ಭಾನುವಾರ, ಏಪ್ರಿಲ್ 5, 2020
19 °C
‘ಅಖಿಲಾ ಇಕೋ ಫ್ರೆಂಡ್ಲಿ’ ಸಂಸ್ಥೆಯಿಂದ ಬಡ ಮಹಿಳೆಯರಿಗೆ ಆಸರೆ

ಉಮಾ ಕೈ ಹಿಡಿದ ಕರಕುಶಲ ಕಲೆ

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕಲೆಗೆ ಉದ್ಯಮದ ಸ್ವರೂಪ ನೀಡಿ ನೂರಾರು ಬಡ ಮಹಿಳೆಯರಿಗೆ ನೆರವಾದ ಉಮಾ ನರೇಂದ್ರ ವರ್ಮಾ ಕರಕುಶಲ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶಿಷ್ಟ ಮಹಿಳೆಯಾಗಿದ್ದಾರೆ.

ಐತಿಹಾಸಿಕ, ಪ್ರವಾಸಿ ತಾಣವಾಗಿರುವ ಆನೆಗೊಂದಿಯಲ್ಲಿ ವಾಸಿಸುವ ಉಮಾ. ಮೂಲತಃ ಆಂಧ್ರ ಪ್ರದೇಶದವರು.
ಮದುವೆಯ ಬಳಿಕ ಇಲ್ಲಿಯೇ ನೆಲೆ ಕಂಡುಕೊಂಡು ಪರಿಸರ ಸ್ನೇಹಿ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಪ್ಲಾಸ್ಟಿಕ್ ಮುಕ್ತ ಗ್ರಾಮದ ಕನಸಿಗೆ ಸಾಕಾರ ಎಂಬಂತೆ ಮರುಬಳಕೆಯ ವಸ್ತುಗಳನ್ನು ತಯಾರಿಸಿ ಅದಕ್ಕೆ ತಮ್ಮದೇ ಆದ ಮಾರುಕಟ್ಟೆಯನ್ನು ಕಲ್ಪಿಸಿಕೊಂಡಿದ್ದಾರೆ.

ಬಟ್ಟೆ, ಕಾಗದದ ವಿವಿಧ ಬಗೆಯ ಆಕರ್ಷಕ ಬ್ಯಾಗ್‌ಗಳು, ಚಿತ್ರ ಬರೆಯುವ ಹಾಳೆಗಳು, ನೋಟ್‌ಬುಕ್, ನೆನಪಿನ ಕಾಣಿಕೆ, ಸೀರೆ, ರವಿಕೆ, ಆಭರಣಗಳನ್ನು ಅತ್ಯಂತ ಆಕರ್ಷಕವಾಗಿ ತಯಾರಿಸಿ ಮಾರಾಟ ಮಾಡುವ ಮೂಲಕ ಸಮಾಜ ಸೇವೆಗೆ ತಮ್ಮದೇ
ಆದ ಕೊಡುಗೆ ನೀಡಿದ್ದಾರೆ. ತಮ್ಮಲ್ಲಿಯ ಸೃಜನಶೀಲ ಕಲೆಯನ್ನು ಗ್ರಾಮದ 100 ಮಹಿಳೆಯರಿಗೆ ಉಚಿತ ತರಬೇತಿ ನೀಡಿ, ಅವರನ್ನು ಸಬಲೀಕರಗೊಳಿಸಿದ್ದಾರೆ. ಪ್ರತಿ ತಿಂಗಳು 70 ವೃದ್ಧರು, ಅಶಕ್ತರಿಗೆ ₹100 ಹಣವನ್ನು ನಿಯಮಿತವಾಗಿ ಪಿಂಚಣಿ ರೂಪದಲ್ಲಿ ನೀಡುತ್ತಾ ಬಂದಿದ್ದಾರೆ.

ಇಬ್ಬರು ಹೆಣ್ಣುಮಕ್ಕಳು ವೈದ್ಯ, ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು,ಪತಿ ಉದ್ಯಮಿ. ಆದಾಯದ ಮೂಲವಾದ ಕೃಷಿಯಲ್ಲಿ ಭತ್ತ ಬೆಳೆದು ಸಾಧನೆ ಮಾಡಿದ ಇವರಿಗೆ ಕರಕುಶಲ ವಸ್ತುಗಳ ತಯಾರಿಕೆ ಹವ್ಯಾಸವಾಗಿದೆ. 

ಕರಕುಶಲ ಕಲೆ ವಿಶಿಷ್ಟವಾದ ಹವ್ಯಾಸ. ಇದಕ್ಕೆ ತಾಳ್ಮೆ, ಸೃಜನಶೀಲತೆ ಬೇಕು' ಎನ್ನುವ ಉಮಾ ಅವರ ಕೈಯಲ್ಲಿ ತಯಾರಾದ ವಸ್ತುಗಳಿಗೆ ತಮ್ಮದೇ ಆದ ಮೌಲ್ಯವಿದೆ. ಗ್ರಾಮದಲ್ಲಿ ವಾಸಿಸುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್‌ ಪವಾರ ಅವರ ಸಹೋದರನ ಪುತ್ರಿ ಶಮಾ ಪವಾರ ಅವರಿಂದ ಸ್ಫೂರ್ತಿ ಪಡೆದು ‘ಅಖಿಲಾ ಇಕೋ ಫ್ರೆಂಡ್ಲಿ’ ಎಂಬ ಸಂಸ್ಥೆಯ ಮೂಲಕ ಲಕ್ಷಾಂತರ ರೂಪಾಯಿ ಮೌಲ್ಯದ ವ್ಯಾಪಾರ ವಹಿವಾಟು ನಡೆಸಿದ್ದಾರೆ. ಇವರ ಕೇಂದ್ರಕ್ಕೆ ರಾಷ್ಟ್ರೀಕೃತ ಬ್ಯಾಂಕ್‌ ಸಹಾಯಧನ ನೀಡಿದ್ದು, ಗ್ರಾಮದ ಮಹಿಳೆಯರಿಗೆ ತರಬೇತಿ ನೀಡುವ ಮೂಲಕ ಅವರಲ್ಲಿಯೂ ಕಲೆಯ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ.

ತಮ್ಮ ಕೇಂದ್ರದಲ್ಲಿ 10 ಮಹಿಳೆಯರಿಗೆ ಉದ್ಯೋಗ ನೀಡಿ, ತಮ್ಮ ವಸ್ತುಗಳನ್ನು ಹೈದರಾಬಾದ್, ಬೆಂಗಳೂರು, ಗೋವಾ, ದೆಹಲಿಯಲ್ಲಿ ಮಾರಾಟದ ವ್ಯವಸ್ಥೆ ಮಾಡಿಕೊಂಡಿದ್ದು, ಉತ್ತಮ ಸ್ಪಂದನೆಯೂ ಇದೆ. ಪಾರಂಪರಿಕ ಮನೆಗಳ ಉಳಿವಿಗೆ ಶ್ರಮಿಸುತ್ತಿರುವ ಇವರು ಗ್ರಾಮದ ಮನೆಗಳ ಒಳಾಂಗಣವನ್ನು ಸುಂದರಗೊಳಿಸುವ ಮೂಲಕ ಕರಕುಶಲ ಗ್ರಾಮಕ್ಕೆ ಗರಿ ಮೂಡಿಸಿದ್ದಾರೆ. ಕೇಂದ್ರ
ಮತ್ತು ರಾಜ್ಯ ಸರ್ಕಾರದ ಸಹಯೋಗದಲ್ಲಿ ಕರಕುಶಲ ಗ್ರಾಮದ ಪ್ರಸ್ತಾವ ಸರ್ಕಾರದ ಮುಂದೆ ಇದ್ದು, ಇದು ಘೋಷಣೆಯಾದರೆ ಇದರಲ್ಲಿ
ಇವರ ಪಾತ್ರವೂ ಮುಖ್ಯವಾಗಲಿದೆ.

ಬಹುಮುಖ ಪ್ರತಿಭೆಯಾಗಿರುವ ಉಮಾ ವರ್ಮಾ ಅವರ ಹೆಸರು ಗ್ರಾಮದ ಸಾಧಕ ಮಹಿಳೆಯರಲ್ಲಿ ಮಂಚೂಣಿಯಲ್ಲಿ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)