ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಏಕಕಾಲಕ್ಕೆ ಅಸ್ತಮಾ ಔಷಧ ಸೇವಿಸಿದ ಸಾವಿರಾರು ಜನ!

ಕುಟುಗನಹಳ್ಳಿ ಗ್ರಾಮದಲ್ಲಿ ಅಸ್ತಮಾ ರೋಗಿಗಳಿಗೆ ಪ್ರತಿವರ್ಷ ನೀಡಲಾಗುವ ಉಚಿತ ಮನೆ ಔಷಧಿ
Published 8 ಜೂನ್ 2024, 14:29 IST
Last Updated 8 ಜೂನ್ 2024, 14:29 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಕುಟುಗನಹಳ್ಳಿ ಗ್ರಾಮದಲ್ಲಿ ಅಸ್ತಮಾ ರೋಗಿಗಳಿಗೆ ಪ್ರತಿವರ್ಷ ನೀಡಲಾಗುವ ಉಚಿತ ಮನೆ ಔಷಧಿಯನ್ನು ಶನಿವಾರ ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಜನ ಮೃಗಶಿರಾ ಮಳೆ ನಕ್ಷತ್ರ ಕೂಡುವ ಸಮಯದಲ್ಲಿ ಏಕಕಾಲಕ್ಕೆ ಸೇವಿಸಿದರು.

ಬೆಳಿಗ್ಗೆ 7.47 ನಿಮಿಷಕ್ಕೆ ಸರಿಯಾಗಿ ಸಾವಿರಾರು ಜನ ಔಷಧಿ ಸೇವಿಸಿದರು. ಬೆಳಿಗ್ಗೆ ಬೇಗನೆ ಮಳೆ ನಕ್ಷತ್ರವಿದ್ದ ಕಾರಣ ಶುಕ್ರವಾರ ರಾತ್ರಿಯಿಂದಲೇ ರಾಜ್ಯದ ವಿವಿಧ ಜಿಲ್ಲೆಗಳು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ ಜನ ಬಂದಿದ್ದರು. ಮುಹೂರ್ತ ಸಮಯಕ್ಕೆ ಮೂರು ತಾಸು ಮೊದಲೇ ಔಷಧ ವಿತರಣೆ ಆರಂಭವಾಯಿತು. ಮಳೆ ನಕ್ಷತ್ರ ಕೂಡುವ ಸಮಯವಾಗುತ್ತಿದ್ದಂತೆ ಗಂಟೆ ಬಾರಿಸಲಾಯಿತು. ಆಗ ಎಲ್ಲರೂ ಔಷಧ ಸೇವಿಸಿದರು.

ಕುಟುಗನಹಳ್ಳಿ ಗ್ರಾಮದಲ್ಲಿ ಆರು ದಶಕಗಳಿಂದ ಅಶೋಕರಾವ್‌ ಕುಲಕರ್ಣಿ ಕುಟುಂಬದವರು ಅಸ್ತಮಾ ನಿವಾರಣೆಗೆ ಔಷಧ ನೀಡುತ್ತಿದ್ದಾರೆ. ಮೊದಲು ಇವರ ತಂದೆ ವ್ಯಾಸರಾವ್‌ ಕುಲಕರ್ಣಿ ಕೊಡುತ್ತಿದ್ದರು. ಮೃಗಶಿರಾ ಮಳೆ ನಕ್ಷತ್ರ ಸೇರುವ ಸಂದರ್ಭದಲ್ಲಿಯೇ ಈ ಔಷಧಿ ಸೇವಿಸಿದರೆ ಅಸ್ತಮಾ ಗುಣಮುಖವಾಗುತ್ತದೆ ಎನ್ನುವುದು ಜನರ ನಂಬಿಕೆ. ಹೀಗಾಗಿ ಪ್ರತಿ ವರ್ಷ ಸಾವಿರಾರು ಸಂಖ್ಯೆಯಲ್ಲಿ ಜನ ಬರುವುದು ಸಾಮಾನ್ಯ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಶೋಕರಾವ್ ಕುಲಕರ್ಣಿ ‘ಉಚಿತ ಔಷಧಿ ಸೇವಿಸಲು ಸಾವಿರಾರು ಜನ ಹಿಂದಿನ ದಿನವೇ ಕುಟುಗನಹಳ್ಳಿ ಗ್ರಾಮಕ್ಕೆ ಬರುತ್ತಾರೆ. ಬರುವ ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ದಾನಿಗಳ ಮೂಲಕ ಮಾಡಲಾಗಿರುತ್ತದೆ. ಇಲ್ಲಿ ನೀಡುವ ಔಷಧಿಯಿಂದ ಅಸ್ತಮಾ ರೋಗಿಗಳು ಗುಣಮುಖರಾಗುತ್ತಾರೆ. ಈ ಹಿಂದೆ ಅಸ್ತಮಾ ಕಾಯಿಲೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖವಾಗದವರೂ ಸಹ ಇಲ್ಲಿಗೆ ಬಂದು ಔಷಧಿ ಸೇವಿಸಿದ ಬಳಿಕ ಗುಣಮುಖರಾಗಿದ್ದೇವೆ. ಔಷಧಿ ಸೇವಿಸಿದ ಬಳಿಕ ಅವರು ಹೇಳುವ ಪಥ್ಯ ಪಾಲಿಸಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT