ಬುಧವಾರ, ಜೂನ್ 29, 2022
24 °C
ವೀಣಾ ಅಕ್ಕ ಅಭಿಮಾನ ಬಳಗದಿಂದ ಪಾದಯಾತ್ರೆ

ಪಕ್ಷಾತೀತ, ಧರ್ಮಾತೀತ ಜಾಗೃತಿ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಹನುಮ ಜನ್ಮಸ್ಥಾನ ಅಂಜನಾದ್ರಿಗೆ ಆನೆಗೊಂದಿಯಿಂದ ಏ.23 ರಂದು ವೀಣಾ ಅಕ್ಕ ಅಭಿಮಾನಿ ಗಳ ಬಳಗದ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಮುಖಂಡ ವಿನಯ ಪಟ್ಟಣಶೆಟ್ಟಿ ಹೇಳಿದರು.

ಗುರುವಾರ ಮೀಡಿಯಾ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನೆಮ್ಮದಿ, ಶಾಂತಿ ಹಾಗೂ ಭಾವೈಕ್ಯ ನೆಲಸಲಿ ಎಂಬ ಆಶಯದೊಂದಿಗೆ ಪಕ್ಷಾತೀಯ, ಧರ್ಮಾತೀತ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಜಕೀಯ ಉದ್ದೇಶವಿಲ್ಲ: ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ ಮಾತನಾಡಿ, ಯಾವುದೇ ರಾಜಕೀಯ ಮಹತ್ವಾಕಾಂಕ್ಷಿ ಇಟ್ಟುಕೊಂಡು ಪಾದಯಾತ್ರೆ ನಡೆಸುತ್ತಿಲ್ಲ. ಮಠ, ದೇವರು, ಧರ್ಮದ ಬಗ್ಗೆ ನನಗೆ ಮೊದಲಿನಿಂದಲೂ ಒಲುವು. ಈ ಸುಂದರವಾದ ಅಂಜನಾದ್ರಿ ಪರಿಸರ ನಮಗೆ ಸ್ಫೂರ್ತಿ ತುಂಬಿದೆ. ಹನುಮನ ಭಕ್ತರಾಗಿರುವ ನಾವು ಮತ್ತು ಅಭಿಮಾನಿಗಳು ಪಾದಯಾತ್ರೆ ನಡೆಸುತ್ತಾರೆ. ಇದಕ್ಕೆ ಬೆಂಬಲವಾಗಿ ನಿಲ್ಲುವೆ ಎಂದರು.

ಕೇಸರಿ ಧ್ವಜ, ಧರ್ಮ, ಆಂಜನೇಯ ಬಿಜೆಪಿಗೆ ಸೇರಿದ ಆಸ್ತಿಯಲ್ಲ. ನಾವು ಹಿಂದೂಗಳು ಎಲ್ಲರೂ ಕೂಡಿ ಆಚರಣೆ ಮಾಡಿದರೆ ಅದಕ್ಕೆ ಅರ್ಥ ಬರುತ್ತದೆ. ಆಂಜನೇಯನ ಜನ್ಮಸ್ಥಳದ ಕುರಿತು ವಿವಾದವವನ್ನು ಬಿಜೆಪಿ ಸರಿಯಾಗಿ ನಿಭಾಯಿಸಿಲ್ಲ. ಆಂಧ್ರದವರ ಹುನ್ನಾರಕ್ಕೆ ತಕ್ಕ ಉತ್ತರ ನೀಡದೇ ಅಂಜನಾದ್ರಿ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿಗೆ ಕಾಳಜಿ ಇಲ್ಲ ಎಂದರು.

ನಮ್ಮ ಸಂಸ್ಕೃತಿ, ನಮ್ಮ ಧರ್ಮಕ್ಕಾಗಿ ಎನ್ನುವುದಕ್ಕಿಂತ ದೇಶ, ರಾಜ್ಯದಲ್ಲಿ ಇತ್ತೀಚೆಗೆ ಬೆಳವಣಿಗೆಯನ್ನು ನಾವು ನೀವೆಲ್ಲ ನೋಡುತ್ತಿದ್ದೇವೆ, ಅಂಜನೇಯ ಸ್ವಾಮಿ ಎಲ್ಲರಿಗೂ ನೆಮ್ಮದಿ ತರಲಿ ಎಂದು ಜಾತ್ಯತೀತವಾಗಿ ಪಕ್ಷಾತೀತವಾಗಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.

ಆನೆಗೊಂದಿಯಿಂದ ಪಾದಯಾತ್ರೆ ಆರಂಭಿಸಿ ಅಂಜನಾದ್ರಿ ಬೆಟ್ಟವನ್ನು ಏರಿ ಪೂಜೆ ಮಾಡುವ ಮೂಲಕ, ದೇವರಲ್ಲಿ ದೇಶದ ಒಳಿತಿಗಾಗಿ ಪ್ರಾರ್ಥನೆ ಮಾಡುತ್ತೇವೆ ಎಂದರು.

ಕೊಪ್ಪಳಕ್ಕೆ ಬಂದರೆ ಚುನಾವಣೆಗೆ ಸ್ಪರ್ಧೆಗೆ ತಯಾರಿ ಎಂಬ ರೀತಿ ಅರ್ಥೈಸಿಕೊಳ್ಳುವುದು ಸರಿಯಲ್ಲ. ನಾವು ಯಾರ ನಿದ್ದೆಯನ್ನು ಕೆಡಿಸಿಲ್ಲ. ಪಕ್ಷದ ಹೈಕಮಾಂಡ್‌ ಸೂಚನೆ ನೀಡಿದರೆ ಸ್ಪರ್ಧೆಗೆ ತಯಾರಿ. ನಾನು ಅಷ್ಟೊಂದು ದೊಡ್ಡ ಮಟ್ಟದ ನಾಯಕಿಯಾಗಿ ಬೆಳೆದಿಲ್ಲ. ಪಕ್ಷ ಬಯಸಿದರೆ ಚುನಾವಣೆಗೆ ಸಿದ್ಧ ಎಂದು ಸ್ಪಷ್ಟಪಡಿಸಿದರು.

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಕೂಡಲಸಂಗಮದ ಶ್ರೀಗಳ ಹೋರಾಟ ನ್ಯಾಯೋಚಿತ. ಅದಕ್ಕೆ ನಮ್ಮ ಬೆಂಬಲವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ವಿಶ್ವಾಸವಿತ್ತು. ಅನಗತ್ಯ ವಿಳಂಬ ಮಾಡುತ್ತಿರುವುದರಿಂದ ಈಗ ಸಂಶಯ ಬಂದಿದೆ. ಅದಕ್ಕಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಭಾಗವಹಿಸುತ್ತೇವೆ ಎಂದರು.

ನಿಯಾಜ್ ಅಲಿ ನಮಾಜಿ, ಗೀತಾ ಪಾಟೀಲ, ಸಂಗಮೇಶ ಬೆನ್ನಿ ಇದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು