ಮಂಗಳವಾರ, ಮೇ 24, 2022
24 °C
ಸ್ಥಳಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ, ಕುಟುಂಬಕ್ಕೆ ಸಾಂತ್ವನ

ಮೂರು ಅಂಗಡಿ ಭಸ್ಮ: ಮಲಗಿದ್ದ ಯುವಕ ಸಜೀವ ದಹನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಲಾರಿ ಡಿಕ್ಕಿ ಹೊಡೆದಿದ್ದರಿಂದ ವಿದ್ಯುತ್‌ ತಂತಿ ತುಂಡಾಗಿ ಬೆಂಕಿ ಹೊತ್ತಿಕೊಂಡು, ಹಣ್ಣಿನ ಅಂಗಡಿಯಲ್ಲಿ ಮಲಗಿದ್ದ ಯುವಕ ವೀರೇಶ ಮುಂಡರಗಿ (18) ಸಜೀವ ದಹನವಾಗಿದ್ದಾರೆ.

ನಗರದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿಯ ಮೂರು ಅಂಗಡಿಗಳು ಭಸ್ಮವಾಗಿವೆ.  ಇಂದಿರಾ ಕ್ಯಾಂಟೀನ್‌ಗೆ ಹೊಂದಿಕೊಂಡಿರುವ ಶಾಲೆ ಆವರಣದಲ್ಲಿ ಮೂರು ಮಳಿಗೆಗಳಿವೆ. ಪಕ್ಕದಲ್ಲಿಯೇ ವಿದ್ಯುತ್‌ ಕಂಬ ಇದೆ. ಶನಿವಾರ ನಸುಕಿನ ಜಾವ 4 ಗಂಟೆ ಸುಮಾರಿಗೆ ಲಾರಿಯೊಂದು ಅಂಗಡಿಗೆ ಡಿಕ್ಕಿ ಹೊಡೆದಿದೆ. ವಿದ್ಯುತ್‌ ತಂತಿ ಹರಿದು ಬಿದ್ದು ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರು.

ಸುಟ್ಟ ಸ್ಥಿತಿಯಲ್ಲಿದ್ದ ಯುವಕನ ಮೃತದೇಹವನ್ನು ಹೊರತೆಗೆದ ಪೊಲೀಸರು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿ
ಸಿದರು. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

ಹಣ್ಣಿನ ಅಂಗಡಿ, ಪಾದರಕ್ಷೆ, ಗಡಿಯಾರ ದುರಸ್ತಿ ಮಾಡುವ ಅಂಗಡಿಗಳು ಭಸ್ಮವಾಗಿವೆ. ನಗರದ ಜನನಿಬಿಡ ಮುಖ್ಯರಸ್ತೆಯಲ್ಲಿಯೇ ಈ ಘಟನೆ ಸಂಭವಿಸಿದೆ. ಅಂಗಡಿ ಮುಂದೆಯೇ ಕಂಬದಲ್ಲಿ ವಿದ್ಯುತ್‌ ತಂತಿಗಳು ಜೋತಾಡುತ್ತಿದ್ದವು.

ಯುವಕ ವೀರೇಶ ಮುಂಡರಗಿ ಚಿಕ್ಕಪ್ಪ ನಿಂಗಜ್ಜ ಮುಂಡರಗಿ ಅವರಿಗೆ ಸೇರಿದ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತರ ಮನೆಗೆ ಮಲಗಲು ಹೋಗುತ್ತೇನೆ ಎಂದು ಹೇಳಿ ಅಂಗಡಿಯಲ್ಲಿ ಮಲಗಿದ್ದ ಎನ್ನಲಾಗಿದೆ.

ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಸುಟ್ಟ ಸ್ಥಿತಿಯಲ್ಲಿ ಇದ್ದ ಯುವಕನ ಶವ ಪತ್ತೆಯಾಗಿದೆ. ಬೆಳಿಗ್ಗೆ 9 ಗಂಟೆಯಾದರೂ ಯುವಕ ಮನೆಗೆ ಬಾರದೇ ಇದ್ದರಿಂದ ಸ್ನೇಹಿತರನ್ನು ವಿಚಾರಿಸಿ ಕುಟುಂಬದವರು ಪೊಲೀಸ್‌ ಠಾಣೆಗೆ ಬಂದು ವಿಚಾರಿಸಿ
ದಾಗ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ. ಯುವಕನ ತಾಯಿ ಮತ್ತು ಕುಟುಂಬ ಸದಸ್ಯರು ಸುಟ್ಟ ದೇಹ ನೋಡಿ ಅಂಗಡಿ ಎದುರಿನಲ್ಲಿ ಉರುಳಾಡಿ ಆಕ್ರಂದಿಸಿದ್ದು, ಮಮ್ಮಲ ಮರುಗುವಂತೆ ಮಾಡಿತು. ನಂತರ ಪೊಲೀಸರು ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ತೆಗೆದುಕೊಂಡು ಹೋದರು. ನಂತರ ಕುಟುಂಬಕ್ಕೆ ಹಸ್ತಾಂತರಿಸಿದರು.

ಪ್ರಮುಖ ರಸ್ತೆ ಬಳಿ ಈ ಘಟನೆ ನಡೆದಿದ್ದರಿಂದ ನೂರಾರು ಜನರ ನೆರೆದರು. ಸಂಚಾರ ವ್ಯವಸ್ಥೆ, ಜನರನ್ನು ನಿಯಂತ್ರಿಸಲು ಪೊಲೀಸರು ಪರದಾಡಿದರು. ಬೆಂಕಿ ಅವಘಢದಿಂದ ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಹಾಳಾಗಿವೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು