ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತದ ಭಯ: 6 ತಿಂಗಳು ಆಸ್ಪತ್ರೆಯಲ್ಲೇ ವಾಸ, ಹೆಣ್ಣು ಮಗು ಜನನ

Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಮಂಡ್ಯ: ನಾಲ್ಕು ಬಾರಿ ಗರ್ಭಪಾತವಾಗಿ ನೋವು ಅನುಭವಿಸಿದ್ದ ಮಹಿಳೆಯೊಬ್ಬರು 5ನೇ ಬಾರಿಗೆ ಅಂಥದ್ದೇ ಸಮಸ್ಯೆಯ ಭಯದಲ್ಲಿ 6 ತಿಂಗಳವರೆಗೆ ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿ ಕಡೆಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಲ್ಲೂಕಿನ ತಗ್ಗಹಳ್ಳಿಯ ಮಾದೇಶ್‌ ಅವರ ಪತ್ನಿ ಜಯಲಕ್ಷ್ಮಿ ನಗರದ ಮಿಮ್ಸ್‌ ಆಸ್ಪತ್ರೆಯಲ್ಲಿ ಸೆ.6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ತಾಯಿ– ಮಗು ಆರೋಗ್ಯವಾಗಿದ್ದಾರೆ. ನಾಲ್ಕು ಬಾರಿ ಮಗು ಕಳೆದುಕೊಂಡಿದ್ದ ಜಯಲಕ್ಷ್ಮಿ ಅವರು 5ನೇ ಬಾರಿಗೆ ಮಗು ಪಡೆಯುವಲ್ಲಿ ಯಶಸ್ವಿಯಾಗಿದ್ದು ಇಡೀ ಕುಟುಂಬದ ಸದಸ್ಯರು ಸಂತಸದಲ್ಲಿದ್ದಾರೆ.

ಜಯಲಕ್ಷ್ಮಿ–ಮಾದೇಶ್‌ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ನಾಲ್ಕು ಬಾರಿ ಗರ್ಭಿಣಿಯಾದರೂ ಆರೋಗ್ಯ ಸಮಸ್ಯೆಗಳಿಂದ 3 ತಿಂಗಳಾಗುವಷ್ಟರಲ್ಲಿ ಗರ್ಭಪಾತವಾಗುತ್ತಿತ್ತು. ಅದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದ ಮಿಮ್ಸ್‌ ಆಸ್ಪತ್ರೆ ವೈದ್ಯರು ಜಯಲಕ್ಷ್ಮಿ ಅವರನ್ನು 6 ತಿಂಗಳವರೆಗೆ ವೈದ್ಯಕೀಯ ನಿಗಾದಲ್ಲಿ ಇರಿಸಿದ್ದರು.

ಮಾರ್ಚ್‌ 10ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಸ್ತ್ರೀರೋಗ ತಜ್ಞ ಡಾ.ಮನೋಹರ್‌ ಅವರು ನಿಯಮಿತವಾಗಿ ಚಿಕಿತ್ಸೆ ನೀಡಿದ್ದರು. ಮಿಮ್ಸ್‌ ಆಸ್ಪತ್ರೆ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್‌ ಅವರ ಪ್ರೋತ್ಸಾಹವೂ ಇದ್ದ ಕಾರಣ ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿತ್ತು.

‘ವೈದ್ಯ ಮನೋಹರ್ ಅವರ ಕಾಳಜಿಯಿಂದಾಗಿ ನಮ್ಮ ಮನೆಗೆ ಮಗು ಬರುವಂತಾಯಿತು. ನಮಗೆ ಅವರು ಹೊಸ ಬೆಳಕು ನೀಡಿದ್ದಾರೆ’ ಎಂದು ಮಾದೇಶ್‌ ತಿಳಿಸಿಸಿದರು.

‘ನಿರಂತರವಾಗಿ ವೈದ್ಯಕೀಯ ನಿಗಾ ಅವಶ್ಯಕತೆ ಕಾರಣ ಆಸ್ಪತ್ರೆಯಲ್ಲೇ ಇರುವಂತೆ ಸೂಚಿಸಿದ್ದೆವು. ಡಾ.ಮನೋಹರ್‌ ಅವರ ವಿಶೇಷ ಯತ್ನದಿಂದ ಮತ್ತೆ ಗರ್ಭಪಾತವಾಗುವುದನ್ನು ತಡೆಯಲಾಗಿದೆ’ ಎಂದು ಮಿಮ್ಸ್‌ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT