ಶನಿವಾರ, ಮೇ 28, 2022
31 °C

ನಾಗಮಂಗಲ: ವಿಜೃಂಭಣೆಯ ಗಂಗಾಧರೇಶ್ವರ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ಆದಿಚುಂಚನಗಿರಿಯಲ್ಲಿ ಭಕ್ತಿ–ಭಾವಗಳೊಂದಿಗೆ, ವಿಶೇಷ ವಿಧಿವಿಧಾನಗಳ ಜೊತೆಯಲ್ಲಿ ಗಂಗಾಧರೇಶ್ವರ ಮಹಾ ರಥೋತ್ಸವು ವಿಜೃಂಭಣೆಯಿಂದ ನಡೆಯಿತು.

ಭಾನುವಾರ ಬೆಳಿಗ್ಗೆ ಜಾತ್ರೆಯ ಅಂಗವಾಗಿ ಆಯೋಜಿಸಲಾಗಿದ್ದ ಗಂಗಾಧರೇಶ್ವರ ಮಹಾರಥೋತ್ಸವಕ್ಕೆ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ವಿಶೇಷ ಪೂಜೆ ನೆರವೇರಿಸಿದರು. ಧಾರ್ಮಿಕ ವಿಧಿ–ವಿಧಾನಗಳ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಬ್ರಾಹ್ಮಿ ಮೂಹೂರ್ತದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಅಲಂಕಾರ ಮಾಡಲಾಗಿದ್ದ ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭಕ್ತರು ಮುಂದೆ ಸಾಗಿದ ನಂತರ ವಿವಿಧ ಭಾಗಗಳಿಂದ ರಥೋತ್ಸವದ ಸಂಭ್ರಮ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರು ರಥವನ್ನು ಎಳೆದರು. ರಥಕ್ಕೆ ಭಕ್ತರು ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿ ಬಾಳೆಹಣ್ಣು ಮತ್ತು ಜವನವನ್ನು ಎಸೆದು ಹರಕೆ ಸಲ್ಲಿಸಿದರು. ರಥದಲ್ಲಿ ಸಾಗುತ್ತಿದ್ದ ಗಂಗಾಧರೇಶ್ವರ ಸ್ವಾಮಿ ಮತ್ತು ಉತ್ಸವದಲ್ಲಿದ್ದ ದಸರಿಘಟ್ಟದ ಚೌಡಮ್ಮ ದೇವಿಯ ಮೂರ್ತಿಯನ್ನು ಕಂಡು ಭಕ್ತರು ನಮಿಸಿದರು.

ರಥೋತ್ಸವಕ್ಕೆ ಮುನ್ನ ನಡೆದ ತಿರುಗಣಿ ಉತ್ಸವದ ಜೊತೆಗೆ ಕಾಲಭೈರವೇಶ್ವರ ಸ್ವಾಮಿ ಪುಷ್ಕರಿಣಿಯಲ್ಲಿ ನಡೆದ ತೆಪ್ಪೋತ್ಸವದಲ್ಲಿ ಗಂಗಾಧರೇಶ್ವರ ಸ್ವಾಮಿಯನ್ನು ಇರಿಸಿ ಸ್ವಾಮೀಜಿ ಅವರು ಭಾಗಿಯಾದರು. ಬೆಟ್ಟದ ಮಹಾದ್ವಾರದಲ್ಲಿ ಜನರು ಗಂಧದಕಡ್ಡಿ ಮತ್ತು ಕರ್ಪೂರವನ್ನು ಬೆಳಗಿಸಿದರು. ಅಲ್ಲದೆ, ಬಣ್ಣ, ಬಣ್ಣದ ವಿಶೇಷ ವಿದ್ಯುತ್ ದೀಪಗಳಿಂದ ಬೆಟ್ಟವನ್ನು ಶೃಂಗರಿಸಲಾಗಿತ್ತು. ರಥೋತ್ಸವದಲ್ಲಿ ಆಯೋಜಿಸಲಾಗಿದ್ದ ಸಿಡಿಮದ್ದು, ಪಟಾಕಿ ಪ್ರದರ್ಶನ ನೋಡುಗರ ಗಮನ ಸೆಳೆಯಿತು.

ವಿಶೇಷ ಪೂಜೆ: ನಾಡಿನ ವಿವಿಧ ಭಾಗದಿಂದ ಗಂಗಾಧರೇಶ್ವರ ಮಹಾ ರಥೋತ್ಸವಕ್ಕೆ ಬಂದಿದ್ದ ಕುಟುಂಬಗಳು ಮಾಂಸದ ಅಡುಗೆಯನ್ನು ಬೆಳಗಿನ ಜಾವವೇ ಸಿದ್ಧಪಡಿಸಿ ಎಡೆಯಿಡುವ ಮೂಲಕ ಭಕ್ತಿಭಾವದಿಂದ ಗಿರಿಯೆಡೆಗೆ ಪೂಜೆ ಸಲ್ಲಿಸಿದರು.

ರಸ್ತೆ ಬದಿಯಲ್ಲೇ ದೇವರಿಗೆ ನೈವೇದ್ಯ ಇಟ್ಟು ಪೂಜೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು