ಗುರುವಾರ , ನವೆಂಬರ್ 14, 2019
18 °C

ರಾಜ್ಯ ಒಲಿಂಪಿಕ್: ಜಿಲ್ಲೆಗೆ ಎಲ್ಲ ಕ್ರೀಡಾ ಸಾಮಗ್ರಿಗಳ ಕೊಡುಗೆ

Published:
Updated:
Prajavani

ಶಿವಮೊಗ್ಗ: ನವೆಂಬರ್ 23ರಿಂದ 30ರವರೆಗೆ ನಡೆಯುವ ರಾಜ್ಯ ಒಲಿಂಪಿಕ್ ಕ್ರೀಡಾಕೂಟದ ಬಳಿಕ ಎಲ್ಲ ಕ್ರೀಡಾ ಸಾಮಾಗ್ರಿಗಳನ್ನೂ ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ನೀಡಲಾಗುವುದು ಎಂದು ಕ್ರೀಡಾಸಚಿವ ಕೆ.ಎಸ್.ಈಶ್ವರಪ್ಪ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕ್ರೀಡಾಕೂಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಾಸ್ತವ್ಯ, ಊಟ ಉಪಾಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕಾಗಿದೆ. ಎಲ್ಲಾ ಕ್ರೀಡಾ ಸಂಸ್ಥೆಗಳು ಸಕ್ರಿಯವಾಗಿ ಭಾಗವಹಿಸಬೇಕು. ಜವಾಬ್ದಾರಿ ವಹಿಸಿಕೊಂಡು ಕ್ರೀಡಾಕೂಟ ಯಶಸ್ವಿಗೊಳಿಸಬೇಕು. ಕ್ರೀಡಾಕೂಟದ ಆಯೋಜನೆಗೆ ಪೂರ್ವದಲ್ಲಿ ಕ್ರೀಡಾಂಗಣ ಸಜ್ಜುಗೊಳಿಸಬೇಕು. ದುರಸ್ತಿ ಕಾರ್ಯಗಳಿದ್ದರೆ ತಕ್ಷಣ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.

ರಾಜ್ಯ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಒಟ್ಟು 25 ವಿವಿಧ ಕ್ರೀಡಾಸ್ಪರ್ಧೆ ಆಯೋಜಿಸಲಾಗುತ್ತಿದೆ. 4 ಸಾವಿರ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜಿಲ್ಲಾ ಹಾಗೂ ಕೆಲವು ತಾಲ್ಲೂಕು ಕೇಂದ್ರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಅಥ್ಲೆಟಿಕ್ಸ್, ಸ್ವಿಮ್ಮಿಂಗ್, ರೆಸ್ಲಿಂಗ್, ಆರ್ಚರಿ, ಫೆನ್ಸಿಂಗ್, ಸೈಕ್ಲಿಂಗ್, ಜೂಡೋ, ಹಾಕಿ, ಬ್ಯಾಡ್ಮಿಂಟನ್, ನೆಟ್‌ಬಾಲ್, ಬಾಲ್‌ ಬ್ಯಾಡ್ಮಿಂಟನ್ ಸೇರಿದಂತೆ 25 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ನೆಹರು ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ, ಕೃಷಿ ವಿಶ್ವವಿದ್ಯಾಲಯ, ಪೆಸೆಟ್ ಕಾಲೇಜು, ಡಿವಿಎಸ್ ಕಾಲೇಜು, ಅಕ್ಷರ ಒಳಾಂಗಣ ಕ್ರೀಡಾಂಗಣಗಳಲ್ಲಿ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವಿವರ ನೀಡಿದರು.

ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಆಯುಕ್ತ ಶ್ರೀನಿವಾಸ್ ಮಾತನಾಡಿ, ಶಿವಮೊಗ್ಗದಲ್ಲಿ ಕ್ರೀಡಾಕೂಟ ಆಯೋಜನೆಯಿಂದ ಸ್ಥಳೀಯವಾಗಿ ಕ್ರೀಡಾ ಮೂಲಸೌಕರ್ಯಗಳ ಉನ್ನತೀಕರಣ ಸಾಧ್ಯ. ಸ್ಥಳೀಯ ಕ್ರೀಡಾಪಟುಗಳ ಭವಿಷ್ಯದ ದೃಷ್ಟಿಯಿಂದ ಇದೊಂದು ಉತ್ತಮ ಅವಕಾಶ ಎಂದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾತನಾಡಿ, ಕ್ರೀಡಾಪಟುಗಳ ವಾಸ್ತವ್ಯಕ್ಕಾಗಿ ಸಿದ್ಧತೆ ನಡೆದಿದೆ. ಶಿವಮೊಗ್ಗ ನಗರದಲ್ಲಿ 450, ಸಾಗರದಲ್ಲಿ 300 ಹಾಗೂ ಭದ್ರಾವತಿಯಲ್ಲಿ 100 ಹೊಟೇಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹಾಸ್ಟೆಲ್‌ಗಳು, ಕಲ್ಯಾಣಮಂದಿರಗಳು ಸೇರಿದಂತೆ ವಾಸ್ತವ್ಯಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ, ಶಾಸಕ ಅಶೋಕ ನಾಯ್ಕ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ಕರ್ನಾಟಕ ರಾಜ್ಯ ಒಲಿಂಪಿಕ್ ಸಂಸ್ಥೆ ಕಾರ್ಯದರ್ಶಿ ಅನಂತರಾಜು, ಕೆಸಿಎ ನಿರ್ದೇಶಕ ಡಿ.ಎಸ್.ಅರುಣ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)