ಯಲಬುರ್ಗಾ: ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಉತ್ತಮ ಸೇವೆ ಒದಗಿಸುತ್ತಿದ್ದ ಸಿಟಿ ಸ್ಕ್ಯಾನರ್ ಬಂದ್ ಮಾಡಲಾಗಿದ್ದು, ಚಿಕಿತ್ಸೆಗೆಂದು ಆಸ್ಪತ್ರೆಗೆ ಭೇಟಿ ನೀಡುವ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಒಂದು ವಾರದಿಂದಲೂ ಸೇವೆ ಸ್ಥಗಿತಗೊಳಿಸಿದ್ದರಿಂದ ರೋಗಿಗಳಿಗೆ ದೊರೆಯಬೇಕಾಗಿದ್ದ ವೈದ್ಯಕೀಯ ಸೇವೆ ಇದ್ದೂ ಇಲ್ಲದಂತಾಗಿದೆ. ಪ್ರತಿದಿನ ಸುಮಾರು 10ರಿಂದ15 ರೋಗಿಗಳ ಸ್ಕ್ಯಾನ್ ಮಾಡಿ ಆಂತರಿಕ ರೋಗದ ಲಕ್ಷಣಗಳನ್ನು ಪತ್ತೆ ಮಾಡಲಾಗುತ್ತಿತ್ತು. ಇದರಿಂದ ಪರಿಣಾಮಕಾರಿ ಚಿಕಿತ್ಸೆಗೆ ಅನುಕೂಲವಾಗುತ್ತಿತ್ತು.
ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗೆ ಸೇವೆಯನ್ನು ಸ್ಥಗಿತಗೊಳಿಸುವಂತೆ ಮೇಲಧಿಕಾರಿಗಳು ಆದೇಶ ನೀಡಿದ್ದರಿಂದ ಒಂದು ವಾರದಿಂದ ಸ್ಕ್ಯಾನರ್ ಸೇವೆ ಅಲಭ್ಯವಾಗಿದೆ.
ನಿರ್ವಹಣೆಗೆಂದು ನೇಮಕವಾಗಿದ್ದ ಸಿಬ್ಬಂದಿ ಪ್ರತಿನಿತ್ಯ ಆಸ್ಪತ್ರೆಗೆ ಹಾಜರಾಗಿ ಹೋಗುತ್ತಿದ್ದಾರೆಯೇ ಹೊರತು ಸಾರ್ವಜನಿಕರಿಗೆ ಯಾವುದೇ ಸೇವೆ ಒದಗಿಸುತ್ತಿಲ್ಲ. ತಿಂಗಳಲ್ಲಿ ನೂರಕ್ಕು ಅಧಿಕ ಸಂಖ್ಯೆಯಲ್ಲಿ ಸ್ಕ್ಯಾನ್ ಮಾಡಿ, ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದ್ದ ಈ ಆಧುನಿಕ ಸೇವೆಯು ಈಗ ಇಲ್ಲದಾಗಿದೆ. ಇದರಿಂದ ಗ್ರಾಮೀಣ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆಗೆ ತೊಂದರೆಯಾಗುತ್ತಿರುವುದು ಎದ್ದು ಕಾಣುತ್ತಿದೆ.
‘ಹೊರಗುತ್ತಿಗೆಯ ನೌಕರರಾಗಿ ಕೆಲಸ ಮಾಡುತ್ತಿರುವ ಸ್ಕ್ಯಾನರ್ ನಿರ್ವಾಹಕರು ಮತ್ತು ಇತರೆ ಸಿಬ್ಬಂದಿಗೆ ಕಳೆದ 5 ತಿಂಗಳಿಂದಲೂ ವೇತನ ಪಾವತಿಯಾಗಿಲ್ಲ. ನಿಯೋಜನೆಗೊಳಿಸಿದ ಸಂಸ್ಥೆಯವರು ಸರ್ಕಾರದಿಂದ ಅನುದಾನ ಬಂದಿಲ್ಲ ಎಂದು ಹೇಳುತ್ತಾ ದಿನ ನೂಕುತ್ತಿದ್ದಾರೆ. ಈ ಕಾರಣದಿಂದ ಸಂಸ್ಥೆಯ ಮುಖ್ಯಸ್ಥರು ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದ ಮುಕ್ತಾಯಗೊಳಿಸಿದ್ದರಿಂದ ಕೆಲಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ’ ಎಂದು ಸಿಬ್ಬಂದಿ ಚಂದ್ರಶೇಖರ, ಸಂತೋಷ, ಯಮನೂರಸಾಬ ಹಾಗೂ ಇತರರು ಮಾಹಿತಿ ನೀಡಿದರು.
‘ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಅಳವಡಿಸಿದ ಸಿಟಿ ಸ್ಕ್ಯಾನರ್ ಸೇವೆಯನ್ನು ಬಂದ್ ಮಾಡಿದ್ದು ಸರಿಯಾದ ಕ್ರಮವಲ್ಲ. ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತ್ವರಿತವಾಗಿ ವೇತನ ನೀಡಿ ಸೇವೆ ಲಭ್ಯವಾಗುವಂತೆ ಮಾಡಬೇಕು. ವೈದ್ಯಾಧಿಕಾರಿಗಳು, ಜಿಲ್ಲಾಧಿಕಾರಿಗಳು ಸೇರಿ ಸಮಸ್ಯೆಯನ್ನು ಇತ್ಯರ್ಥ್ಯಗೊಳಿಸಿ ರೋಗಿಗಳಿಗೆ ಸೇವೆ ಒದಗಿಸಬೇಕು’ ಎಂದು ಹಿರಿಯ ವಕೀಲ ಮಹಾಂತೇಶ ಒತ್ತಾಯಿಸಿದ್ದಾರೆ.
‘ಸಿಬ್ಬಂದಿ ಬಿಡುಗಡೆ ಮಾಡಲಾಗಿದೆ’
‘ಸ್ಕ್ಯಾನರ್ ನಿರ್ವಾಹಕರ ಹುದ್ದೆ ಮತ್ತು ಇತರೆ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ವ್ಯವಸ್ಥೆ ಅಡಿ ನೇಮಕಗೊಂಡು ಕಾರ್ಯನಿರ್ವಹಿಸುತ್ತಿದ್ದು, ಖಾಸಗಿ ಸಂಸ್ಥೆಯವರು ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಹೊರಗುತ್ತಿಗೆ ನೌಕರರ ಸೇವೆಗೆ ಅವಕಾಶ ನೀಡದಿರಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಇದರಿಂದ ಸ್ಕ್ಯಾನರ್ ಸೇವೆಯನ್ನು ಸ್ಥಗಿತಗೊಳಿಸಿ ಸಿಬ್ಬಂದಿ ಬಿಡುಗಡೆ ಮಾಡಲಾಗಿದೆ’ ಎಂದು ಸ್ಥಳೀಯ ಆಡಳಿತ ವೈದ್ಯಾಧಿಕಾರಿ ಕೃಷ್ಣಾ ಹೊಟ್ಟಿನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.