ಮಂಗಳವಾರ, ನವೆಂಬರ್ 19, 2019
27 °C
ಉತ್ತಮ ಲಾಭದ ನಿರೀಕ್ಷೆಯಲ್ಲಿ ನರಸಾಪುರದ ಕೊಪ್ಪದ ಕುಟುಂಬ

ಯಲಬುರ್ಗಾ: ರೈತನಿಗೆ ಖುಷಿ ಕೊಟ್ಟ ಚೆಂಡು ಹೂವು

Published:
Updated:
Prajavani

ಯಲಬುರ್ಗಾ: ದಸರಾ, ದೀಪಾವಳಿ ಹಬ್ಬವೆಂದರೆ ಈ ಕುಟುಂಬಕ್ಕೆ ಎಲ್ಲಿಲ್ಲದ ಸಂಭ್ರಮ. ಲಕ್ಷಗಟ್ಟಲೆ ಹಣ ಎಣಿಸಿಕೊಳ್ಳುವ ಮೂಲಕ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ.

ತಾಲ್ಲೂಕಿನ ನರಸಾಪುರ ಗ್ರಾಮದ ಕೊಪ್ಪದ ಕುಟುಂಬವು ಪ್ರತಿವರ್ಷ ಈ ಎರಡು ಹಬ್ಬದ ಸಂದರ್ಭದಲ್ಲಿ ಕ್ವಿಂಟಾಲ್ ಗಟ್ಟಲೆ ಹೂವು ಮಾರಾಟ ಮಾಡಿ ಲಕ್ಷಗಟ್ಟಲೆ ಹಣ ಸಂಪಾದಿಸಿಕೊಳ್ಳುತ್ತಿದ್ದಾರೆ.

ಕಡಿಮೆ ಶ್ರಮ, ಖರ್ಚಿನೊಂದಿಗೆ ಹೆಚ್ಚಿನ ಆದಾಯ ತರುತ್ತಿರುವ ಹೂವಿನ ಕೃಷಿಯಲ್ಲಿಯೇ ತಮ್ಮ ಬಾಳು ಹಸನು ಮಾಡಿಕೊಳ್ಳುತ್ತಿರುವ ಕೊಪ್ಪದ ಕುಟುಂಬದ ಸದಸ್ಯರು ಸಾಲಮುಕ್ತರು.

ಈಶಪ್ಪ ಕುಟುಂಬದ ಪೂರ್ವ ಜನರಿಂದಲೂ ಕೃಷಿ ಚಟುವಟಿಕೆಯಲ್ಲಿಯೇ ತೊಡಗಿ ಕೊಂಡಿರುವ ಇವರು ಕೃಷಿಯಲ್ಲಿಯೇ ಹೆಚ್ಚು ಆದಾಯ ಮತ್ತು ನೆಮ್ಮದಿಯನ್ನು ಪಡೆದುಕೊಳ್ಳುತ್ತಾ ಸಾಗಿದ್ದಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಹಲವು ವೈವಿದ್ಯಮಯ ಬೆಳೆಗಳ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲಕ್ಷಗಟ್ಟಲೆ ಆದಾಯ ಸಂಪಾದಿಸುತ್ತಿರುವುದು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಕಳೆದ ಏಳೆಂಟು ವರ್ಷಗಳ ಹಿಂದೆ ಇತರರಂತೆ ಸಾಂಪ್ರದಾಯಿಕ ಬೆಳೆಗಳನ್ನೆ ಅವಲಂಬಿಸಿ ಲಾಭಕ್ಕಿಂತಲೂ ನಷ್ಟವನ್ನೇ ಹೆಚ್ಚಾಗಿ ಅನುಭವಿಸುತ್ತಿದ್ದ ಈ ಕುಟುಂಬ ಸುಖಕ್ಕಿಂತಲೂ ಕಷ್ಟಪಟ್ಟಿದ್ದೇ ಹೆಚ್ಚು. 

ವಾಣಿಜ್ಯ ಬೆಳೆಗಳತ್ತ ಒಲುವು ತೋರಿ ವ್ಯವಸ್ಥಿತ ಪರಿಶ್ರಮದಿಂದ ಆದಾಯ ಪಡೆಯುತ್ತಿದ್ದಾರೆ. 

ದಸರಾ ಮತ್ತು ದೀಪಾವಳಿ ಹಬ್ಬವನ್ನು ಗುರಿಯಾಗಿಟ್ಟುಕೊಂಡು ಮುಂಚಿನ ಮೂರು ತಿಂಗಳಿಂದ ಚೆಂಡು ಹೂವು ಬೆಳೆಯನ್ನು ಬೆಳೆಯಲು ಶುರು ಮಾಡುವ ಈ ಪ್ರಗತಿಪರ ರೈತಕುಟುಂಬ ಕೇವಲ ಎರಡು ಎಕರೆ ಜಮೀನಿನಲ್ಲಿ ಒಂದೂವರೆ ಲಕ್ಷ ಖರ್ಚು ಮಾಡಿ 6 ಲಕ್ಷಕ್ಕೂ ಅಧಿಕ ಆದಾಯ ಪಡೆದುಕೊಳ್ಳುತ್ತಿದ್ದಾರೆ.

ಹೈದರಾಬಾದ್‌ ನಿಂದ ಗುಣಮಟ್ಟದ ಬೀಜ ತಂದು ಸಸಿ ಮಾಡಿ ಎಕರೆಗೆ 10ಸಾವಿರ ಸಸಿಗಳನ್ನು ನೆಟ್ಟು ಅಭಿವೃದ್ಧಿಪಡಿಸುವ ಇವರು ನಂತರದ 60 ದಿನಗಳಲ್ಲಿ ಫಸಲು ಸಿದ್ದಗೊಳಿಸಿ ಮಾರುಕಟ್ಟೆಗೆ ರವಾನಿಸಲು ಸಿದ್ದಗೊಳಿಸುತ್ತಾರೆ.

‘ಗೋವಾ, ಸಿಂಧನೂರ, ರಾಯಚೂರ, ಹೊಸಪೇಟೆ, ಗದಗ ಹಾಗೂ ಇನ್ನಿತರ ನಗರಗಳಿಂದ ಜನರು ಬಂದು  ಖರೀದಿಸುತ್ತಾರೆ. ಇವರ ಹೂವು ಉತ್ಪನ್ನಕ್ಕೆ ಉತ್ತಮ ಬೇಡಿಕೆ ಇದೆ. ಒಂದು ಸಸಿಗೆ ₹ 4 ಖರ್ಚಾಗುತ್ತದೆ. ಅದು ಬೆಳೆದು ಸುಮಾರು ಅರ್ಧ ಕೆ.ಜಿಎಷ್ಟು ಹೂ ಇಳುವರಿ ಕೊಡುತ್ತದೆ. ಹೀಗೆ ಎರಡು ಎಕರೆಯಲ್ಲಿ ಸುಮಾರು 60 ರಿಂದ 70 ಕ್ವಿಂಟಲ್ ಹೂವು ಇಳುವರಿ ಬರುತ್ತದೆ. ಖರ್ಚು ತೆಗೆದು ₹ 5 ಲಕ್ಷ ಲಾಭ ನಿಶ್ಚಿತವಾಗಿ ಪಡೆಯುತ್ತಿದ್ದೇವೆ‘ ಎನ್ನುವುದು ರೈತ ಕೊಪ್ಪದ ಅನಿಸಿಕೆ.

‘ಸ್ಥಿರ ಗ್ರಾಹಕರಿರುವುದರಿಂದ ಹೂವುಗಳ ಮಾರಾಟದ ಬಗ್ಗೆ ಚಿಂತೆಯಿಲ್ಲ. ಹಾಗೆಯೇ ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ. ಕ್ರಮಬದ್ಧವಾಗಿ ನೀರು, ಔಷಧಿ ಹಾಗೂ ಗೊಬ್ಬರ ಸಿಂಪಡಿಸುತ್ತಿರುವುದರಿಂದ ಫಸಲು ಪಡೆದುಕೊಳ್ಳುವಲ್ಲಿ ಯಾವುದೇ ತೊಂದರೆಗಳು ಎದುರಾಗುವುದಿಲ್ಲ‘ ಎನ್ನುತ್ತಾರೆ ಅವರು.

‘ನಾವು ಖುಷಿಯಿಂದಲೇ ಕೃಷಿ ಯಲ್ಲಿ ತೊಡಗಿಸಿಕೊಂಡಿದ್ದೇವೆ. 20 ಎಕರೆ ಪ್ರದೇಶದಲ್ಲಿ ವಿವಿಧ ಹಣ್ಣು, ಹೂವು, ತರಕಾರಿ ಬೆಳೆಗಳನ್ನು ಬೆಳೆಯುವುದರಿಂದ ಕಾಲ ಕಾಲಕ್ಕೆ ಬದಲಿಸಿ ವಾತಾವರಣಕ್ಕೆ ಪೂರಕ ವಾಗಿ ಕೃಷಿ ಚಟುವಟಿಕೆಯಲ್ಲಿ ನಿರತರಾಗುವುದರಿಂದ ನಷ್ಟದ ಅನುಭವವಾಗಿಲ್ಲ‘ ಎಂಬುದು ಕುಟುಂಬದ ಸದಸ್ಯ ಹನಮಗೌಡ ಹೇಳುತ್ತಾರೆ.

*
ಅಲ್ಪ ಜಮೀನಿನಲ್ಲಿ ಹೆಚ್ಚಿನ ಆದಾಯ ತರಬಲ್ಲ ಬೆಳೆಗಳನ್ನು ಬೆಳೆಯಬಹುದು. ಶ್ರದ್ಧೆ, ಪರಿಶ್ರಮ ಹಾಗೂ ತಾಳ್ಮೆ ಅಗತ್ಯ.
-ಈಶಪ್ಪ ಕೊಪ್ಪದ, ಪ್ರಗತಿಪರ ರೈತ ನರಸಾಪುರ

ಪ್ರತಿಕ್ರಿಯಿಸಿ (+)