ಗುರುವಾರ , ಜೂನ್ 17, 2021
22 °C
ತಾಲ್ಲೂಕು ಕ್ರೀಡಾಂಗಣದಲ್ಲಿ ವ್ಯಾಪಾರ ವಹಿವಾಟು ಇಂದಿನಿಂದ ಆರಂಭ

ತರಕಾರಿ ಮಾರುಕಟ್ಟೆ ಸ್ಥಳಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಷ್ಟಗಿ: ಸರ್ಕಾರ ಮತ್ತು ಅಧಿಕಾರಿಗಳ ಸೂಚನೆಯಂತೆ ಇಲ್ಲಿಯ ತರಕಾರಿ ವ್ಯಾಪಾರಿಗಳು ಎಲ್ಲ ರೀತಿಯ ವಹಿ ವಾಟು ಪ್ರಕ್ರಿಯೆಯನ್ನು ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಲು ಮುಂದಾಗಿದ್ದಾರೆ.

ಕೊರೊನಾ ಸೋಂಕಿನ ಎರಡನೇ ಅಲೆ ಏರುಗತಿಯಲ್ಲಿ ಸಾಗುತ್ತಿರುವುದರಿಂದ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಹಾಗಾಗಿ ಕೆಲ ದಿನಗಳ ಹಿಂದೆ ಇಲ್ಲಿಯ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಇಲ್ಲಿಯ ಸಂತೆ ಮೈದಾನದಲ್ಲಿ ಜನಜಂಗುಳಿ ನಿಯಂತ್ರಿಸುವ ಉದ್ದೇಶ ದಿಂದ ತರಕಾರಿ ವಹಿವಾಟನ್ನು ಕ್ರೀಡಾಂಗಣಕ್ಕೆ ಸ್ಥಳಾಂತರಿಸುವಂತೆ ತಾಕೀತು ಮಾಡಿದ್ದರು. ಸಮುದಾಯದ ಆರೋಗ್ಯಕ್ಕಿಂತ ನಿಮ್ಮ ವ್ಯಾಪಾರ ಮುಖ್ಯ ಅಲ್ಲ ಎಂದೇ ಅಧಿಕಾರಿಗಳು ಆರಂಭದಲ್ಲಿ ಅದಕ್ಕೆ ಅಪಸ್ವರ ಎತ್ತಿದ್ದ ವ್ಯಾಪಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದರು.

ಕೋವಿಡ್‌ ನಿಯಮ ಪಾಲನೆಗೆ ಮುಂದಾಗಿರುವ ತರಕಾರಿ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ಅಂತೂ ಸೋಮವಾರದಿಂದ (ಏ.26) ಕ್ರೀಡಾಂಗಣದಲ್ಲಿಯೇ ವ್ಯಾಪಾರ ವಹಿವಾಟು ನಡೆಸಲು ಮುಂದಾಗಿದ್ದಾರೆ. ಪೇಟೆಗೆ ತರುವ ರೈತರ ತರಕಾರಿಯ ಹರಾಜು ಪ್ರಕ್ರಿಯೆ, ಗ್ರಾಹಕರಿಗೆ ಮಾರಾಟ ವ್ಯವಸ್ಥೆ ಕ್ರೀಡಾಂಗಣದಲ್ಲಿಯೇ ನಡೆಯಲಿದೆ. ಈ ಕುರಿತು ವ್ಯಾಪಾರಿ ಗಳು, ದಲ್ಲಾಳಿಗಳು ತಮಗೆ ಅನುಕೂಲಕ್ಕೆ ತಕ್ಕಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದುದು ಭಾನುವಾರ ಕಂಡುಬಂತು.

ಕ್ರೀಡಾಂಗಣದಲ್ಲಿ ವಿಶಾಲ ಜಾಗ ಇದ್ದು ಒಂದು ಭಾಗದಲ್ಲಿ ತರಕಾರಿ ಲಿಲಾವು ಪ್ರಕ್ರಿಯೆ ನಡೆದರೆ ಪಶ್ಚಿಮ ದಿಕ್ಕಿನಲ್ಲಿರುವ (ಕಾಲೇಜು ರಸ್ತೆ ಬಳಿ) ಮುಖ್ಯದ್ವಾರದ ಬಳಿ ಗ್ರಾಹಕರು ತರಕಾರಿ ಖರೀದಿಸುವುದಕ್ಕೆ ಅನುಕೂಲ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಡೆಯಿಂದ ಬರುವ ಲಾರಿ, ಟಂಟಂ ಇತರೆ ಗೂಡ್ಸ್ ವಾಹನಗಳಿಗೆ ಅದೇ ದಿಕ್ಕಿನಲ್ಲಿ ಕ್ರೀಡಾಂಗಣಕ್ಕೆ ಪ್ರವೇಶ ಕಲ್ಪಿಸಲಾಗಿದೆ.

ಈ ಮಧ್ಯೆ ಕ್ರೀಡಾಂಗಣದಲ್ಲಿನ ಮಾರುಕಟ್ಟೆ ವ್ಯವಸ್ಥೆಗೆ ಪುರಸಭೆ ಮೂಲಸೌಲಭ್ಯ ಕಲ್ಪಿಸಿದೆ. ಕ್ರೀಡಾಂಗಣದಲ್ಲಿ ಸುತ್ತಲೂ ಗಿಡಮರಗಳು ಇದ್ದು ತಕ್ಕಮಟ್ಟಿಗೆ ನೆರಳಿನ ವ್ಯವಸ್ಥೆ ಇದೆ. ಅಲ್ಲಿಯೇ ಇರುವ ಕೊಳವೆಬಾವಿಗೆ ಸಂಪರ್ಕ ಕಲ್ಪಿಸಲಾಗಿದ್ದು ಜನರು ಮತ್ತು ವ್ಯಾಪಾರಿಗಳಿಗೆ ಕುಡಿಯುವ ನೀರಿನ ಅನುಕೂಲ ಮಾಡಲಾಗಿದೆ. ವ್ಯವಸ್ಥಿತ ರೀತಿಯಲ್ಲಿ ವ್ಯಾಪಾರಿಗಳು ಕುಳಿತುಕೊಳ್ಳುವುದಕ್ಕೆ ಸ್ಥಳ ನಿಗದಿಪಡಿಸಲಾಗಿದೆ.

ಅಗತ್ಯವಾದರೆ ರಾತ್ರಿ ವೇಳೆಯ ಲ್ಲಿಯೂ ವ್ಯಾಪಾರ ಖರೀದಿಗೆ ಅನುಕೂಲ ವಾಗುವಂತೆ ವಿದ್ಯುತ್‌ ದೀಪದ ವ್ಯವಸ್ಥೆಯನ್ನೂ ಪುರಸಭೆ ಕೈಗೊಂಡಿದೆ. ಮುಖ್ಯಾಧಿಕಾರಿ ಉಮೇಶ ಹಿರೇಮಠ, ವ್ಯವಸ್ಥಾಪಕ ಪ್ರಹ್ಲಾದ ಜೋಷಿ ಮತ್ತು ಸದಸ್ಯ ಮೈನುದ್ದೀನ್‌ ಮುಲ್ಲಾ ಸ್ಥಳ ಪರಿಶೀಲನೆ ನಡೆಸಿದರು.

ನಂತರ ಮಾಹಿತಿ ನೀಡಿದ ಮುಖ್ಯಾಧಿಕಾರಿ, ಮೊದಲ ದಿನದ ವ್ಯಾಪಾರ ವ್ಯವಸ್ಥೆಯ ಸಾಧಕ ಬಾಧಕ ಗಳನ್ನು ಗಮನಿಸಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ. ಆರಂಭದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೊಂದರೆಯಾದರೂ ವ್ಯಾಪಾರಿಗಳು ಸಹಕರಿಸಬೇಕು ಎಂದು ಹೇಳಿದರು. ಅಲ್ಲದೆ ತಳ್ಳುಗಾಡಿಯಲ್ಲಿ ಓಣಿಗಳಲ್ಲಿ ಹೋಗಿ ತರಕಾರಿ ಮಾರಾಟ ಮಾಡುವುದಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.