ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಬೆಳೆ ವಿಮೆ ಪಾವತಿಸುವಲ್ಲಿ ವಿಳಂಬ ಬೇಡ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
Last Updated 10 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಕೊಪ್ಪಳ: ರೈತರಿಗೆ ಬೆಳೆ ವಿಮೆ ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತದೆ. ಮಾಹಿತಿಯನ್ನು ಕೂಡಾ ಅಧಿಕಾರಿಗಳು ನೀಡುತ್ತಿಲ್ಲ. ಕೆಲವು ರೈತರಿಗೆ ಬಂದಿದೆ. ಅರ್ಧಕ್ಕಿಂತ ಹೆಚ್ಚು ಜನರಿಗೆ ಬಂದಿಲ್ಲ. ಕೃಷಿ ಹೊಂಡ ನಿರ್ಮಾಣದ ಕುರಿತು ಜಾಗೃತಿ ಮೂಡಿಸುತ್ತಿಲ್ಲ ಎಂದು ಕೃಷಿ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ಹರಿಹಾಯ್ದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಹನಮಂತಗೌಡ ಪಾಟೀಲ (ಚೆಂಡೂರ) ಮಾತನಾಡಿ, ತಾಲ್ಲೂಕುವಾರು ಪಟ್ಟಿಯನ್ನು ನೀಡುತ್ತಿಲ್ಲ. ಕಚೇರಿಯಲ್ಲಿ ಕುಳಿತು ಕಟಾವು ನಂತರ ಸಮೀಕ್ಷೆ ಮಾಡಲಾಗುತ್ತದೆ. ಗ್ರಾಮಗಳಿಗೆ ತೆರಳಿ ರೈತರ ಸ್ಥಿತಿಯನ್ನು ಅರಿಯಬೇಕು ಎಂದು ಕೃಷಿ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಇದಕ್ಕೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ ಶೇಖ್ ಪ್ರತಿಕ್ರಿಯಿಸಿ, 17 ಮತ್ತು18 ನೇ ಸಾಲಿನ ವಿಮಾ ಪರಿಹಾರ ಬಂದ ತಕ್ಷಣ ರೈತರಿಗೆ ನೀಡಲಾಗಿದೆ. ಕೆಲವು ರೈತರು ಮತ್ತೆ ತಪ್ಪು ಮಾಹಿತಿ ನೀಡಿದ್ದಾರೆ. ಇದರಿಂದ ಅವರ ಖಾತೆಗೆ ಹಣ ಜಮೆ ಆಗಿಲ್ಲ. ರೈತ ಸಂಪರ್ಕ ಕೇಂದ್ರಗಳಿಂದ ಮಾಹಿತಿ ತರಿಸಿಕೊಂಡು ರೈತರ ಪಟ್ಟಿ ತಯಾರಿಸಿ ನೀಡಲಾಗುವುದು ಎಂದು ಹೇಳಿದರು.

ಕೃಷಿ ಉಪಕರಣ ಖರೀದಿಗೆ ₹ 5.65 ಲಕ್ಷ ಹಣ ಬಂದಿದೆ. ಹಸೊರೆಲೆ ಗೊಬ್ಬರ, ಎರೆಗೊಬ್ಬರ ತಯಾರಿಕೆ ಘಟಕಕ್ಕೆ ₹ 49 ಲಕ್ಷ ವೆಚ್ಚವಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿ 17 ಸಾವಿರ ರೈತರು ತಪ್ಪು ಮಾಹಿತಿ ನೀಡಿದ್ದರಿಂದ ಹಣ ಬಂದಿಲ್ಲ. ಅಳವಂಡಿ ಭಾಗದ ರೈತರಿಗೆ ಹಣ ಜಮಾ ಆಗಿದೆ ಎಂದು ಹೇಳಿದರು.

ಪ್ರಸ್ತುತ ಜಿಲ್ಲೆಯಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಮಂಜುರಾದ 5 ಅಂಗನವಾಡಿ ಕಾಮಗಾರಿಗಳು ಅದರಲ್ಲಿ ನಾಲ್ಕು ಕಾಮಗಾರಿಗಳು ಪ್ರಾರಂಭದ ಹಂತದಲ್ಲಿವೆ. 2017-18ನೇ ಸಾಲಿನ ಸ್ವಚ್ಛ ಭಾರತ ಮಿಷನ್ (ಗ್ರಾ) ಹಾಗೂ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಒಗ್ಗೂಡಿಕೆಯಲ್ಲಿ ಜಿಲ್ಲೆಯಲ್ಲಿ ಅಂಗನವಾಡಿ ಶೌಚಾಲಯಗಳ ನಿರ್ಮಾಣ ಮಾಡುವುದಕ್ಕೆ 50 ಕಾಮಗಾರಿ ಕೈಗೊಳ್ಳಲಾಗಿತ್ತು. ಅದರಲ್ಲಿ 37 ಅಂಗನವಾಡಿ ಕಾಮಗಾರಿಗಳು ಪೂರ್ಣಗೊಂಡಿದ್ದು, 12 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರಡ್ಡಿ ಮಾತನಾಡಿ, 'ಜಿಲ್ಲೆಯಲ್ಲಿ ಇನ್ನು 120 ಅಂಗನವಾಡಿಗಳ ಅವಶ್ಯಕತೆ ಇದೆ. ಅಂಗನವಾಡಿ ನಿರ್ಮಾಣಕ್ಕೆ ಹೊಸ ಅನುದಾನ ಬಂದಿದೆ ಅದನ್ನು ಬಳಸಬೇಕು. ಕಟ್ಟಡ ನಿರ್ಮಿಸುವಾಗ ಕಿಚನ್ ಗಾರ್ಡ್‌ನ್ ಮತ್ತುಕೈ ತೊಳೆಯುವ ಬೇಸಿನ್ಆದ್ಯತೆ ನೀಡಬೇಕು'ಎಂದರು.

ಕುಡಿಯುವ ನೀರನ್ನು ಮುಂದಿನ ಬೇಸಿಗೆಗೆ ಉಳಿತಾಯವಾಗುವಂತೆ ಬಳಸಿ. ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ಮತ್ತು ಬಹುಗ್ರಾಮ ಕುಡಿಯುವ ನೀರು ಹಾಗೂ ಎಸ್.ಡಿ.ಪಿ. ಕುಡಿಯುವ ನೀರಿನ ಕಾಮಗಾರಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂಬರುವ ಬೇಸಿಗೆಗೆ ನೀರನ್ನು ಹೇಗೆ ಉಳಿತಾಯ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ ಮಾತನಾಡಿ, ಸರ್ಕಾರದಿಂದ ಆದೇಶ ಬಂದ ಮೇಲೆ ತಕ್ಷಣ ಭೂಸೇನಾ ನಿಗಮದಿಂದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಜಿ.ಪಂ.ಉಪ ಕಾರ್ಯದರ್ಶಿ ಎನ್.ಕೆ.ತೊರವಿ, ಯೋಜನಾ ನಿರ್ದೇಶಕ ರವಿ ಬಿಸರಳ್ಳಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT