ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ: ಮುಂಗಾರು ಬೆಳೆಗಳಿಗೆ 5 ಕಟ್ಟು ನೀರು

ನಾಲೆಗಳ ಮುಖಾಂತರ ನೀರು: ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೂಚನೆ
Published 3 ಆಗಸ್ಟ್ 2024, 14:14 IST
Last Updated 3 ಆಗಸ್ಟ್ 2024, 14:14 IST
ಅಕ್ಷರ ಗಾತ್ರ

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿದ್ದು, ಲಭ್ಯವಿರುವ ನೀರನ್ನು 18 ದಿನ ಹರಿಸಿ, 12 ದಿನ ನಿಲ್ಲಿಸುವ ‘ಕಟ್ಟು ಪದ್ಧತಿ’ (ಆನ್‌ ಅಂಡ್‌ ಆಫ್‌) ಆಧಾರದ ಮೇಲೆ ಮುಂಗಾರು ಬೆಳೆಗಳಿಗೆ 5 ಕಟ್ಟು ನೀರನ್ನು ಹರಿಸಲು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಸೂಚಿಸಿದ್ದಾರೆ. 

ಜಲಾಶಯದಲ್ಲಿ ಬಳಕೆಗೆ ಲಭ್ಯವಿರುವ 41.658 ಟಿಎಂಸಿ ಅಡಿ ನೀರನ್ನು ಮುಂಗಾರು ಬೆಳೆಗಳಿಗೆ ನಾಲೆಗಳು ಮತ್ತು ಅಣೆಕಟ್ಟು ನಾಲೆಗಳ ಮುಖಾಂತರ ಆಗಸ್ಟ್‌ 1ರಿಂದ ಹರಿಸಲಾಗುತ್ತಿದೆ. ರೈತರು ಹಿತ–ಮಿತವಾಗಿ ಬಳಕೆ ಮಾಡಲು ವಿನಂತಿಸಲಾಗಿದೆ. 

ಕಾವೇರಿ ಜಲಾಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಈ ಬಾರಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿದೆ. ಗರಿಷ್ಠ ಮಟ್ಟ 124.80 ಅಡಿಗೆ ನೀರು ತಲುಪಿದ್ದು, ಶನಿವಾರ 73,500 ಕ್ಯುಸೆಕ್‌ ಒಳಹರಿವು ಮತ್ತು 58,667 ಹೊರಹರಿವು ಕಂಡುಬಂದಿತು. ಜಲಾಶಯದಲ್ಲಿ ಒಟ್ಟು 49 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 

‘2018ರ ಸುಪ್ರೀಂ ಕೋರ್ಟ್‌ ಆದೇಶವನ್ನು ಪಾಲನೆ ಮಾಡಬೇಕಾಗಿದೆ. ಮುಂದಿನ ಬೇಸಿಗೆಯಲ್ಲಿ ಜನ–ಜಾನುವಾರುಗಳು ಕುಡಿಯಲು ನೀರನ್ನು ಕಾಯ್ದಿರಿಸಬೇಕಾಗಿರುವುದರಿಂದ ಹಾಗೂ ಬೇಸಿಗೆಯಲ್ಲಿ ಅರೆಖುಷ್ಕಿ ಬೆಳೆಗಳನ್ನು ಬೆಳೆಯಲು ನಾಲೆಗಳಿಗೆ ನೀರನ್ನು ಹರಿಸಲು ಉದ್ದೇಶಿಸಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ಕೆ.ರಘುರಾಮನ್‌ ತಿಳಿಸಿದ್ದಾರೆ. 

ಕೆರೆಗಳನ್ನು ತುಂಬಿಸಲು ಕ್ರಮ:

ಕೃಷ್ಣರಾಜಸಾಗರ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಎಲ್ಲ ಕೆರೆ–ಕಟ್ಟೆಗಳನ್ನು ತುಂಬಿಸಲು ಜುಲೈ 6ರಂದು ಕೃಷಿ ಸಚಿವ ಮತ್ತು ಕೃಷ್ಣರಾಜಸಾಗರ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾದ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಗಿದೆ. 

‘ಸಮಿತಿಯ ನಿರ್ಣಯದಂತೆ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಎಲ್ಲ ಕೆರೆ–ಕಟ್ಟೆಗಳನ್ನು ತುಂಬಿಸಲು ಜುಲೈ 10ರಿಂದ ನಾಲೆಗಳ ಮೂಲಕ ನೀರನ್ನು ಹರಿಸಲಾಗುತ್ತಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. 

ನಾಟಿ ಕಾರ್ಯಕ್ಕೆ ತೊಂದರೆ: 

‘ಮುಂಗಾರು ಹಂಗಾಮಿನ ಪ್ರಾರಂಭದ ದಿನಗಳಲ್ಲಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಿದರೆ, ಭತ್ತದ ನಾಟಿ ಕಾರ್ಯಕ್ಕೆ ತೊಂದರೆಯಾಗಲಿದೆ. ಮಳವಳ್ಳಿ ಮತ್ತು ಮದ್ದೂರು ತಾಲ್ಲೂಕುಗಳ ಅಚ್ಚುಕಟ್ಟು ಪ್ರದೇಶದ ಕಡೇ ಭಾಗಕ್ಕೆ ನೀರು ತಲುಪುವುದೇ ಅನುಮಾನವಾಗುತ್ತದೆ. ಇದರಿಂದ ಸಕಾಲದಲ್ಲಿ ನಾಟಿ ಕಾರ್ಯವಾಗುವುದಿಲ್ಲ. ಹೀಗಾಗಿ, ನಾಟಿ ಕಾರ್ಯ ಮುಗಿಯುವವರೆಗೂ ನಾಲೆಗಳಲ್ಲಿ ಕನಿಷ್ಠ ಒಂದೂವರೆ ತಿಂಗಳು ನಿರಂತರವಾಗಿ ನೀರು ಹರಿಸಬೇಕು’ ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ. 

ನಾಲೆಗಳಲ್ಲಿ ನೀರು ಹರಿಸುವ ದಿನಾಂಕ ಮತ್ತು ಅವಧಿ(ದಿನಾಂಕ; ಅವಧಿ)

ಆಗಸ್ಟ್‌1ರಿಂದ ಆಗಸ್ಟ್‌ 16;18 ದಿನಗಳು

ಆಗಸ್ಟ್‌ 31ರಿಂದ ಸೆಪ್ಟೆಂಬರ್‌ 19;18 ದಿನಗಳು

ಸೆ.30ರಿಂದ ಅಕ್ಟೋಬರ್‌ 15;18 ದಿನಗಳು

ಅ.30ರಿಂದ ನವೆಂಬರ್‌ 14;18 ದಿನಗಳು

ನವೆಂಬರ್‌ 29ರಿಂದ ಡಿಸೆಂಬರ್‌ 14;18 ದಿನಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT