ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ₹100ಕ್ಕೆ ಒಂದೂವರೆ ಕೆ.ಜಿ ಸೇಬುಹಣ್ಣು

ಕೆಲ ತರಕಾರಿ ಬೆಲೆಯಲ್ಲಿ ಏರಿಕೆ, ಸೊಪ್ಪು ಇಳಿಕೆ, ಮಳೆಯಿಂದಾಗಿ ಬೆಲೆಯಲ್ಲಿ ವ್ಯತ್ಯಾಸ
Last Updated 12 ಅಕ್ಟೋಬರ್ 2020, 13:35 IST
ಅಕ್ಷರ ಗಾತ್ರ

ಮಂಡ್ಯ: ಕಳೆದೊಂದು ವಾರದಿಂದ ಜಿಲ್ಲೆಯಾದ್ಯಂತ ನಿತ್ಯವೂ ಮಳೆ ಸುರಿಯುತ್ತಿದ್ದು ಚಳಿ ಮೈಗಡಚುತ್ತಿದೆ. ಶೀತದ ವಾತಾವರಣ ಮನೆಮಾಡಿದ್ದು ಸೇಬುಹಣ್ಣಿನ ಬೆಲೆ ಕುಸಿತ ಕಂಡಿದೆ.

ಈಗ ಸಹಜವಾಗಿ ಸೇಬುಹಣ್ಣಿನ ಬೆಲೆ ಕಡಿಮೆ ಇದೆ, ಆದರೆ ಶೀತದ ಕಾರಣಕ್ಕೆ ಸೇಬು ತಿನ್ನುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಕೋವಿಡ್‌ ಕಾಲದಲ್ಲಿ ಶೀತ ಬಾರದ ಹಾಗೆ ಜನರು ಎಚ್ಚರಿಕೆ ವಹಿಸಿದ್ದಾರೆ. ಹೀಗಾಗಿ ಸೇಬುಹಣ್ಣಿಗೆ ಬೇಡಿಕೆ ಕುಸಿದಿದ್ದು ಕೆ.ಜಿಗೆ ₹ 80ರಿಂದ ₹ 100ರವರೆಗೆ ಮಾರಾಟವಾಗುತ್ತಿದೆ.

ಜೊತೆಗೆ ದೇಶೀಯ ಸೇಬುಹಣ್ಣು ಮಾರುಕಟ್ಟೆಗೆ ಹರಿದು ಬರುತ್ತಿರುವ ಕಾರಣ ಬೆಲೆ ಕಡಿಮೆಯಾಗಿದೆ. ಹಿಮಾಚಲ ಪ್ರದೇಶ, ಕಾಶ್ಮೀರಿ ಹಣ್ಣು ಆವಕವಾಗುತ್ತಿದೆ. ಬೆಂಗಳೂರು, ಮೈಸೂರು ಮಾರುಕಟ್ಟೆಯಿಂದ ಮಂಡ್ಯಕ್ಕೆ ಸರಬರಾಜಾಗುತ್ತಿದೆ.

ವಿದೇಶದಿಂದ ಬರುವ ಆಸ್ಟ್ರೇಲಿಯಾ ಸೇಬುಹಣ್ಣು ಕೆ.ಜಿಗೆ ₹ 150ರವರೆಗೆ ಮಾರಾಟವಾಗುತ್ತಿದೆ. ಸೂಪರ್‌ ಮಾರುಕಟ್ಟೆ, ಮಾಲ್‌ಗಳಲ್ಲಿ ವಿದೇಶಿ ಸೇಬು ಮಾರಾಟ ಮಾಡಲಾಗತ್ತಿದೆ. ಸಣ್ಣಪುಟ್ಟ ಹಣ್ಣಿನ ಅಂಗಡಿಗಳಲ್ಲಿ ಕಡಿಮೆ ಬೆಲೆಯ ದೇಶೀಯ ಹಣ್ಣು ಮಾರಾಟ ಮಾಡಲಾಗುತ್ತಿದೆ.

‘ತುಂತುರು ಮಳೆ ಸುರಿಯುತ್ತಿರುವ ಕಾರಣ ಸೇಬು ಹಣ್ಣು ಮಾತ್ರವಲ್ಲದೇ ಬಹುತೇಕ ಹಣ್ಣುಗಳ ಬೆಲೆ ಕುಗ್ಗಿದೆ. ಮಳೆ ಕಡಿಮೆಯಾಗುವವರೆಗೂ ಹಣ್ಣಿನ ಬೆಲೆ ಹೆಚ್ಚಳವಾಗುವುದಿಲ್ಲ’ ಎಂದು ಹಣ್ಣಿನ ವ್ಯಾಪಾರಿ ಮೊಹಮ್ಮದ್‌ ತೌಫಿಕ್‌ ಹೇಳಿದರು.

₹60 ಇದ್ದ ಮೂಸಂಬಿ ₹50 ಇಳಿದಿದ್ದರೆ ₹120 ಇದ್ದ ದಾಳಿಂಬೆ ₹140ಕ್ಕೆ ಏರಿಕೆ ಕಂಡಿದೆ. ಬೀಜ ರಹಿತ ದ್ರಾಕ್ಷಿ ₹120, ಸಪೋಟ ₹60, ಅನಾನಸ್‌ ಒಂದಕ್ಕೆ ₹40, ಏಲಕ್ಕಿಬಾಳೆ ₹60, ಪಚ್ಚಬಾಳೆ ₹20ಕ್ಕೆ ಮಾರಾಟವಾಗುತ್ತಿವೆ.

ತರಕಾರಿ ಬೆಲೆ ಹೆಚ್ಚಳ: ಬೀಟರೂಟ್‌, ಕ್ಯಾರೆಟ್‌, ಹೂ ಕೋಸು, ಎಲೆಕೋಸು ಗ್ರಾಹಕರ ಜೇಬಿಗೆ ಭಾರವಾಗತೊಡಗಿವೆ. ಕಳೆದ ವಾರ ಕೆ.ಜಿ.ಗೆ ₹20 ಇದ್ದ ಎಲೆಕೋಸು ₹40ಕ್ಕೆ ಏರಿದೆ. ₹30ಕ್ಕೆ ಸಿಗುತ್ತಿದ್ದ ಹೂ ಕೋಸು ಒಂದಕ್ಕೆ ₹40ಕ್ಕೆ ಮಾರಾಟವಾಗುತ್ತಿದೆ. ₹60 ಇದ್ದ ಕ್ಯಾರೆಟ್‌ ₹80 ಆಗಿದೆ.

₹60 ಇದ್ದ ಬೀನ್ಸ್‌ ₹40, ₹80 ಇದ್ದ ಚೌಳೀಕಾಯಿ ₹60, ₹40 ಇದ್ದ ಮೂಲಂಗಿ ₹30ಕ್ಕೆ,₹60 ಇದ್ದ ಹೀರೇಕಾಯಿ ₹50ಕ್ಕೆ ಇಳಿದಿದೆ. ₹40 ಇದ್ದ ಬೀಟರೂಟ್‌ ₹50ಕ್ಕೆ ಹೆಚ್ಚಳವಾಗಿದೆ. ಸುವರ್ಣಗೆಡ್ಡೆ ₹40, ಟೊಮೆಟೊ ₹20, ಶುಂಠಿ ₹60, ಬೆಳ್ಳುಳ್ಳಿ ₹100ಕ್ಕೆ ಮಾರಾಟವಾಗುತ್ತಿವೆ.

ಬದನೇಕಾಯಿ ₹30, ₹50 ಇದ್ದ ಹಸಿರುಮೆಣಸಿನಕಾಯಿ ₹40, ಗೆಡ್ಡೆಕೋಸು ₹40, ₹60 ಇದ್ದ ದಪ್ಪ ಮೆಣಸಿಕಾಯಿ ₹40, ಭಜ್ಜಿ ಮೆಣಸಿನಕಾಯಿ ₹40, ಈರುಳ್ಳಿ ₹40–50, ಆಲೂಗೆಡ್ಡೆ ₹40, ₹20 ಇದ್ದ ಬೂದುಗುಂಬಳ ₹30, ಹಾಗಲಕಾಯಿ ₹50, ₹10ಕ್ಕೆ ಸೌತೇಕಾಯಿ 4, ನಿಂಬೆಹಣ್ಣು ₹2 ರಂತೆ ಮಾರಾಟವಾಗುತ್ತಿವೆ.

ಈರುಳ್ಳಿ ₹ 40–50ಕ್ಕೆ ಮಾರಾಟವಾಗುತ್ತಿದೆ. ₹ 50ಕೊಟ್ಟರೂ ಉತ್ತಮ ಗುಣಮಟ್ಟದ ಈರುಳ್ಳಿ ದೊರೆಯುತ್ತಿಲ್ಲ ಎಂದು ಗ್ರಾಹಕರು ಪರದಾಡುತ್ತಿದ್ದಾರೆ. ಮಳೆ ಸುರಿಯುತ್ತಿರುವ ಕಾರಣ ಈರುಳ್ಳಿ ಸಂರಕ್ಷಣೆ ಕಷ್ಟವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಸೊಪ್ಪು: ₹15 ಇದ್ದ ಕಟ್ಟು ಕಿಲಕೀರೆ ₹10, ₹10 ಇದ್ದ ಕೊತ್ತಂಬರಿ ₹06, ₹15 ಇದ್ದ ನಾಟಿ ಕೊತ್ತಂಬರಿ ₹10, ₹15 ಇದ್ದ ಸಬ್ಬಸಿಗೆ ₹10ಕ್ಕೆ ಮಾರಾಟವಾಗುತ್ತಿವೆ. ಪುದೀನಾ ₹10, ಮೆಂತೆ ₹15, ದಂಟು ₹10, ಕರಿಬೇವು ₹05, ಪಾಲಕ್‌ ಕಟ್ಟಿಗೆ ₹10 ರಂತೆ ಮಾರಾಟವಾಗುತ್ತಿವೆ.

********

ಮಲ್ಲಿಗೆ ದುಬಾರಿ, ಸೇವಂತಿಗೆ ಅಗ್ಗ

ಮಳೆಯ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನಲ್ಲಿ ಹುಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಉತ್ತಮ ಗುಣಮಟ್ಟದ ಹೂವು ಮಾರುಕಟ್ಟೆಗೆ ಬಾರದ ಕಾರಣ ಬೆಲೆಯಲ್ಲಿ ಏರಿಕೆ ಕಂಡಿದೆ. ಕಳೆದ ವಾರ ₹20 ಇದ್ದ ಮಾರು ಮಲ್ಲಿಗೆ ಈ ವಾರ ₹60ಕ್ಕೆ ಏರಿಕೆಯಾಗಿದೆ.
180 ಇದ್ದ ಕೆ.ಜಿ ಬಿಡಿ ಮಲ್ಲಿಗೆ ₹500ಕ್ಕೆ, ₹200 ಇದ್ದ ಕೆ.ಜಿ ಮರಳೆ ₹300, ₹120 ಇದ್ದ ಕಾಕಡ ₹160ಕ್ಕೆ ಮಾರಾಟವಾಗುತ್ತಿವೆ. ಇನ್ನೇನು ಆಯುಧ ಪೂಜೆ ಸಮೀಪಿಸುತ್ತಿದ್ದು ಹೂವಿನ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಮಾರು ಮರಳೆ ₹40, ಕನಕಾಂಬರ ₹40, ಕಾಕಡ ₹30, ಗಣಗಲೆ ₹20ಕ್ಕೆ ಮಾರಾಟವಾಗುತ್ತಿವೆ. ಸೇವಂತಿಗೆ ಹೂವಿನ ದರ ಕುಸಿದಿದ್ದು ಮಾರಿಗೆ ₹5–10 ರಂತೆ ಮಾರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT