಸೆಂಬರ್ 2023, 6:45 IST
Last Updated 5 ಡಿಸೆಂಬರ್ 2023, 6:45 IST
ಅಕ್ಷರ ಗಾತ್ರ

ಕುಕನೂರು: ರಾಜ್ಯ ಸರ್ಕಾರ ಮಹಿಳೆಯರಿಗೆ ‘ಶಕ್ತಿ’ ಯೋಜನೆಯಡಿ ಆಯ್ದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯ ಕಲ್ಪಿಸಿದೆ. ಆದರೆ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಕೆಲ ಗ್ರಾಮೀಣ ಭಾಗಗಳಲ್ಲಿ ಹಾಗೂ ಸರ್ಕಾರಿ ಬಸ್‌ಗಳೇ ಸಂಚರಿಸದ ಪ್ರದೇಶಗಳಲ್ಲಿ ಸ್ತ್ರೀಯರಿಗೆ ಈ ಯೋಜನೆ ಮರೀಚಿಕೆಯಾಗಿದೆ.

ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಅಷ್ಟೇನೂ ಹದಗೆಟ್ಟಿಲ್ಲ. ಆದರೆ ಗಾವರಾಳ, ಶಿರೂರು, ಬಳಗೇರಿ ಗ್ರಾಮಗಳಲ್ಲಿ ಅಲ್ಲಲ್ಲಿ ಗುಂಡಿಗಳು ಕಾಣುತ್ತಿವೆ. ಈ ರಸ್ತೆಗಳಲ್ಲಿ ನೆರೆಯಲ್ಲಿ ಗ್ರಾನೈಟ್‌ ಉದ್ಯಮವಿದೆ. ಭಾರ ಹೊತ್ತ ಕಲ್ಲಿನ ಲಾರಿಗಳು, ಮರುಳಿನ ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಸಂಚರಿಸುತ್ತವೆ. ಇದರಿಂದ ರಸ್ತೆಗಳು ಹಾಳಾಗಿ ಹೋಗುತ್ತಿವೆ.

ಆದರೆ ಸರ್ಕಾರಿ ಬಸ್‌ ಸೇವೆ ಕಾಣದ ಗ್ರಾಮಗಳ ಬಹುತೇಕ ಮಹಿಳೆಯರು ತಮಗೂ ಉಚಿತವಾಗಿ ಬಸ್ ಪ್ರಯಾಣದ ಭಾಗ್ಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ. 20ಕ್ಕೂ ಹೆಚ್ಚು ಗ್ರಾಮಗಳ ಜನ ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿದ್ದಾರೆ. ಗ್ರಾಮಕ್ಕೆ ಅಥವಾ ಸಮೀಪದ ಮಾರ್ಗಕ್ಕೆ ಬಸ್‌ಗಳು ಬಾರದ ಕಾರಣ ಮಹಿಳೆಗೆ ಶಕ್ತಿ ಯೋಜನೆಯ ಲಾಭ ಸಿಗುತ್ತಿಲ್ಲ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತ ಮಹಿಳೆಯರು ತಾವು ಬೆಳೆದ ತರಕಾರಿ, ಸೊಪ್ಪು, ಹೂವನ್ನು ಪಟ್ಟಣದ ಮಾರುಕಟ್ಟೆಗೆ ಸಾಗಿಸಲು ನಿತ್ಯ ಖಾಸಗಿ ವಾಹನಗಳನ್ನೇ ಅವಲಂಬಿಸಿದ್ದಾರೆ.

ಸರ್ಕಾರಿ ಬಸ್ಸಿಗೆ ಒತ್ತಾಯ: ‘ಶಕ್ತಿ’ ಯೋಜನೆ ಘೋಷಣೆಯಾಗುತ್ತಿದ್ದಂತೆಯೇ ಸರ್ಕಾರಿ ಬಸ್‌ಗಳ ಸಂಖ್ಯೆ ಹೆಚ್ಚಿಸುವಂತೆ ವಿವಿಧ ವರ್ಗದವರಿಂದ ಒತ್ತಡವೂ ಆರಂಭವಾಗಿದೆ. ಕೋವಿಡ್‌ ಕಾಲದಲ್ಲಿ ಸೇವೆ ಸ್ಥಗಿತಗೊಳಿಸಿದ್ದ ಕೆಲವು ಮಾರ್ಗಗಳಲ್ಲಿ ಮತ್ತೆ ಸೇವೆ ಆರಂಭವಾಗಿಲ್ಲ. ಅಂಥ ಕಡೆಗಳಲ್ಲಿ ಪುನಃ ಸೇವೆ ಆರಂಭಿಸಬೇಕು. ಗ್ರಾಮೀಣ ಪ್ರದೇಶಕ್ಕೆ ಸೇವೆ ಹೆಚ್ಚಿಸಬೇಕು ಎಂದು ಕೆಲ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗಳೂ ನಡೆದಿವೆ.

ನಿಟ್ಟಾಲಿ, ಚೆಂಡೂರು, ಬೆಣಕಲ್ಲ, ವೀರಾಪುರ, ಅರಿಕೇರಿ, ನಿಂಗಾಪುರ, ಚಿತ್ತಾಪುರ, ಅಡವಿಹಳ್ಳಿ ಹೀಗೆ ಅನೇಕ ತಾಲ್ಲೂಕಿನ ಗ್ರಾಮಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ಒಂದು ಬಸ್‌ ಬಿಟ್ಟರೆ ಆ ಗ್ರಾಮದ ಜನರು ಖಾಸಗಿ ವಾಹನಗಳನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಮುಖ್ಯ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಒಳಭಾಗದಲ್ಲಿರುವ ಹಳ್ಳಿಗಳಿಗೆ ಖಾಸಗಿ ವಾಹನಗಳು ಸೇವೆ ಜೋರಾಗಿದೆ. ಮುಖ್ಯರಸ್ತೆ ತನಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿ, ಆ ಬಸ್‌ಗಳು ಬಾರದ ಊರುಗಳಿಗೆ ತೆರಳಲು ಖಾಸಗಿ ವಾಹನಗಳಿಗೆ ಪ್ರಯಾಣಿಕರು ಕಾಯಬೇಕಾಗುತ್ತದೆ.

ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಬಸ್‌ಗಳು ಸಂಚರಿಸಬೇಕು. ಹೊಸ ಮಾರ್ಗಗಳಲ್ಲೂ ಬಸ್‌ ಸಂಚಾರ ಆರಂಭವಾಗಬೇಕು. ಮಹಿಳಾ ಉದ್ಯೋಗಿಗಳು, ಕಾರ್ಮಿಕರು ಕೆಲಸಕ್ಕೆ ಹೋಗುವ ಮತ್ತು ಮರಳುವ ಸಮಯಕ್ಕೆ ಬಸ್‌ ಸೌಲಭ್ಯ ದೊರೆಯಬೇಕು. ಆಗ ಮಾತ್ರ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಮಹಿಳಾ ಪ್ರಯಾಣಿಕರು.

ಕುಕನೂರು ಪಟ್ಟಣದಿಂದ ಬೆಣಕಲ್ ಗ್ರಾಮಕ್ಕೆ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಪ್ರಯಾಣಿಕರು
ಕುಕನೂರು ಪಟ್ಟಣದಿಂದ ಬೆಣಕಲ್ ಗ್ರಾಮಕ್ಕೆ ಖಾಸಗಿ ವಾಹನಗಳನ್ನು ಅವಲಂಬಿಸಿರುವ ಪ್ರಯಾಣಿಕರು
ನಮ್ಮೂರಿಗೆ ಸರ್ಕಾರಿ ಬಸ್ಸೇ ಬರಲ್ಲ. ಆಟೊ ರಿಕ್ಷಾ ಟಂಟಂ ಮಾತ್ರ ಸಂಚರಿಸುತ್ತವೆ. ಎಲ್ಲಿಗೆ ಹೋಗಬೇಕಾದರೂ ಖಾಸಗಿ ಗಾಡಿಯಲ್ಲಿಯೇ ಹೋಗಬೇಕಾಗಿದೆ. ಹೀಗಾದರೆ ಉಚಿತ ಪ್ರಯಾಣ ಹೇಗೆ ಸಾಧ್ಯ?
ನೇತ್ರಾವತಿ ಅಡವಿಹಳ್ಳಿ ಗ್ರಾಮ
ಕುಕನೂರು ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಬೆಳಿಗ್ಗೆ ಹಾಗೂ ಸಂಜೆ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಇನ್ನಷ್ಟು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು.
ಸುನಿಲ್ ಐದ್ರಿ ಘಟಕ ವ್ಯವಸ್ಥಾಪಕರು ಕುಕನೂರು
ನಮ್ಮೂರಿಗೆ ಸರ್ಕಾರಿ ಬರುವುದಿಲ್ಲ. ಎಲ್ಲದಕ್ಕೂ ಖಾಸಗಿ ವಾಹನಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ. ರಾಜ್ಯ ಸರ್ಕಾರ ಮಹಿಳೆಯರ ಪ್ರಯಾಣಕ್ಕೆ ಉಚಿತ ಅವಕಾಶ ಕಲ್ಪಿಸಿದೆ. ಆದರೆ ನಮಗೆ ಅದರ ಪ್ರಯೋಜನವೇ ಲಭಿಸುತ್ತಿಲ್ಲ.
ಪ್ರತಿಭಾ ಚಿತ್ತಾಪುರ ಗ್ರಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT