ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂತ ಬಂಗಲೆಯಾದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಜನನ ಮಂಟಪ

Last Updated 14 ಜುಲೈ 2021, 3:00 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮೈಸೂರು ರಾಜ್ಯವನ್ನು ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಡಳಿತಾತ್ಮಕವಾಗಿ ಉತ್ತುಂಗಕ್ಕೆ ಕೊಂಡೊಯ್ದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಜನನ ಮಂಟಪ ನಿರ್ಲಕ್ಷ್ಯಕ್ಕೆ ಒಳಗಾಗಿದೆ.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇಗುಲದ ಬಲ ಭಾಗದಲ್ಲಿರುವ ಈ ಮಂಟಪದ ಮೇಲೆ ಅರಳಿ, ಆಲ, ಗಸಗಸೆ ಗಿಡಗಳು ಬೆಳೆದಿವೆ. ಹಲವು ತಿಂಗಳ ಹಿಂದೆಯೇ ಈ ಮಂಟಪಕ್ಕೆ ಬೀಗ ಹಾಕಿದ್ದು, ಒಳ ಭಾಗದಲ್ಲಿ ದೂಳು ತುಂಬಿದೆ. ಪ್ಲಾಸ್ಟಿಕ್‌ ಚೀಲ ಇತರ ತ್ಯಾಜ್ಯ ಚೆಲ್ಲಾಡುತ್ತಿದೆ. ದೂರದಿಂದ ನೋಡಿದರೆ ಭೂತ ಬಂಗಲೆಯಂತೆ ಗೋಚರಿಸುತ್ತದೆ.

‘ಖಾಸಾ ಚಾಮರಾಜ ಒಡೆಯರ್‌ ಮತ್ತು ಕೆಂಪನಂಜಮ್ಮಣ್ಣಿ ಅವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರ್‌ 1794ರ ಜು.9ರಂದು ಪಟ್ಟಣದಲ್ಲಿ ಜನಿಸಿದರು ಎಂದು ಇಲ್ಲಿನ ಜನನ ಮಂಟಪದ ಒಳಗಿರುವ ಫಲಕದಲ್ಲಿ ಉಲ್ಲೇಖಿಸಲಾಗಿದೆ. ‘ಶ್ರೀರಂಗಪಟ್ಟಣ ಪತನದ (1799 ಮೇ 4) ನಂತರ 1799ರ ಜೂ.30ರಂದು ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಮೈಸೂರಿನಲ್ಲಿ ಪಟ್ಟಾಭಿಷೇಕ ನಡೆಯಿತು. ತಮ್ಮ 5ನೇ ವಯಸ್ಸಿಗೆ ಅಧಿಕಾರಕ್ಕೆ ಬಂದ ಮುಮ್ಮಡಿಯವರು 1768ರವರೆಗೆ ಸುದೀರ್ಘ ಆಳ್ವಿಕೆ ನಡೆಸಿದ್ದರು. ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಅಪಾರ ಪಾಂಡಿತ್ಯ ಪಡೆದಿದ್ದ ಅವರು ಎರಡೂ ಭಾಷೆಗಳಲ್ಲಿ ಅಮೂಲ್ಯ ಕೃತಿಗಳನ್ನು ರಚಿಸಿ ‘ಕವಿಜನ ಕಾಮಧೇನು’ ಎಂಬ ಅಭಿದಾನ ಪಡೆದಿದ್ದರು’ ಎಂದು ಸಾಹಿತಿ ಡಾ.ಎಸ್‌.ಶಿವರಾಜಪ್ಪ ಹೇಳುತ್ತಾರೆ.

‘ಇದು ರಾಜನೊಬ್ಬನ ಜನನ ಮಂಟಪ ಎಂಬ ವಿಷಯ ತಿಳಿದಿಲ್ಲ. ಈ ಕಟ್ಟಡಕ್ಕೆ ಹೇಳೋರು, ಕೇಳೋರು ಯಾರೂ ಇಲ್ಲ. ಅದರ ಒಳಗೆ ಏನಿದೆ ಎಂಬುದೂ ಗೊತ್ತಿಲ್ಲ’ ಎನ್ನುತ್ತಾರೆ ದೇವಾಲಯ ಆವರಣದಲ್ಲಿ ವ್ಯಾಪಾರ ಮಾಡುವ ಜಗದೀಶ್‌.

‘ಈ ಮಂಟಪವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕಟ್ಟಡವನ್ನು ಪುರಸಭೆ ಸುಪರ್ದಿಗೆ ಪಡೆದು ಅಭಿವೃದ್ಧಿ ಪಡಿಸಲು ಚಿಂತನೆ ನಡೆಸಿದ್ದೇವೆ. ಈ ಕುರಿತು ಅರಮನೆ ಆಡಳಿತ ಮಂಡಳಿಯ ಜತೆಗೂ ಮಾತನಾಡಿದ್ದೇವೆ. ಎಲ್ಲ ಒಡೆಯರ್‌ಗಳ ಜೀವನ, ಸಾಧನೆ ತಿಳಿಸುವ ಕೇಂದ್ರವನ್ನಾಗಿ ರೂಪಿಸುವ ಉದ್ದೇಶವಿದೆ’ ಎಂಬುದು ಪುರಸಭೆ ಸದಸ್ಯ ಎಂ. ನಂದೀಶ್‌ ಅವರ ಕೋರಿಕೆ.

ಚರ್ಚಾಗೋಷ್ಠಿ ನಾಳೆ

ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ಜೀವನ, ಸಾಧನೆ ಕುರಿತು ಜು.15ರಂದು ಪಟ್ಟಣದ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಜನನ ಮಂಟಪದ ಆವರಣದಲ್ಲಿ ಚರ್ಚಾಗೋಷ್ಠಿ ನಡೆಯಲಿದೆ. ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಏರ್ಪಡಿಸಿರುವ ಈ ಕಾರ್ಯಕ್ರಮ ಅಂದು ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿದೆ. ಅಖಿಲ ಭಾರತ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀಧರರಾಜೇ ಅರಸ್‌, ಡಾ.ಭಾನುಪ್ರಕಾಶ್‌ ಶರ್ಮಾ, ಸಂಶೋಧಕ ಡಾ.ಶಿವಕುಮಾರ್‌ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಎಚ್‌.ಎಲ್‌. ಯಮುನಾ ತಿಳಿಸಿದ್ದಾರೆ. ಸಂಪರ್ಕಕ್ಕೆ ಮೊ: 9902698623.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT