ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ಪ್ರತಿದಿನ 25 ಕೆಎಲ್‌ ಆಮ್ಲಜನಕ ಅಗತ್ಯ

ಪ್ರಾಣವಾಯು ಪೂರೈಕೆ ವ್ಯತ್ಯಯ ಸರಿಪಡಿಸಲು ಸಿಎಂಗೆ ಮನವಿ; ಸಚಿವ ಕೆ.ಸಿ.ನಾರಾಯಣಗೌಡ
Last Updated 8 ಮೇ 2021, 5:07 IST
ಅಕ್ಷರ ಗಾತ್ರ

ಮಂಡ್ಯ: ‘ಜಿಲ್ಲೆಗೆ ಪ್ರತಿದಿನ 26 ಕಿಲೋ ಲೀಟರ್‌ ಆಮ್ಲಜನಕದ ಅವಶ್ಯಕತೆ ಇದೆ. ಆದರೆ, ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸಮಸ್ಯೆ ಸರಿಪಡಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಹೇಳಿದರು.

ಕೋವಿಡ್‌ ನಿಯಂತ್ರಣ ಸಂಬಂಧ ಶುಕ್ರವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

‘ಮಿಮ್ಸ್‌ ಆಸ್ಪತ್ರೆಯಲ್ಲಿ 13 ಕಿಲೋ ಲೀಟರ್‌ ಸಾಮರ್ಥ್ಯದ ಆಮ್ಲಜನಕ ಸಂಗ್ರಹ ಘಟಕವಿದ್ದು, ಅದರಲ್ಲಿ 10 ಕೆಎಲ್‌ ಮಾತ್ರ ಬರುತ್ತಿದೆ. ತಾಲ್ಲೂಕು ಆಸ್ಪತ್ರೆಗಳಿಗೆ ನಿತ್ಯ 400 ಜಂಬೋ ಸಿಲಿಂಡರ್‌ ಅವಶ್ಯಕತೆ ಇದೆ. ಸದ್ಯ 300 ಸಿಲಿಂಡರ್‌ಗಳಲ್ಲಿ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ಮಾದೇಗೌಡ ಆಸ್ಪತ್ರೆ, ಸ್ಯಾಂಜೋ ಆಸ್ಪತ್ರೆಗೆ ನಿತ್ಯ ತಲಾ 2 ಕೆಎಲ್‌ ಬೇಕಾಗಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿ ನಿತ್ಯ 25 ಕೆಎಲ್‌ ಆಮ್ಲಜನಕ ಬೇಕಾಗಿದೆ’ ಎಂದರು.

‘ಕೊಯಮತ್ತೂರಿನ ಕಂಪನಿ ಯೊಂದರ ಜೊತೆ ಮಾತುಕತೆ ನಡೆಸಲಾ ಗಿದ್ದು, ನಿತ್ಯ 6–8 ಕೆಎಲ್‌ ಆಮ್ಲಜನಕ ಪೂರೈಸಲು ಒಪ್ಪಿದ್ದಾರೆ. ಆದರೆ, 2 ತಿಂಗಳು ಸಮಯಾವಕಾಶ ಕೋರಿದ್ದಾರೆ. ನಾವು, ಶಾಸಕರು ಸೇರಿ ಬೇರೆಬೇರೆ ಕಂಪನಿಗಳಿಂದ ಆಮ್ಲಜನಕ ತರಿಸಲು ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಮಿಮ್ಸ್‌ ಆಸ್ಪತ್ರೆಯಲ್ಲಿ ಸದ್ಯ 306 ಹಾಸಿಗೆಗಳಿಗೆ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ 150 ಹೆಚ್ಚುವರಿ ಹಾಸಿಗೆಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ. ಆದರೆ, ಆಮ್ಲಜನಕ ಕೊರತೆ ಇರುವ ಕಾರಣ ಅಲ್ಲಿಗೆ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರೋಗಿಗಳನ್ನು ದಾಖಲಿಸಿಕೊಂಡು ಅಪಾಯ ಎದುರಿಸುವುದು ಬೇಡ ಎಂಬ ಕಾರಣಕ್ಕೆ ಬೇರೆ ಬೇರೆ ಆಸ್ಪತ್ರೆಗೆ ರೋಗಿಗಳನ್ನು ದಾಖಲಿಸಿ ನಿಭಾಯಿಸುತ್ತಿದ್ದೇವೆ’ ಎಂದರು.

‘ಆರೋಗ್ಯ ಸಚಿವರು ಈಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭ ದಲ್ಲಿ ಹೆಚ್ಚುವರಿಯಾಗಿ ಆಮ್ಲಜನಕ ಪೂರೈಸುವುದಾಗಿ ಭರವಸೆ ನೀಡಿದ್ದರು. ಹಾಗಾಗಿ ನಾವು ತರಾತುರಿಯಲ್ಲಿ 150 ಹಾಸಿಗೆಗಳನ್ನು ಸಿದ್ಧ ಮಾಡಿಕೊಂಡೆವು. ಆದರೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಕಾರಣ ಹೊಸ ವಾರ್ಡ್‌ ಆರಂಭಿಸಲು ಸಾಧ್ಯವಾಗುತ್ತಿಲ್ಲ.

‘ಜಿಲ್ಲೆಯ ಆಮ್ಲಜನಕ ಅವಶ್ಯಕತೆ ಕುರಿತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ನಮ್ಮ ಜಿಲ್ಲೆಗೆ ಹೆಚ್ಚುವರಿ ಆಮ್ಲಜನಕ ಪೂರೈಸುವಂತೆ ಮನವಿ ಮಾಡಲಾಗುವುದು’ ಎಂದರು.

‘ಕೋವಿಡ್‌ ಪರೀಕ್ಷೆಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಜಿಲ್ಲಾಸ್ಪತ್ರೆ ಸೇರಿ ಎಲ್ಲಾ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ರೈಲು ನಿಲ್ದಾಣದಲ್ಲಿ ನಡೆಯುತ್ತಿದ್ದ ಕೋವಿಡ್‌ ಪರೀಕ್ಷೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಅಲ್ಲಿ ಬೇರೆ ಜಿಲ್ಲೆಯವರು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದ ಕಾರಣ ಅವರನ್ನು ನಮ್ಮ ಆಸ್ಪತ್ರೆಗಳಿಗೆ ದಾಖಲು ಮಾಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಅಲ್ಲಿ ಈಗ ಪರೀಕ್ಷೆ ನಡೆಯುತ್ತಿಲ್ಲ’ ಎಂದರು.

‘ಕೋವಿಡ್‌ ಪರಿಸ್ಥಿತಿ ನಿಭಾಯಿಸಲು ಹಣಕಾಸಿನ ಕೊರತೆ ಇಲ್ಲ. ಶಾಸಕರ ಪ್ರದೇಶಾಭಿವೃದ್ಧಿಯ ಹಣವನ್ನೂ ಕೋವಿಡ್‌ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. ಸರ್ಕಾರ ದಿಂದ ಎಲ್ಲಾ ರೀತಿಯ ನೆರವು ಬರುತ್ತಿದೆ. ಆದರೆ ಆಮ್ಲಜನಕ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯ ಸರಿಪಡಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದರು.

ಸಂಸದೆ ಸುಮಲತಾ, ಶಾಸಕರಾದ ಎಂ.ಶ್ರೀನಿವಾಸ್‌, ರವೀಂದ್ರ ಶ್ರೀಕಂಠಯ್ಯ, ಸುರೇಶ್‌ಗೌಡ, ಡಾ.ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT