ಬುಧವಾರ, ಆಗಸ್ಟ್ 10, 2022
20 °C
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪ; ಬಿಜೆಪಿ, ಕಾಂಗ್ರೆಸ್‌ ವಿರುದ್ಧ ಕಿಡಿ

‘ಲೂಟಿ ಹಣ ಪಡೆಯಲು ಬಂದ ಅರುಣ್‌ ಸಿಂಗ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ‘ರಾಜ್ಯದ ಸಂಪತ್ತನ್ನು ಲೂಟಿ ಹೊಡೆದಿರುವ ಹಣದಲ್ಲಿ ದೇಣಿಗೆ ಪಡೆಯಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಕರ್ನಾಟಕಕ್ಕೆ ಬಂದಿದ್ದಾರೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಪಟ್ಟಣದ ಕ್ರೀಡಾಂಗಣದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಅವರು ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರು, ಆಟೊ ಚಾಲಕರು, ಬಡವರು ಸೇರಿದಂತೆ ವಿವಿಧ ವರ್ಗದವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಕೋವಿಡ್ ಸಂದರ್ಭದಲ್ಲಿ ಕಲೆಕ್ಷನ್ ಮಾಡಿರುವ ಹಾಗೂ ಲೂಟಿ ಮಾಡಿರುವ ಹಣವನ್ನು ವಸೂಲಿ ಮಾಡಲು ಅರುಣ್ ಸಿಂಗ್ ಅವರು ರಾಜ್ಯದ ಬಿಜೆಪಿ ನಾಯಕರಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ನೆಪದಲ್ಲಿ ಬಂದಿದ್ದಾರೆ. ಈ ಚಾಳಿ ಬಿಜೆಪಿ, ಕಾಂಗ್ರೆಸ್‌ನಲ್ಲಿ ಹಿಂದಿ ನಿಂದಲೂ ಇದೆ’ ಎಂದು ಕಿಡಿಕಾರಿದರು.

ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೋ ಅಥವಾ ಬೇರೆಯವರನ್ನು ಮಾಡುತ್ತಾರೋ ಎಂಬುವುದು ಅವರಿಗೆ ಬಿಟ್ಟ ವಿಷಯ. ಒಬ್ಬ ವ್ಯಕ್ತಿಗಾಗಿ ಮಠಮಾನ್ಯಗಳ ಸ್ವಾಮೀಜಿಗಳು ರಾಜಕೀಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಈ ಹಿಂದೆ ನನ್ನ ಸರ್ಕಾರ ಪಥನವಾಗುವಾಗ ಸರ್ಕಾರವನ್ನು ಉಳಿಸಲು ನಾನು ಯಾವ ಮಠಾಧೀಶರ ಹತ್ತಿರವೂ ಹೋಗಿರಲಿಲ್ಲ. ಒಕ್ಕಲಿಗ ಮಠಾಧೀಶರು ನನ್ನ ಸರ್ಕಾರವನ್ನು ಉಳಿಸಲು ಪ್ರಯತ್ನಿಸಿ ರಲಿಲ್ಲ. ಅಷ್ಟು ದೊಡ್ಡತನ ನಮ್ಮಲ್ಲಿತ್ತು. ಅದನ್ನು ಬಿಟ್ಟು ಜಾತಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಶಾಸಕರಾದ ಡಿ.ಸಿ.ತಮ್ಮಣ್ಣ, ಎಂ.ಶ್ರೀನಿವಾಸ್, ಜೆಡಿಎಸ್‌ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮನ್‌ಮುಲ್ ಅಧ್ಯಕ್ಷ ರಾಮಚಂದ್ರು, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಕಾರ್ತಿಕ್ ಸಿದ್ದರಾಜು ಇದ್ದರು.

‘ಮನ್‌ಮುಲ್‌ ಸೂಪರ್‌ಸೀಡ್‌ ಸರಿಯಲ್ಲ’

ಮನ್‌ಮುಲ್‌ನಲ್ಲಿ ಹಾಲಿಗೆ ನೀರು ಬೆರೆಸಿದ ಪ್ರಕರಣವು ಈಗಿನ ಆಡಳಿತ ಮಂಡಳಿಯಿಂದಲೇ ಬೆಳಕಿಗೆ ಬಂದಿದೆ. ಈ ಪ್ರಕರಣ ಬೆಳಕಿಗೆ ಬರಲು ಕಾರಣರಾದವರೇ ತಪ್ಪಿತಸ್ಥರು ಎನ್ನುವಂತೆ ಆಡಳಿತಾಧಿಕಾರಿಯನ್ನು ನೇಮಿಸಿ, ಆಡಳಿತ ಮಂಡಳಿಯನ್ನು ಸೂಪರ್ ಸೀಡ್ ಮಾಡುವುದಕ್ಕೆ ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಕುಮಾರಸ್ವಾಮಿ ಹೇಳಿದರು.

‘ಮನ್‌ಮುಲ್‌ನಲ್ಲಿ ಸುಮಾರು 15 ವರ್ಷಗಳಿಂದ ಈ ಹಗರಣ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಹಿಂದಿನಿಂದಲೂ ಅಕ್ರಮದಲ್ಲಿ ಪಾಲ್ಗೊಂಡಿರುವ ಲೂಟಿಕೋರರ ವಿರುದ್ಧ ತನಿಖೆ ನಡೆಸಬೇಕು. ಅದನ್ನು ಬಿಟ್ಟು ನನ್ನ ಕಾರ್ಯದರ್ಶಿಯೊಬ್ಬರ ಹೆಸರನ್ನು ಈ ಪ್ರಕರಣದಲ್ಲಿ ತರಲಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು