ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದಿಚುಂಚನಗಿರಿ ಮಠ: 45ನೇ ರಾಜ್ಯಮಟ್ಟದ ಕಲಾಮೇಳ ಉದ್ಘಾಟಿಸಿದ ನಿರ್ಮಲಾನಂದನಾಥ ಶ್ರೀ

ಸೋಬಾನೆ ಚಿಕ್ಕಮ್ಮ, ಪೂಜಾ ಕುಣಿತದ ಶಿವಣ್ಣಗೆ ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ
Published : 23 ಸೆಪ್ಟೆಂಬರ್ 2024, 15:59 IST
Last Updated : 23 ಸೆಪ್ಟೆಂಬರ್ 2024, 15:59 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ ಜಿಲ್ಲೆ): ‘ಈ ನಾಡಿನ ನಿಜವಾದ ಸಾಂಸ್ಕೃತಿಕ ಜೀವಾಳ ಎಂದರೆ ನಮ್ಮ ಜನಪದ ಕಲಾವಿದರು ಎಂಬುದನ್ನು ಮನಗಂಡು, 46 ವರ್ಷಗಳ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಅವರು ಆದಿಚುಂಚನಗಿರಿ ಮಠದಲ್ಲಿ ಅರ್ಥಪೂರ್ಣವಾದ ರಾಜ್ಯಮಟ್ಟದ ಜನಪದ ಕಲಾಮೇಳವನ್ನು ಪ್ರಾರಂಭಿಸಿದರು. ಅಂದಿನಿಂದ ಇಲ್ಲಿಯವರೆಗೂ ಜನಪದ ಕಲಾಮೇಳವು ಯಶಸ್ವಿಯಾಗಿ ನಡೆದುಕೊಂಡು ಬರುತ್ತಿರುವುದು ವಿಶೇಷ’ ಎಂದು ಕರ್ನಾಟಕ ಜನಪದ ಪರಿಷತ್ ಅಧ್ಯಕ್ಷ ಹಿ.ಚಿ.ಬೋರಲಿಂಗಯ್ಯ ಹೇಳಿದರು.

ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಸೋಮವಾರ ರಾತ್ರಿ ಬಾಲಗಂಗಾಧರನಾಥ ಸ್ವಾಮೀಜಿ ಅವರ ವಾರ್ಷಿಕ ಪಟ್ಟಾಭೀಷೇಕ ಮತ್ತು ಗುರು ಸಂಸ್ಮರಣೋತ್ಸವದ ಅಂಗವಾಗಿ ಆಯೋಜಿಸಿದ್ದ 45ನೇ ರಾಜ್ಯ ಮಟ್ಟದ ಜನಪದ ಕಲಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾಗಮಂಗಲ ತಾಲ್ಲೂಕಿನ ಜನಪದ ದಿಗ್ಗಜರಾದ ಎಚ್.ಎಲ್.ನಾಗೇಗೌಡರು ಈ ನಾಡಿನಲ್ಲಿ ಜನಪದ ಕಲಾವಿದರಿಗೆ ಆತ್ಮವಿಶ್ವಾಸ ತಂದುಕೊಟ್ಟಂತ ಧೀಮಂತ ವ್ಯಕ್ತಿ. ಗ್ರಾಮೀಣ ಪ್ರದೇಶದ ಜನಪದ ಕಲಾವಿದರಿಗೆ ಆಗುತ್ತಿದ್ದ ಅನ್ಯಾಯ ಮತ್ತು ನಿರ್ಲಕ್ಷ್ಯದ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಗೌರವ ಸಿಗುವಂತೆ ಮಾಡಿದ ವ್ಯಕ್ತಿ ಎಂದು ಶ್ಲಾಘಿಸಿದರು.

ಜನಪದ ಲೋಕದಲ್ಲಿ 1600 ಗಂಟೆ ಕೇಳುವಷ್ಟು ಜನಪದ ಹಾಡು ಮತ್ತು 300 ಗಂಟೆ ನೋಡಬಹುದಾದ ಜನಪದ ವಿಡಿಯೊಗಳನ್ನು ಎಚ್.ಎಲ್.ನಾಗೇಗೌಡರು ಸಂಗ್ರಹಿಸಿ ಇಟ್ಟಿದ್ದಾರೆ. ಯಾರು ಬೇಕಾದರೂ ಅಧ್ಯಯನ ಮತ್ತು ತರಬೇತಿ ಪಡೆಯಬಹುದಾದ ರೀತಿಯಲ್ಲಿವೆ ಎಂದರು.

ವಾಗ್ಮಿ ಪ್ರೊ.ಕೃಷ್ಣೇಗೌಡ ಅವರು ಆದಿಚುಂಚನಗಿರಿ ಮಠದ ಕಾರ್ಯಗಳು ಮತ್ತು ಜನಪದ ಕಲೆಗಳ ಕುರಿತು ಮಾತನಾಡಿದರು. ನಂತರ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯವಹಿಸಿ, ಆಶೀರ್ವಚನ ನೀಡಿದರು.

ನಾಗೇಗೌಡ ಪ್ರಶಸ್ತಿ ಪ್ರದಾನ:

ವೇದಿಕೆಯಲ್ಲಿ ಪ್ರತಿ ವರ್ಷದಂತೆ ಕರ್ನಾಟಕ ಜನಪದ ಪರಿಷತ್ತಿನ ವತಿಯಿಂದ ಕೊಡಲಾಗುವ ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ ಮತ್ತು ₹10 ಸಾವಿರ ನಗದು ಬಹುಮಾನವನ್ನು ಪೂಜಾ ಕುಣಿತ ಕಲಾವಿದರಾದ ರಾಮನಗರ ಜಿಲ್ಲೆಯ ಕೂಟಗಲ್ಲು ಹೋಬಳಿಯ ಅಂಕನಹಳ್ಳಿ ಗ್ರಾಮದ ಶಿವಣ್ಣ ಮತ್ತು ನಾಗಮಂಗಲ ತಾಲ್ಲೂಕಿನ ಮೊಗೇನಹಳ್ಳಿಯ ಸೋಬಾನೆ ಹಾಡುಗಾರ್ತಿ ಸೋಬಾನೆ ಚಿಕ್ಕಮ್ಮ ಅವರಿಗೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಾಸ್ತವಿಕ ನುಡಿಗಳನ್ನಾಡಿದರು. ಜನಪದ ಕಲಾಮೇಳಕ್ಕೆ 500ಕ್ಕೂ ಹೆಚ್ಚು ತಂಡಗಳು ನೋಂದಣಿ ಮಾಡಿಕೊಂಡು, ಆಕರ್ಷಕ ರೀತಿಯಲ್ಲಿ ಪ್ರದರ್ಶನ ನೀಡಿದವು.

ಆದಿಚುಂಚನಗಿರಿ ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಬ್ರಹ್ಮಚಾರಿ ಸಂವಿಧಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಎ‌.ಟಿ.ಶಿವರಾಮು, ಉಪನ್ಯಾಸಕ ರಾಮೇಗೌಡ, ಶಿಕ್ಷಕ ಕುಮಾರಪ್ಪ ಸೇರಿದಂತೆ ನೂರಾರು ಜನಪದ ಕಲಾವಿದರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT