ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ ಜಿಲ್ಲೆಯಲ್ಲಿ 1 ಲಕ್ಷ ಅನಕ್ಷರಸ್ಥರು

ಪ್ರಸಕ್ತ ವರ್ಷ 37,160 ಅನಕ್ಷರಸ್ಥರಿಗೆ ಅಕ್ಷರ ಕಲಿಸುವ ಗುರಿ
Published 21 ಜೂನ್ 2024, 7:24 IST
Last Updated 21 ಜೂನ್ 2024, 7:24 IST
ಅಕ್ಷರ ಗಾತ್ರ

ಮಂಡ್ಯ: ‘ಎಲ್ಲರಿಗೂ ಶಿಕ್ಷಣ’ ನೀಡಬೇಕು ಎಂಬ ಉದ್ದೇಶದಿಂದ ಓದು–ಬರಹ ಬಾರದ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿಲು ಸರ್ಕಾರ ಸಾಕ್ಷರತಾ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಹೀಗಿದ್ದರೂ, ಮಂಡ್ಯ ಜಿಲ್ಲೆಯಲ್ಲಿ ಇನ್ನೂ 1.01 ಲಕ್ಷ ಅನಕ್ಷರಸ್ಥರು ಇದ್ದಾರೆ. 

ಜಿಲ್ಲೆಯಲ್ಲಿ ಮಂಡ್ಯ ತಾಲ್ಲೂಕಿನಲ್ಲೇ ಅತಿ ಹೆಚ್ಚು (24,339) ಅನಕ್ಷರಸ್ಥರು ಇದ್ದಾರೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿ ಮದ್ದೂರು ಮತ್ತು ನಾಗಮಂಗಲ ತಾಲ್ಲೂಕುಗಳಿವೆ. ಶ್ರೀರಂಗಪಟ್ಟಣ ಅತಿ ಕಡಿಮೆ (5,124) ಅನಕ್ಷರಸ್ಥರನ್ನು ಹೊಂದಿರುವ ತಾಲ್ಲೂಕು ಎನಿಸಿದೆ. 

ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲೇ ಅತಿ ಹೆಚ್ಚು ಅನಕ್ಷರಸ್ಥರು ಇದ್ದಾರೆ. ಅದರಲ್ಲೂ ಪುರುಷರಿಗಿಂತ ಮಹಿಳೆಯರಲ್ಲೇ ‘ಸಾಕ್ಷರತೆ’ಯ ಕೊರತೆ ಹೆಚ್ಚು ಕಂಡುಬಂದಿದೆ. ಬಡತನ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಿಗದ ಆದ್ಯತೆ ಕಾರಣಗಳಿಂದ ಮಹಿಳೆಯರು ಅಕ್ಷರವಂಚಿತರಾಗಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು. 

ನವಸಾಕ್ಷರರಾದ 4 ಲಕ್ಷ ಮಂದಿ:

2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ 1,95,138 ಪುರುಷರು ಮತ್ತು 3,14,471 ಮಹಿಳೆಯರು ಸೇರಿದಂತೆ ಒಟ್ಟು 5,09,609 ಅನಕ್ಷರಸ್ಥರಿದ್ದರು. ನಿರಂತರವಾಗಿ ನಡೆದ ಸಾಕ್ಷರತಾ ಕಾರ್ಯಕ್ರಮಗಳ ಪರಿಣಾಮ 2022–23ನೇ ಸಾಲಿನವರೆಗೆ 1,46,900 ಪುರುಷರು ಮತ್ತು 2,61,088 ಮಹಿಳೆಯರು ಸೇರಿದಂತೆ ಒಟ್ಟು 4,07,988 ಮಂದಿ ‘ನವಸಾಕ್ಷರ’ರಾದರು. 

ನಗರ ಮತ್ತು ಗ್ರಾಮೀಣ ಪ್ರದೇಶದ ಮಹಿಳಾ ಮತ್ತು ಹಿಂದುಳಿದ ವರ್ಗಗಳ ಸಾಕ್ಷರತಾ ಪ್ರಮಾಣ ಹೆಚ್ಚಿಸಲು 15 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ‘ಎಲ್ಲರಿಗೂ ಶಿಕ್ಷಣ’ ಶೀರ್ಷಿಕೆಯಡಿ ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿದೆ. ಜಿಲ್ಲಾನುದಾನ, ರಾಜ್ಯಾನುದಾನ ಮತ್ತು ಕೇಂದ್ರಾನುದಾನದಿಂದ ಅನುಮೋದಿಸಿರುವ ಸಾಕ್ಷರತಾ ಕಾರ್ಯಕ್ರಮಗಳು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ನಿರ್ದೇಶನದ ಮೇರೆಗೆ ನಡೆಯುತ್ತಿವೆ. 

1858 ಕಲಿಕಾ ಕೇಂದ್ರ:

‘ಜಿಲ್ಲೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಯಂಸೇವಕರಿಂದ 1858 ಕಲಿಕಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾಕ್ಷರತಾ ಕಾರ್ಯಕ್ರಮಗಳಲ್ಲಿ ಶಿಕ್ಷಕರು, ಪದವೀಧರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಸ್ವಯಂಸೇವಕರಾಗಿ ವಯಸ್ಕ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದಾರೆ’ ಎಂದು ಕಾರ್ಯಕ್ರಮ ಸಹಾಯಕರಾದ ಮಮತಾ ಮಾಹಿತಿ ನೀಡಿದರು. 

‘ನವ ಭಾರತ ಸಾಕ್ಷರರು’ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ದೇಶದಾದ್ಯಂತ ಜಾರಿಗೊಳಿಸಿದೆ. 2027ರ ಒಳಗಾಗಿ ಇಡೀ ದೇಶವನ್ನು ಅನಕ್ಷರತೆಯಿಂದ ಮುಕ್ತಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 37,160 ಅನಕ್ಷರಸ್ಥರನ್ನು ನವ ಸಾಕ್ಷರರನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕೆ.ರಾಮಲಿಂಗಯ್ಯ ತಿಳಿಸಿದರು.

ಮಹಿಳೆಯರಲ್ಲೇ ಹೆಚ್ಚು ಅನಕ್ಷರತೆ 2027ರೊಳಗೆ ಅನಕ್ಷರತೆ ಮುಕ್ತ ಗುರಿ ಜಿಲ್ಲೆಯಲ್ಲಿ 1858 ಕಲಿಕಾ ಕೇಂದ್ರಗಳು 
ಅಕ್ಷರಾಭ್ಯಾಸ ಮಾಡಿಸಿದ್ದ ಸರ್‌ಎಂವಿ!
ವಯಸ್ಕರ ಶಿಕ್ಷಣ ಇಲಾಖೆಗೆ 110 ವರ್ಷಗಳ ಇತಿಹಾಸವಿದೆ. ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ ದಿವಾನರಾಗಿದ್ದ ಎಂ.ವಿಶ್ವೇಶ್ವರಯ್ಯನವರು ತಮ್ಮ ಬೈಸಿಕಲ್‌ ಮೂಲಕ ಗ್ರಾಮಗಳಿಗೆ ಹೋಗಿ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸುತ್ತಿದ್ದರು. ಅಲ್ಲಿಂದ ಇಲ್ಲಿಯವರೆಗೆ ವಯಸ್ಕರಿಗೆ ಶಿಕ್ಷಣ ನೀಡುವ ಸಾಕ್ಷರತಾ ಕಾರ್ಯಕ್ರಮಗಳು ಸರ್ಕಾರದ ವತಿಯಿಂದ ಒಂದಿಲ್ಲೊಂದು ಹೆಸರಿನಲ್ಲಿ ನಡೆಯುತ್ತಲೇ ಇವೆ.   ‘ಹೆಣ್ಣುಮಕ್ಕಳ ಸಾಕ್ಷರತಾ ಕಡಿಮೆ ಇರುವ ಮಂಡ್ಯ ಜಿಲ್ಲೆಯಲ್ಲಿ ಸಂಸದರಾಗಿದ್ದ ಜಿ.ಮಾದೇಗೌಡ ಅವರ ಒತ್ತಾಸೆಯಿಂದ ‘ಜಿಲ್ಲಾ ಸಾಕ್ಷರ ಸಮಿತಿ ರಚನೆಗೊಂಡಿತು. ‘ಸಾಕ್ಷರ ಜ್ಯೋತಿ’ ಹೆಸರಿನಲ್ಲಿ ಆಂದೋಲನವಾಗಿ ರೂಪುಗೊಂಡಿತು. ನಂತರ ‘ಸವಿನುಡಿ’ ಪಠ್ಯವಸ್ತು ರಚನೆಯಾಯಿತು. ಅಕ್ಷರ ಜಾಗೃತಿ ಮಂಡ್ಯ ಜನತೆಯ ಪ್ರಗತಿಗೆ ಸಹಕಾರಿಯಾಯಿತು’ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.
‘ಸ್ವಯಂ ಸೇವಕರಿಗೆ ಉತ್ತಮ ಗೌರವಧನ ನೀಡಲಿ’
‘ಉತ್ತಮ ಗೌರವಧನ ಸಿಗದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಸೇವಕರು ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸಲು ಮುಂದೆ ಬರುತ್ತಿಲ್ಲ. ಅನುದಾನದ ಕೊರತೆಯಿಂದ ಪರಿಣಾಮಕಾರಿಯಾಗಿ ಸಾಕ್ಷರತಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ವಲಸೆ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಕೇರಳ ಮಾದರಿ ಶಿಕ್ಷಣ ವ್ಯವಸ್ಥೆ ಜಾರಿಗೊಂಡರೆ ಶೇ 100ರಷ್ಟು ಸಾಕ್ಷರತೆ ಸಾಧಿಸಬಹುದು’ ಎನ್ನುತ್ತಾರೆ ಜನವಾದಿ ಮಹಿಳಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT