ಭಾನುವಾರ, ಡಿಸೆಂಬರ್ 8, 2019
19 °C
ಮಾಗಡಿಯ ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕಿ ಡಾ.ಎನ್‌.ಆರ್‌.ಲಲಿತಾಂಬ

‘ಬಾಗಿಲಿಲ್ಲದ ದೇಗುಲ ನಿರ್ಮಾಣಕ್ಕೆ ಯತ್ನಿಸಿದ ವ್ಯಕ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮಾಗಡಿ: ಬಾಗಿಲುಗಳೆ ಇಲ್ಲದ ದೇಗುಲಗಳನ್ನೂ, ತಾರತಮ್ಯ ರಹಿತ ಸಮಾಜ ನಿರ್ಮಿಸಲು ಯತ್ನಿಸಿದ ಸಹಜ ಸರಳ ವ್ಯಕ್ತಿ ದಾರ್ಶನಿಕ ಸಂತ ಕನಕದಾಸರ ಕೀರ್ತನೆಗಳು ಎಲ್ಲರಿಗೂ ಮಾರ್ಗದರ್ಶಿ ಸೂತ್ರಗಳಾಗಿವೆ ಎಂದು ಕನ್ನಡ ಪ್ರಾಧ್ಯಾಪಕಿ ಡಾ.ಎನ್‌.ಆರ್‌.ಲಲಿತಾಂಬ ತಿಳಿಸಿದರು.

ನಾಡಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಅಂಬೇಡ್ಕರ್ ಭವನದಲ್ಲಿ ನಡೆದ ದಾಸಶ್ರೇಷ್ಠ ಕನಕದಾಸರ 531ನೇ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ನೊಂದವರ ಧ್ವನಿಯಾಗಿದ್ದ ಕನಕದಾಸರು, ಸತ್ಯ ಎಲ್ಲರ ಸ್ವತ್ತು, ಎಲ್ಲರಿಗೂ ಸಾಮರ್ಥ್ಯವಿದೆ. ಹುಟ್ಟಿನಿಂದ ಯಾರನ್ನು ಅವಮಾನಿಸದೆ, ಸರ್ವರಿಗೂ ಸಮಾನ ಅವಕಾಶ ನೀಡಬೇಕು.

ಆತನೊಲಿದ ಮೇಲೆ ಯಾತರ ಕುಲವಯ್ಯ, ದೇವರು, ಧರ್ಮ, ಜಾತಿಯ ಹೆಸರಿನಲ್ಲಿ ಮಾನವ ಮಾನವರ ನಡುವೆ ಕಂದಕ ಸೃಷ್ಟಿಸುವುದನ್ನು ಅವರು ವಿರೋಧಿಸಿದ್ದರು. ದೇವರ ಹೆಸರಿನಲ್ಲಿ ದೇವದಾಸಿ, ಬೆತ್ತಲ ಸೇವೆ ಮಾಡುವುದನ್ನು ಅವರು ವಿರೋಧಿಸಿದ್ದರು.

ವ್ಯಕ್ತಿಗಳ ನಡುವಿನ ಮಾನಸಿಕ ಅಡ್ಡಗೋಡೆಯನ್ನು ಒಡೆಯಲು ಯತ್ನಿಸಿದರು. ಸಾಮಾಜಿಕ ನ್ಯಾಯ, ಮೂಢನಂಬಿಕೆ, ಅಧಿಕಾರಶಾಹಿ ಪದ್ಧತಿಯನ್ನು ದೂರಮಾಡಿ ರಾಜರ ಸ್ಥಾನದಲ್ಲಿ ದೇವರನ್ನು ಕೂರಿಸಿ, ಅಂತರಂಗ ಮತ್ತು ಬಹಿರಂಗದಲ್ಲಿ ಸಮಾನತೆ ಕಾಣಲು ಸರ್ವರ ಏಳಿಗೆಗೆ ಶ್ರಮಿಸಿದ್ದರು ಎಂದು ವಿವರಿಸಿದರು.

ಕನಕದಾಸರು ರಚಿಸಿರುವ ನಳಚರಿತ್ರೆ, ಹರಿಭಕ್ತಿಸಾರ, ಮೋಹನ ತರಂಗಿಣಿ, ರಾಮಧಾನ್ಯ ಚರಿತೆ ಕೃತಿಗಳನ್ನು ಕಡ್ಡಾಯವಾಗಿ ಓದುವಂತೆ ಅವರು ತಿಳಿಸಿದರು.

ಶಾಸಕ ಎ.ಮಂಜುನಾಥ ಮಾತನಾಡಿ, ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಯತ್ನಿಸಿದ ಕನಕದಾಸರು, ಸ್ವಾಸ್ಥ್ಯ ಸಮಾಜ ನಿರ್ಮಿಸಲು ಮುಂದಾಗಿದ್ದರು ಎಂದರು.

‘ಉತ್ತರ ಕರ್ನಾಟಕದಲ್ಲಿ ಒಳ್ಳೆಯ ಕೆಲಸ ಮಾಡಿಸುವಾಗ ಹಾಲುಮತದವರಿಂದ ಆರಂಭಿಸುವ ವಾಡಿಕೆ ಇದೆ. ನನ್ನ ರಾಜಕೀಯ ಗುರು ಎಚ್‌.ಎಂ.ರೇವಣ್ಣ ಅವರ ಅಣತಿಯಂತೆ ಕುರುಬರ ಸಂಘದ ವತಿಯಿಂದ ನಿರ್ಮಿಸಲಿರುವ ಪಾಲಿಟೆಕ್ನಿಕ್‌ಗೆ ವೈಯಕ್ತಿಕವಾಗಿ ₹5 ಲಕ್ಷ ನೀಡುತ್ತೇನೆ. ಕುರುಬ ಸಮುದಾಯದವರ ಅಭಿವೃದ್ಧಿಗೆ ಸವಲತ್ತು ಕೊಡಿಸುತ್ತೇನೆ’ ಎಂದರು.

ರಾಣೋಜಿಪಾಳ್ಯ ಮಠದ ಚಿದಾನಂದ ಸ್ವಾಮಿ ಮಾತನಾಡಿ ದೇವರ ನಾಮಜಪದಿಂದ ಪರಮಾನಂದ ದೊರೆಯಲಿದೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವರಾಜ್‌, ಉಪಾಧ್ಯಕ್ಷೆ ಅಂಬಿಕಾ ನರಸಿಂಹ ಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌, ತಹಶೀಲ್ದಾರ್‌, ಎನ್‌.ರಮೇಶ್‌, ತಾ.ಪಂ.ಇಒ ಚಂದ್ರು, ಬಿಇಒ ಸಿದ್ದೇಶ್ವರ.ಎಸ್‌, ರಾಜ್ಯ ಸಹಕಾರಿ ಮಹಾಮಂಡಲದ ನಿರ್ದೇಶಕ ಕೆ.ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷ ಎಚ್‌.ಆರ್‌.ಮಂಜುನಾಥ್‌, ಸದಸ್ಯರಾದ ಎಂ.ಎನ್‌.ಮಂಜುನಾಥ, ಬಾಲರಘು, ತಾಲ್ಲೂಕು ಜೆಡಿಎಸ್‌ ಅಧ್ಯಕ್ಷ ಎಂ.ರಾಮಣ್ಣ, ಹಾಲುಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಪ್ರಗತಿಪರ ಹೋರಾಟಗಾರರಾದ ವನಜ, ಕಲ್ಕೆರೆ ಶಿವಣ್ಣ, ಜಿ.ಕೃಷ್ಣ, ಡಿ.ಜಿ.ಕುಮಾರ್‌, ಹನುಮಾಪುರದ ಚಿಕ್ಕಣ್ಣ, ಸಿಪಿಐ.ಶಬರೀಶ್‌, ಪುರಸಭೆ ಮುಖ್ಯಾಧಿಕಾರಿ ನಟರಾಜ್‌ ಕನಕದಾಸರ ಜೀವನ ಚರಿತ್ರೆಯನ್ನು ಕುರಿತು ಮಾತನಾಡಿದರು.

ಹಿರಿಯ ವಕೀಲ ಚಕ್ರಬಸವಯ್ಯ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಸಿ.ರಾಜಣ್ಣ, ಕಾರ್ಯದರ್ಶಿ ಎಚ್‌. ಶಿವಕುಮಾರ್‌, ಉಪಾಧ್ಯಕ್ಷ ಎಚ್‌.ಬಿ.ಕೃಷ್ಣಪ್ಪ, ಕಾನೂನು ಸಲಹೆಗಾರ ರಾಜಯ್ಯ, ಹಾಲುಮತ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರೇಶ್‌, ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್‌.ನಿರಂಜನ್‌, ಗೌರವಾಧ್ಯಕ್ಷ ಚಂದ್ರಪ್ಪ, ಅಧ್ಯಕ್ಷ ಧನಂಜಯ, ಉಪಾಧ್ಯಕ್ಷ ಉಮೇಶ್‌ ಹಾಗೂ ಸಮಾಜದ ಮುಖಂಡರು ವೇದಿಕೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು