ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ಮಂಗಳವಾರ ರಾತ್ರಿಯಿಂದ ಮತ್ತೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ರೈತರು ಬುಧವಾರ ಸಂಜೆಯಿಂದ ಅಹೋರಾತ್ರಿ ಧರಣಿ ಆರಂಭಿಸಿದರು.
ಕೆಆರ್‌ಎಸ್ ಅಣೆಕಟ್ಟೆ ಸಮೀಪ, ಬೃಂದಾವನ ಪ್ರವೇಶ ದ್ವಾರದ ಬಳಿ ಧರಣಿ ಆರಂಭವಾಯಿತು. ಕಾವೇರಿ ನೀರು ನಿರ್ವಹಣಾ ಮಂಡಳಿಯ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
‘ತಮಿಳುನಾಡಿಗೆ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಮಂಡಳಿಯ ನಿರ್ದೇಶನ ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ. ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿರುವ ಸಂದರ್ಭದಲ್ಲಿ ಕೃಷಿ ಉದ್ದೇಶಕ್ಕೆ ತಮಿಳುನಾಡಿಗೆ ನೀರು ಹರಿಸುವಂತೆ ನಿರ್ದೆಶನ ನೀಡುವುದು ಒಪ್ಪುವ ವಿಷಯವಲ್ಲ. ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವವರೆಗೆ ಧರಣಿ ನಡೆಯಲಿದೆ’ ಎಂದು ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ನಿಂತಿರುವ ಬೆಳೆಗಳಿಗೇ ನೀರಿಲ್ಲದ ದುಃಸ್ಥಿತಿ ಒದಗಿ ಬಂದಿದೆ. ರೈತರು ಕಂಗಾಲಾಗಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಬೀಳದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಹಾಗಾಗಿ ನೀರು ನಿರ್ವಹಣಾ ಮಂಡಳಿ ತನ್ನ ನಿರ್ದೇಶನವನ್ನು ಮರು ಪರಿಶೀಲಿಸಬೇಕು. ವಾಸ್ತವಾಂಶ ತಿಳಿದು ಜಲಾಶಯದಿಂದ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕು. ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಸಂಕಷ್ಟ ಸೂತ್ರ ರೂಪಿಸಬೇಕು’ ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್. ಕೆಂಪೂಗೌಡ, ಮುಖಂಡರಾದ ಕೆನ್ನಾಳು ನಾಗರಾಜು, ವಿಜಯಕುಮಾರ್, ಮರಳಾಗಾಲ ಕೃಷ್ಣೇಗೌಡ, ಹರವು ಪ್ರಕಾಶ್, ಅರಕೆರೆ ಪ್ರಸನ್ನ ಎನ್. ಗೌಡ, ಎಣ್ಣೆಹೊಳೆಕೊಪ್ಪಲು ಮಂಜುನಾಥ್, ರಘು, ಪಾಂಡು, ಕಡತನಾಳು ಬಾಲಕೃಷ್ಣ, ಪ್ರಿಯಾ ರಮೇಶ್ ಧರಣಿಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.