ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳವಳ್ಳಿ | ಕೈಗಾರಿಕಾ ಪ್ರದೇಶ ಸ್ಥಾಪನೆಗೆ 350 ಎಕರೆ ಜಮೀನು ಗುರುತು

Published 6 ಮಾರ್ಚ್ 2024, 5:34 IST
Last Updated 6 ಮಾರ್ಚ್ 2024, 5:34 IST
ಅಕ್ಷರ ಗಾತ್ರ

ಮಳವಳ್ಳಿ: ಜಿಲ್ಲೆಯ ಹಿಂದುಳಿದ ತಾಲ್ಲೂಕಿನಲ್ಲಿ ಮಳವಳ್ಳಿಯಲ್ಲಿ ಕೆಎಸ್ಆರ್ ಟಿಸಿ ತರಬೇತಿ ಕೇಂದ್ರ, ತಾಲ್ಲೂಕು ಕ್ರೀಡಾಂಗಣ, ಡಾ.ಬಿ.ಆರ್.ಅಂಬೇಡ್ಕರ್ ಭವನ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳ ಸಾಲಿಗೆ ಕೈಗಾರಿಕಾ ಪ್ರದೇಶ ಸ್ಥಾಪನೆಯೂ ಸೇರುತ್ತಿದ್ದು, ತಾಲ್ಲೂಕಿನ ನಿರುದ್ಯೋಗಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಮದ್ದೂರು, ಶ್ರೀರಂಗಪಟ್ಟಣ, ಮಂಡ್ಯ ಕೈಗಾರಿಕಾ ಪ್ರದೇಶಗಳಿದ್ದು, ಉಳಿದ ತಾಲ್ಲೂಕುಗಳಲ್ಲಿ ಕೈಗಾರಿಕಾ ಪ್ರದೇಶಗಳಿರುವುದಿಲ್ಲ. ಮಳವಳ್ಳಿಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡಲಾಗುವುದು ಎಂದು ಪಿ.ಎಂ.ನರೇಂದ್ರಸ್ವಾಮಿ ಅವರು ಚುನಾವಣೆಗೂ ಮುನ್ನ ತಿಳಿಸಿದ್ದರು. ಈಗ ರಾಜ್ಯದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿ ಇರುವುದರಿಂದ ಮುತುವರ್ಜಿ ವಹಿಸಿದ್ದಾರೆ.

ತಾಲ್ಲೂಕಿನಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯಾದಲ್ಲಿ ತಾಲ್ಲೂಕಿನ ಜನರು ಮದ್ದೂರು, ಮಂಡ್ಯದ ಕೈಗಾರಿಕೆಗಳ ಅವಲಂಬನೆ ಕಡಿಮೆಯಾಗಲಿದೆ. ಅಲ್ಲದೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗಕ್ಕೆ ಸೇರುವವರ ಸಂಖ್ಯೆಯೂ ಏರಿಕೆಯಾಗಲಿದೆ.

ನಂಜುಂಡಪ್ಪ ವರದಿ ಪ್ರಕಾರ ಮಳವಳ್ಳಿ ತಾಲ್ಲೂಕು ಹಿಂದುಳಿದ ಪ್ರದೇಶವಾಗಿದೆ. ಹೊಸ ಕೈಗಾರಿಕೆಗಳ ಸ್ಥಾಪನೆಯಿಂದ ತಾಲ್ಲೂಕಿನ ಅಭಿವೃದ್ಧಿಗೆ ಸಹಕಾರಿಯಾಗಬಹುದು.  ಇತ್ತೀಚಿಗೆ ಜಿಲ್ಲಾ ಕೈಗಾರಿಕಾ ಕೇಂದ್ರದ ಜಿಲ್ಲಾ ನಿರ್ದೇಶಕರು, ಕೆಐಎಡಿಬಿಯ ಕಾರ್ಯಪಾಲಕ ಎಂಜಿನಿಯರ್, ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿ ರಾಷ್ಟ್ರೀಯ ಹೆದ್ದಾರಿ-209ಕ್ಕೆ ಹೊಂದಿಕೊಂಡಂತೆ ಇರುವ ತಾಲ್ಲೂಕಿನ ಹೊಸಹಳ್ಳಿಯ-220 ಎಕರೆ ಹಾಗೂ ಬೆಳಕವಾಡಿಯ-130 ಎಕರೆ ಪ್ರದೇಶದಲ್ಲಿ 350 ಎಕರೆ ಜಮೀನು ಗುರುತಿಸಲಾಗಿದೆ.

ಕೈಗಾರಿಕಾ ವಲಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ, ಸಮೀಪವೇ ಕಾವೇರಿ ನದಿಯೂ ಸಹ ಹರಿಯುತ್ತಿದೆ. ಪ್ರಮುಖವಾಗಿ ಕೃಷಿಯಾಧಾರಿತ ಕೈಗಾರಿಕಾ ಪ್ರದೇಶ ಸ್ಥಾಪನೆ ಉದ್ದೇಶ ಹೊಂದಲಾಗಿದೆ. ಈಗಾಗಲೇ ಪೂರಿಗಾಲಿ ಹನಿ ಮತ್ತು ತುಂತುರು ನೀರಾವರಿ ಯೋಜನೆಯ ವ್ಯಾಪ್ತಿಗೆ ಸುಮಾರು 26 ಸಾವಿರ ಎಕರೆ ನೀರು ಲಭ್ಯವಾಗಲಿದೆ. ರೈತರು ಬೆಳೆಯುವ ಬೆಳೆಗೆ ಅನುಕೂಲ ಕಲ್ಪಿಸಲು ಕೋಲ್ಡ್ ಸ್ಟೋರೇಜ್(ಶೀತಲ ಶೇಖರಣಾ ಘಟಕ) ಸ್ಥಾಪನೆಯ ಜೊತೆಗೆ ಕೃಷಿ ವಲಯಕ್ಕೆ ಉತ್ತೇಜನ ನೀಡುವಂಥ ಕೈಗಾರಿಕೆಗಳು ಬರುವ ನಿರೀಕ್ಷೆ ಇದೆ.

ಇದರಿಂದ ಕೃಷಿಯ ಮೌಲ್ಯವರ್ಧನೆ ಹೆಚ್ಚಳದ ಜೊತೆಗೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಕೈಗಾರಿಕಾ ನೀತಿ 2020-25ರಂತೆ ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ ನೋಂದಣಿ ಶುಲ್ಕ ವಿನಾಯಿತಿ ಈಗಾಗಲೇ ಘೋಷಿಸಿದೆ.

ಶಾಸಕರ ಹಾಗೂ ಸರ್ಕಾರದ ಸೂಚನೆಯಂತೆ ಈಗಾಗಲೇ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸ್ಥಳ ಸಮೀಕ್ಷೆ ನಡೆಸಿ ಕೈಗಾರಿಕಾ ಪ್ರದೇಶ ಸ್ಥಾಪನೆಗೆ 350 ಎಕರೆ ಗುರುತಿಸಿ ಕೆಐಎಡಿ ಮಂಡಳಿಯ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೆ.ಶಿವಲಿಂಗಯ್ಯ, ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ
ರಾಷ್ಟ್ರೀಯ ಹೆದ್ದಾರಿ-209ಕ್ಕೆ ಹೊಂದಿಕೊಂಡಂತೆ ಇರುವ ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿಯ ಹಾಗೂ ಬೆಳಕವಾಡಿಯ 350 ಎಕರೆ ಜಮೀನಿನ ನಕ್ಷೆ
ರಾಷ್ಟ್ರೀಯ ಹೆದ್ದಾರಿ-209ಕ್ಕೆ ಹೊಂದಿಕೊಂಡಂತೆ ಇರುವ ಮಳವಳ್ಳಿ ತಾಲ್ಲೂಕಿನ ಹೊಸಹಳ್ಳಿಯ ಹಾಗೂ ಬೆಳಕವಾಡಿಯ 350 ಎಕರೆ ಜಮೀನಿನ ನಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT