ಶನಿವಾರ, ಮಾರ್ಚ್ 28, 2020
19 °C
ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು

ದರೋಡೆಗೆ ಸಂಚು: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ಪಟ್ಟಣದ ಮೈಸೂರು–ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ನಡೆಸಲು ಹೊಂಚು ಹಾಕಿದ್ದ ನಾಲ್ವರು ಆರೋಪಿಗಳು ಸಾರ್ವಜನಿಕರಿಗೆ ಸಿಕ್ಕಿಬಿದ್ದು, ಈಗ ಪೊಲೀಸರ ಅತಿಥಿಗಳಾಗಿದ್ದಾರೆ.

ಬೆಂಗಳೂರಿನ ಉತ್ತರಹಳ್ಳಿಯ ಸುರೇಶ್, ಪದ್ಮನಾಭನಗರದ ಓಂಪ್ರಕಾಶ್, ಮದ್ದೂರಿನ ಲೀಲಾವತಿ ಬಡಾವಣೆಯ ಪ್ರಜ್ವಲ್, ಸಂಜಯ್ ಬಂಧಿತರು. ಮತ್ತೊಬ್ಬ ಆರೋಪಿ ಕಾರ್ತಿಕ್ ತಲೆಮರಿಸಿಕೊಂಡಿದ್ದಾನೆ.

ಪಟ್ಟಣದ ಕೊಪ್ಪ ಸರ್ಕಲ್ ಬಳಿ ಫೆ.12ರಂದು ಈ ಘಟನೆ ನಡೆದಿದೆ. ಅಂದು ಈ ಐವರು ಆರೋಪಿಗಳಲ್ಲಿ ಓಂ ಪ್ರಕಾಶ್ ಎಂಬಾತನಿಗೆ ಸೇರಿದ ಹುಂಡೈ ಕ್ರೇಟಾ ಕಾರ್‌ಗೆ ನಕಲಿ ನಂಬರ್ ಪ್ಲೇಟ್‌ ಅಳವಡಿಸಲಾಗಿತ್ತು. ಆರೋಪಿಗಳು ದರೋಡೆಯ ಸಂಚು ರೂಪಿಸಿ ಹೆದ್ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ದಲ್ಲಿ ಡೀಸೆಲ್ ಖಾಲಿಯಾಗಿ ರಸ್ತೆಯಲ್ಲೇ ನಿಂತಿತ್ತು.

ಪರಿಣಾಮ ಹಿಂದಿನಿಂದ ಬಂದ ಲಾರಿ ಚಾಲಕ ದಾರಿ ಬಿಡು ವಂತೆ ಹಾರನ್ ಮಾಡಿದ್ದಾರೆ. ಈ ಸಮಯದಲ್ಲಿ ಕಾರಿನೊಳಗಿದ್ದ ಆರೋಪಿಗಳು ಪಾನಮತ್ತರಾಗಿದ್ದು, ಲಾರಿ ಚಾಲಕನೊಂದಿಗೆ ವಾಗ್ವಾದ ನಡೆಸಿದ್ದಾರೆ. ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದಾಗ ಸಾರ್ವಜನಿಕರು ಜಗಳ ಬಿಡಿಸಲು ಯತ್ನಿಸಿದ್ದಾರೆ. ಆರೋಪಿಗಳು ಜನರೊಂದಿಗೂ ವಾಗ್ವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕುಪಿತರಾದ ಜನರು ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾರ್‌ನಲ್ಲಿ ಡ್ರ್ಯಾಗನ್, ಒಂದು ಬಟನ್ ಚಾಕು, ಮಂಕಿ ಕ್ಯಾಪ್‌, ಹ್ಯಾಂಡ್ ಗ್ಲೌಸ್, ಪೆಪ್ಪರ್ ಸ್ಪ್ರೇ, ಮೊಳೆಗಳು, ಮುಖ ಮುಚ್ಚುವ ಮಾಸ್ಕ್ ಪತ್ತೆಯಾಗಿವೆ. ಈ ಐವರು ಹೆದ್ದಾರಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಮದ್ದೂರು ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)