ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಹುಡುಗಿಗೆ ನಾಲ್ಕು ಚಿನ್ನದ ಪದಕ

ಕೃಷಿ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವ ಸಮಾರಂಭ
Last Updated 9 ಮಾರ್ಚ್ 2019, 13:17 IST
ಅಕ್ಷರ ಗಾತ್ರ

ಶಿವಮೊಗ್ಗ: ದಾವಣಗೆರೆ ಶ್ರೀರಾಮ ಬಡಾವಣೆಯ ಸರ್ಕಾರಿ ನೌಕರ ದಂಪತಿ ಪುತ್ರಿ, ಹಿರಿಯೂರು ತೋಟಗಾರಿಕಾ ಕಾಲೇಜು ಬಿಎಸ್ಸಿ ವಿದ್ಯಾರ್ಥಿನಿ ಎಸ್‌.ವಿದ್ಯಾಶ್ರೀ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಧರಿಸಿದರು.

ತಂದೆಶಿವಣ್ಣ ಬಿಸಿಎಂ ಹಾಸ್ಟೆಲ್‌ನಲ್ಲಿ ಅಡುಗೆ ಸಹಾಯಕ. ತಾಯಿ ಶಕುಂತಲಾ ಶಿಕ್ಷಕಿ. ಎಸ್ಸೆಸ್ಸೆಲ್ಸಿವರೆಗೆ ಕನ್ನಡದಲ್ಲೇ ಓದಿ, ನಂತರ ವಿಜ್ಞಾನ ವಿಷಯ ಆಯ್ದುಕೊಂಡ ಈ ಹುಡುಗಿ ಪ್ರಸ್ತುತ ಗುಜರಾತ್‌ನ ನವಸಾರಿ ಕೃಷಿ ವಿದ್ಯಾಲಯದಲ್ಲಿ ಪುಷ್ಪ ಕೃಷಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗೆ ಸೇರಿದ್ದಾರೆ. ಪುಷ್ಪ ಕೃಷಿ ಮೂಲಕ ರೈತರ ಆರ್ಥಿಕ ಸ್ಥಿತಿಗತಿ ಸುಧಾರಿಸಬೇಕು. ರಫ್ತು ಉತ್ತೇಜಿಸಬೇಕು. ಅದಕ್ಕಾಗಿ ಬೇಡಿಕೆ ಇರುವ ಪುಷ್ಪ ತಳಿ ಅಭಿವೃದ್ಧಿಪಡಿಸಿ, ಲಾಭದಾಯಕ ಕೃಷಿ ಚಟುವಟಿಕೆ ಕೈಗೊಳ್ಳಲು ರೈತರಿಗೆ ನೆರವಾಗಬೇಕು ಎಂಬ ಧ್ಯೇಯ ವಿದ್ಯಾಶ್ರೀ ಅವರದು.

ಸ್ನಾತಕೋತ್ತರ ಪದವಿಯ ಕೃಷಿ ಕೀಟಶಾಸ್ತ್ರದಲ್ಲಿ ಎರಡು ಚಿನ್ನದ ಪದಕ ಪಡೆದ ದಾವಣೆಗೆರೆ ತಾಲ್ಲೂಕು ಹುಚ್ಚವ್ವನಹಳ್ಳಿಯ ಎನ್‌.ಮೇಘನಾ ಪ್ರಸ್ತುತ ಬೆಂಗಳೂರಿನ ಜಿಕೆವಿಕೆಯಲ್ಲಿ ಕಿರಿಯ ಸಂಶೋಧನಾರ್ಥಿಯಾಗಿ ಕೆಲಸ ಮಾಡುತ್ತಿದ್ದಾರೆ. ತಂದೆ ನಾಗೇಂದ್ರಪ್ಪ ಕೆಎಸ್‌ಎಫ್‌ಸಿಯಲ್ಲಿ ಉದ್ಯೋಗಿ,. ತಾಯಿ ಮಂಜುಳಾ ಗೃಹಿಣಿ.

ರೈತರು ಬೆಳೆಯುವ ಎಲ್ಲ ಬೆಳೆಗಳೂ ಕೀಟಬಾಧೆಗೆ ತುತ್ತಾಗದಂತೆ ತಳಿಗಳನ್ನು ಅಭಿವೃದ್ಧಿಪಡಿಸಬೇಕು. ಕೀಟಗಳ ಬಾಧೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎನ್ನುವುದು ಅವರ ಆಶಯ.

ಮೂಡಿಗೆರೆಯ ರಾಣಿ ಜಯದುರ್ಗಾ ನಾಯಕ್ ಅವರು ವಿಶ್ವವಿದ್ಯಾಲಯದ ಪದಕ ವಿಜೇತೆ. ತಂದೆ ನಾಮದೇವ ನಾಯ್ಕ ಟಿಂಬರ್ ರೈಟರ್. ತಾಯಿ ಸುವರ್ಣ ಶಿಕ್ಷಕಿ. ಪ್ರಸ್ತುತ ಎಂಎಸ್ಸಿ ಮಾಡುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಆಳವಾದ ಸಂಶೋಧನೆ ಕೈಗೊಳ್ಳಬೇಕು ಎನ್ನುವುದು ಅವರ ಕನಸು.

ಚಿಕ್ಕಮಗಳೂರಿನ ಸತ್ಯಹಳ್ಳಿಯ ಕೆ.ಎನ್. ಅಶ್ರೀತ್ ಕೃಷಿ ಕೀಟಶಾಸ್ತ್ರದಲ್ಲಿ ಪಿಎಚ್‌.ಡಿ. ಪಡೆದಿದ್ದಾರೆ. ಭತ್ತದ ಬೆಳೆಗೆ ಕೀಟಬಾಧೆ ಹರಡದಂತೆ ತಡೆಯುವುದು ಅವರ ಧ್ಯೇಯ. ತಂದೆ ನಾಗೇಗೌಡ, ತಾಯಿ ಪ್ರೇಮಾಕುಮಾರಿ ಕೃಷಿಕರು. ಜೀವನದಲ್ಲಿ ಹೆಸರಾಂತ ಕೃಷಿ ವಿಜ್ಞಾನಿಯಾಗಬೇಕು ಎನ್ನುವುದು ಅವರ ಜೀವನದ ಕನಸು.

ಒಟ್ಟು ಐವರು ತಲಾ ಎರಡು ಚಿನ್ನದ ಪದಕ, ನಾಲ್ವರು ಪಿಎಚ್‌.ಡಿ, 12 ವಿದ್ಯಾರ್ಥಿಗಳು ಸ್ನಾತಕೋತ್ತರ ವಿಭಾಗದಲ್ಲಿ ಬಂಗಾರದ ಪದಕ, ಮೂವರು ಪದವಿಯಲ್ಲಿ ರ್‍ಯಾಂಕ್‌ ಪಡೆದು ಪದಕ ಮುಡಿಗೇರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT