ಸೋಮವಾರ, ಜನವರಿ 24, 2022
18 °C

ಶೇ 40ರಷ್ಟು ಲಂಚ: ತನಿಖೆಗಾಗಿ ಸದನದಲ್ಲಿ ಹೋರಾಟ– ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ‘ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40ರಷ್ಟು ಲಂಚದ ಹಾವಳಿ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ನಡೆಸಲಾಗುವುದು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಲ್ಲಿ ಮಂಗಳವಾರ ಒತ್ತಾಯಿಸಿದರು.

‘ನ.19ರಂದು ಪ್ರಜಾವಾಣಿ ಪತ್ರಿಕೆಯಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ. ಕಾಮಗಾರಿಯ ಶೇ 40ರಷ್ಟು ಹಣವನ್ನು ಲಂಚದ ರೂಪದಲ್ಲಿ ನೀಡಬೇಕಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಜುಲೈ 6ರಂದು ಪ್ರಧಾನಿ ಪತ್ರ ಬರೆದಿದೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಲೂಟಿ ಸರ್ಕಾರವನ್ನು ನೋಡಿಲ್ಲ. ಇದರ ವಿರುದ್ಧ ಆಧಿವೇಶನದಲ್ಲಿ ಧ್ವನಿ ಎತ್ತಲಾಗುವುದು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಒಟ್ಟು ಕಾಮಗಾರಿ ಮೊತ್ತದಲ್ಲಿ ಲಂಚ, ತೆರಿಗೆ ಸೇರಿ ಶೇ 78 ಹಣ ಹೋದರೆ ಕಾಮಗಾರಿಕಾಗಿ ಉಳಿಯುವುದು ಕೇವಲ ಶೇ 22ರಷ್ಟು ಮಾತ್ರ. ಪ್ರಜಾವಾಣಿಯಲ್ಲಿ ವರದಿ ಬಂದ ನಂತರ ನಾನು ಹಲವು ಬಾರಿ ತನಿಖೆಗೆ ಒತ್ತಾಯಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯನ್ನೂ ಸೇರಿದಂತೆ ಸಮಗ್ರ ತನಿಖೆಗೆ ಒಳಪಡಿಸಬೇಕು ಆಗ್ರಹಿಸಿದ್ದೇನೆ. ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

‘ಅತೀವೃಷ್ಟಿಯಿಂದ 6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ, ಮನೆಗಳು ಕುಸಿದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಲ್ಲಿಯವರೆಗೂ ಸರ್ಕಾರ ಪರಿಹಾರ ನೀಡಿಲ್ಲ. 2017ರ ಪ್ರವಾಹ ಸಂತ್ರಸ್ತರಿಗೂ ಪರಿಹಾರ ವಿತರಿಸಿಲ್ಲ. ಈ ಬಗ್ಗೆ 2 ಬಾರಿ ಸದನದಲ್ಲಿ ಧ್ವನಿ ಎತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆಯೂ ಸದನದಲ್ಲಿ ಒತ್ತಾಯ ಮಾಡಲಾಗುವುದು’ ಎಂದರು.

ಗ್ರಾಮಸಭೆ ಸ್ಥಗಿತ: ‘ಬಿಜೆಪಿ ಸರ್ಕಾರಕ್ಕೆ ಪಂಚಾಯತ್‌ ರಾಜ್‌ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ. ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳೇ ನಡೆಯುತ್ತಿಲ್ಲ. ಹೀಗಾಗಿ ಇಲ್ಲಿಯವರೆಗೆ ಗ್ರಾಮೀಣ ಜನರಿಗೆ ಒಂದು ಮನೆಯನ್ನೂ ವಿತರಿಸಲು ಸಾಧ್ಯವಾಗಿಲ್ಲ. ವಸತಿ ಸಚಿವ ಸೋಮಣ್ಣ ಅವರನ್ನು ಕೇಳಿದರೆ, ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತಾರೆ. ಸರ್ಕಾರ ನಡೆಸಲು ಆಗದಿದ್ದರೆ ಬಿಟ್ಟು ಹೋಗಲಿ, ನಾವು ಬಂದು ಸರಿ ಮಾಡುತ್ತೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು