ಸೋಮವಾರ, ಜುಲೈ 4, 2022
21 °C
ರಾಷ್ಟ್ರೀಯ ಮತದಾನ ದಿನಾಚರಣೆ

ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ: ಉಪನ್ಯಾಸಕ ಪ್ರಭುರಾಜ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಯುವಕರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಈ ಮೂಲಕ ವೈಚಾರಿಕವಾಗಿ ಬದಲಾಗದೇ ವೈಜ್ಞಾನಿಕವಾಗಿ ಬದಲಾಗಬೇಕು ಎಂದು ಉಪನ್ಯಾಸಕ ಪ್ರಭುರಾಜ ನಾಯಕ ಹೇಳಿದರು.

ನಗರದ ಸಾಹಿತ್ಯಭವನದಲ್ಲಿ ಶುಕ್ರವಾರ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮತದಾನ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ವೈಚಾರಿಕತೆಯಲ್ಲಿ ಭಿನ್ನತೆ ಇದೆ. ಆದರೆ ವೈಜ್ಞಾನಿಕತೆಯಲ್ಲಿ ಭಿನ್ನತೆ ಇಲ್ಲ. ಅದಕ್ಕಾಗಿ ಯುವಕರು ವೈಜ್ಞಾನಿಕವಾಗಿ ಬದಲಾಗಿ, ಎಲ್ಲರೂ ಮತದಾನ ಮಾಡಬೇಕು. ಈ ಮೂಲಕ ದೇಶವನ್ನು ಸದೃಢವಾಗಿಸಬೇಕು ಎಂದರು.

ಆರ್ಥಿಕ ಮತ್ತು ರಾಜಕೀಯ ಪ್ರಭುತ್ವದ ಮೂಲಕ ಸಾಮಾಜಿಕ ಪ್ರಜಪ್ರಭುತ್ವ ಸಾಧಿಸಲು ಸಾಧ್ಯ. ಆದರೆ, ಅದು ಪ್ರಜ್ಞಾವಂತ ಜನರ ಮತದಾನದಿಂದ ಮಾತ್ರ ಸಾಧ್ಯವಾಗುತ್ತದೆ. ರಾಜಕೀಯ ಸಾಮಾಜೀಕರಣ ಆಗದಿದ್ದರೇ ಪ್ರಜಾಪ್ರಭುತ್ವದ ರಕ್ಷಣೆ ಕಷ್ಟಸಾಧ್ಯವಾಗುತ್ತದೆ ಎಂದು ಹೇಳಿದರು.

ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಜಾರಿಗೊಳಿಸುವ ಪ್ರಯತ್ನ ಆಗಬೇಕು. ಇದರಿಂದ ದೇಶದ ಜನರ ಜೀವನಮಟ್ಟ ಸುಧಾರಣೆ ಆಗಲಿದೆ. ಪ್ರಜಾಪ್ರಭುತ್ವದ‌ಲ್ಲಿ ರಚನೆಯಾಗಿದ್ದು, ಶ್ರೀಮಂತರ ಸರ್ಕಾರವಾಗಿದೆ. ಅಲ್ಲದೇ ವೆಚ್ಚದಾಯಕ ಸರ್ಕಾರವೂ ಆಗಿದೆ. ಪ್ರಸ್ತುತ ಪ್ರಜಾಪ್ರಭುತ್ವಕ್ಕೆ ಬೆದರಿಕೆ ಉಂಟುಮಾಡುವಂತಹ ಘಟನೆ ನಡೆಯುತ್ತಿರುವುದು ಶೋಚನಿಯ ಸಂಗತಿಯಾಗಿದೆ ಎಂದರು.

ದೇಶದಲ್ಲಿ ಶೇ 50ರಷ್ಟು ಮಹಿಳೆಯರಿದ್ದರೂ ಕೂಡಾ ರಾಜಕೀಯದಲ್ಲಿ ಶೇ 50ರಷ್ಟು ಮೀಸಲಾತಿ ಇಲ್ಲ. ಇದರಿಂದ ಮಹಿಳೆಯರಿಗೆ ಅವಶ್ಯವಿರುವ ಸೌಲಭ್ಯವನ್ನು ಪಡೆಯಲಾಗುತ್ತಿಲ್ಲ.  ಮಹಿಳೆಯರು ಚುನಾವಣೆಗಳಿಗೆ ಸ್ಪರ್ಧಿಸಬೇಕು. ಯಾವುದೇ ಯೋಜನೆ ಅನುಷ್ಠಾನ ಆಗಬೇಕಾದರೆ ಶಾಸನ ಸಭೆಯಲ್ಲಿ ಅದು ಮಂಡನೆ ಆಗಬೇಕು. ಸದನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಇದ್ದರೆ ಅದು ಜಾರಿಗೊಳ್ಳುತ್ತದೆ ಎಂದರು.

ಮತದಾನ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಾಲ್ಗೊಳ್ಳಬೇಕು. ಕೇವಲ ಮತದಾನ ಮಾಡದೇ ಚುನಾವಣೆಗೂ ಸ್ಪರ್ಧಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆ ಎನ್ನುವ ಭಾವನೆ ಇದೆ. ಇದು ತಪ್ಪು, ಅದು ವಿಶಾಲವಾಗಿದೆ. ಬೇರೆಯವರ ಮಾತು ಕೇಳಿ ಮತದಾನ ಮಾಡಬೇಡಿ. ಯಾವುದೇ ಜಾತಿ, ಧರ್ಮ, ಮತ, ಪಂಥ, ಸಿದ್ಧಾಂತ ಮತ್ತು ಹಣಕ್ಕೆ ಪ್ರೇರೇಪಿತರಾಗಬೇಡಿ. ನಿಮ್ಮ ಮನಸಾಕ್ಷಿ ಮೆಚ್ಚುವಂತೆ ನೈತಿಕವಾಗಿ ಮತ ಚಲಾಯಿಸಬೇಕು. ಆಗ ಮಾತ್ರ ದೇಶದ ಬಗ್ಗೆ ಹೆಮ್ಮೆಯಿಂದ ಮಾತನಾಡಬಹುದು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಶ್ರೀನಿವಾಸ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಿಇಒ ಆರ್‌.ಪೆದ್ದಪ್ಪಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ದೇಸಾಯಿ ಇದ್ದರು.

* ಪ್ರಜಾಪ್ರಭುತ್ವದಲ್ಲಿ ನಮ್ಮ ಲೋಪದೋಷಗಳನ್ನು ಸರಿಪಡಿಕೊಳ್ಳಬೇಕು. ಅಂದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ.
–ಪಿ.ಸುನೀಲ್‌ಕುಮಾರ, ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು