ಮಂಗಳವಾರ, ಏಪ್ರಿಲ್ 7, 2020
19 °C

ಸಾಗರ | ಮಸೀದಿ ಕಟ್ಟಡ ನವೀಕರಣ ವಿವಾದ: ಲಾಠಿ ಪ್ರಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಇಲ್ಲಿನ ಗಣಪತಿ ಕೆರೆ ದಂಡೆಯ ಮೇಲಿರುವ ಜಾಮಿಯಾ ಮಸೀದಿ ಕಟ್ಟಡ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಭಾನುವಾರ ಹಿಂದೂ–ಮುಸ್ಲಿಮರ ನಡುವೆ ಘರ್ಷಣೆ ನಡೆದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.

ಒಂದು ಹಂತದಲ್ಲಿ ಎರಡೂ ಗುಂಪುಗಳಲ್ಲಿದ್ದ ಜನರು ಪರಸ್ಪರ ಕೈಕೈ ಮಿಲಾಯಿಸಲು ಮುಂದಾಗಿ ಕಲ್ಲು ತೂರಾಟ ನಡೆಸಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಿದರು.

ಜಾಮಿಯಾ ಮಸೀದಿ ಕಟ್ಟಡದ ನವೀಕರಣ ಕಾಮಗಾರಿಯನ್ನು ನಿಯಮಗಳನ್ನು ಉಲ್ಲಂಘಿಸಿ ನಡೆಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಾಸಕ ಎಚ್.ಹಾಲಪ್ಪ ಹರತಾಳು ಅಧ್ಯಕ್ಷತೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಸಭೆಯನ್ನು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಚೇರಿಯಲ್ಲಿ ಮಾತುಕತೆ ನಡೆಯುತ್ತಿರುವ ಸಂದರ್ಭದಲ್ಲೇ ಅತ್ತ ಮಸೀದಿಯ ಎದುರು ಎರಡೂ ಸಮುದಾಯದವರು ಸೇರಿದ್ದರು. ಮಸೀದಿ ಹಾಗೂ ಗಣಪತಿ ದೇವಸ್ಥಾನದ ನಡುವೆ ಇರುವ ಚರಂಡಿಯನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ ಒಂದು ಗುಂಪಿನ ಜನರು ಚರಂಡಿಯಲ್ಲಿದ್ದ ಮಣ್ಣನ್ನು ತೆಗೆಯಲು ಮುಂದಾದರು. ಇದನ್ನು ಮತ್ತೊಂದು ಗುಂಪಿನವರು ವಿರೋಧಿಸಿದರು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಾತುಕತೆಯಲ್ಲಿ ಪಾಲ್ಗೊಂಡವರು ಸ್ಥಳಕ್ಕೆ ಆಗಮಿಸಿ ಒಪ್ಪಂದದ ಬಗ್ಗೆ ವಿವರಿಸಲು ಮುಂದಾದಾಗ ಒಂದು ಗುಂಪಿನವರು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿದ ಮತ್ತೊಂದು ಗುಂಪು ಪ್ರತಿಯಾಗಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತ ದೇಶದ್ರೋಹಿಗಳನ್ನು ಬಂಧಿಸಿ ಎಂದು ಆಗ್ರಹಿಸಿತು. ಈ ನಡುವೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು