ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರರಾಜ್ಯಗಳ ಆಟೊ ಓಡಾಟಕ್ಕೆ ಅವಕಾಶವಿಲ್ಲ: ಶಾಸಕ ಗಣಿಗ ರವಿಕುಮಾರ್‌ಗೌಡ

ಪೊಲೀಸರು– ಆಟೊ ಚಾಲಕರ ಸಂವಾದ; ಶಾಸಕ ಗಣಿಗ ರವಿಕುಮಾರ್‌ ಎಚ್ಚರಿಕೆ
Published 21 ಅಕ್ಟೋಬರ್ 2023, 13:34 IST
Last Updated 21 ಅಕ್ಟೋಬರ್ 2023, 13:34 IST
ಅಕ್ಷರ ಗಾತ್ರ

ಮಂಡ್ಯ: ‘ಬೇರೆ ರಾಜ್ಯಗಳಿಂದ ತಂದ ಆಟೊಗಳು ನಗರದಲ್ಲಿ ಬಾಡಿಗೆ ಓಡುತ್ತಿರುವ ದೂರುಗಳು ಬಂದಿವೆ. ಅನಧಿಕೃತ ಆಟೊಗಳಿಗೆ ಅವಕಾಶ ನೀಡುವುದಿಲ್ಲ, ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು’ ಎಂದು ಶಾಸಕ ಗಣಿಗ ಪಿ.ರವಿಕುಮಾರ್‌ಗೌಡ ಹೇಳಿದರು.

ನಗರದ ಕಾಳಿಕಾಂಬ ಸಮುದಾಯ ಭವನದಲ್ಲಿ ಜಿಲ್ಲಾ ಪೊಲೀಸ್‌(ಉಪ ವಿಭಾಗ)ದ ವತಿಯಿಂದ ಶನಿವಾರ ನಡೆದ ಜಿಲ್ಲಾ ಆಟೊ ಚಾಲಕರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಹೊರರಾಜ್ಯಗಳಿಂದ ಖರೀದಿ ಮಾಡಿ ತಂದ ಆಟೊಗಳನ್ನು ಯಾವುದೇ ಕಾರಣಕ್ಕೂ ಓಡಿಸಬಾರದು. ಪೊಲೀಸರ ನಡುವೆ ವಾಗ್ವಾದ ಮಾಡದೇ ಸೌಹಾರ್ದವಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಗ್ರಾಹಕರೊಂದಿಗೆ ಆಟೊ ಚಾಲಕರು ಸ್ನೇಹಯುತವಾಗಿ ವರ್ತಿಸಬೇಕು. ಚಾಲಕರು, ಮಾಲೀಕರಿಗೆ ಒದಗಿಸಬೇಕಾದ ಎಲ್ಲಾ ಸೌಲಭ್ಯಗಳನ್ನು ಆದ್ಯತೆಯ ಮೇರೆಗೆ ಒದಗಿಸಲಾಗುವುದು’ ಎಂದರು.

‘ಮುಂದಿನ ದಿನಗಳಲ್ಲಿ ನಗರದ ರಸ್ತೆಗಳನ್ನು ಡಾಂಬರೀಕರಣ ಮಾಡಿ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗುವುದು. ಪೊಲೀಸರು ಆಟೊ ಚಾಲಕರ ಜೊತೆ ಸ್ನೇಹಿಯಾಗಿ ಕೆಲಸ ಮಾಡಬೇಕು, ಅವರ ಪರವಾಗಿ, ಅವರಿಗೆ ಸೌಲಭ್ಯ ನೀಡುವತ್ತ ಗಮನ ಹರಿಸಬೇಕು. ಪೊಲೀಸ್‌ ಮತ್ತು ಆಟೊ ಚಾಲಕರು ಸೌಹಾರ್ದತಯುತವಾಗಿ ನಡೆದುಕೊಳ್ಳಬೇಕು’ ಎಂದರು.

‘ಆಟೊ ನೋಂದಣಿ ಪ್ರಕ್ರಿಯೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ಆರೋಪಗಳು ಬಂದಿವೆ. ಮಂಡ್ಯದಲ್ಲೇ ನೋಂದಣಿಯಾದ ಆಟೊಗಳ ಓಡಾಟಕ್ಕೆ ನಗರದಲ್ಲಿ ಅವಕಾಶ ನೀಡಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಆಟೊ ಚಾಲನೆಗೆ ಅವಕಾಶ ನೀಡುವುದಿಲ್ಲ, ನೆಲದ ಕಾನೂನು ಗೌರವಿಸಲು ಸಹಕರಿಸಬೇಕು. ಪಕ್ಕದ ಕೇರಳ ಮತ್ತು ಹೊರರಾಜ್ಯಗಳಿಂದ ಆಟೊ ತಂದು ಚಾಲನೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅವರಿಗೆ ಅವಕಾಶ ನೀಡದೇ  ಸ್ಥಳೀಯರಿಗೆ ನೆರವಾಗುವಂತೆ ಅನುವು ಮಾಡಿಕೊಡಲಾಗುವುದು’ ಎಂದರು.

‘ಗೂಡ್ಸ್‌ ಆಟೊದವರನ್ನೂ ಕರೆದು ಸಭೆ ನಡೆಸಲಾಗುವುದು. ಅವರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಮಾರ್ಗ ಕಂಡುಕೊಳ್ಳಲಾಗುವುದು. ಆಟೊ ಚಾಲಕರು ಅವರ ಹಿರಿತನದ ಆಧಾರ ಮೇಲೆ ಚಾಲನೆ ಮಾಡಲಿ, ಬಸ್‌ಗಳು ಸಹ ಎಲ್ಲೆಂದರಲ್ಲಿ ನಿಲ್ಲಿಸುವುದಕ್ಕೆ ಕಡಿವಾಣ ಹಾಕಲಾಗುವುದು’ ಎಂದರು.

‘ಸಾರಿಗೆ ಬಸ್‌ ನಿಲ್ದಾಣದ ಬಳಿ ಬಸ್ ಚಾಲಕರು ಆಟೊ ನಿಲ್ದಾಣಗಳಲ್ಲಿಯೇ ಬಸ್‌ ನಿಲುಗಡೆ ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸುತ್ತೇನೆ. ಆಟೊ ಚಾಲಕ ಸಂಘಕ್ಕೆ ಶಾಸಕರ ಅನುದಾನದಲ್ಲಿ ₹1 ಲಕ್ಷ ನೀಡಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ ಶಿವಮೂರ್ತಿ, ಸಿಪಿಐಗಳಾದ ಜಾಯ್‌ ಆಂಥೋನಿ, ನವೀನ್‌ ಸುಬೇದಾರ್, ಆಟೊ ಚಾಲಕರ ಸಂಘದ ಅಧ್ಯಕ್ಷ ಕೃಷ್ಣ, ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಸತ್ಯನಾರಾಯಣ ಭಾಗವಹಿಸಿದ್ದರು.

ಹೆಲ್ಮಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ವಿತರಣೆ ಮಾಡಿ ಶಾಸಕ ಗಣಿಗ ರವಿಕುಮಾರ್‌ ಹೆಲ್ಮೆಟ್‌ ಜಾಗೃತಿಗೆ ಚಾಲನೆ ನೀಡಿದರು
ಹೆಲ್ಮಟ್‌ ಧರಿಸದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ವಿತರಣೆ ಮಾಡಿ ಶಾಸಕ ಗಣಿಗ ರವಿಕುಮಾರ್‌ ಹೆಲ್ಮೆಟ್‌ ಜಾಗೃತಿಗೆ ಚಾಲನೆ ನೀಡಿದರು

ಹೆಲ್ಮೆಟ್‌ ಜಾಗೃತಿಗೆ ಚಾಲನೆ

ನಗರದ ಜೆ.ಸಿ.ವೃತ್ತದಲ್ಲಿ ಹೆಲ್ಮೆಟ್‌ ಜಾಗೃತಿ ಅಭಿಯಾನಕ್ಕೆ ಶಾಸಕ ರವಿಕುಮಾರ್‌ ಚಾಲನೆ ನೀಡಿದರು. ಹೆಲ್ಮೆಟ್‌ ರಹಿತವಾಗಿ ದ್ವಿಚಕ್ರ ವಾಹನ ಸವಾರಿ ಮಾಡುತ್ತಿದ್ದವರಿಗೆ ಸ್ಥಳದಲ್ಲಿಯೇ ಹೆಲ್ಮೆಟ್‌ ಕೊಟ್ಟು ಬುದ್ಧಿ ಹೇಳಿ ಕಳುಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನ ಸವಾರರು ರಸ್ತೆಗೆ ಇಳಿಯಬಾರದು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ಇನ್ನಮುಂದೆ ಹೆಲ್ಮೆಟ್‌ ಧರಿಸದೇ ಬಂದರೆ ಅವರ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗುವುದು. ಹೆಲ್ಮೆಟ್‌ ತಂದ ನಂತರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಲಾಗುವುದು. ಹೆಲ್ಮೆಟ್‌ ಧರಿಸಿ ಅಮೂಲ್ಯ ಜೀವ ಉಳಿಸಿಕೊಳ್ಳಬೇಕು ಎಂಬುದೇ ನಮ್ಮ ಅಪೇಕ್ಷೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT