ಮಂಡ್ಯ: ‘ಇನ್ನು ಮೂವತ್ತು ವರ್ಷಗಳಲ್ಲಿ ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎಂದು ಭಯೋತ್ಪಾದಕರು ಕರಪತ್ರದಲ್ಲಿ ತಿಳಿಸಿದ್ದಾರೆ. ಕೋಮುಬೀಜ ಬಿತ್ತುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವೇ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿದೆ. ಬಹುಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಮಂಡ್ಯದಲ್ಲಿ ಚುನಾಯಿತ ಪ್ರತಿನಿಧಿಗಳು ಹಿಂದೂ ವಿರೋಧಿ ಧೋರಣೆ ತಾಳುತ್ತಿದ್ದಾರೆ. ಕಳೆದ ವರ್ಷ ಹನುಮ ಧ್ವಜಕ್ಕೆ ಅಗೌರವ ತಂದಿದ್ದಾರೆ. ಮತ್ತೆ ನಾಗಮಂಗಲದಲ್ಲಿ ಗಣೇಶ ಉತ್ಸವದ ವೇಳೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಇಲ್ಲಿ ಕೋಮು ದಳ್ಳುರಿ ಉಂಟು ಮಾಡುತ್ತಿದ್ದಾರೆ. ಮಂಡ್ಯದಲ್ಲಿ 95 ಪರ್ಸೆಂಟ್ ಹಿಂದೂಗಳು ಇದ್ದು, ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.
ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಇನ್‌ಸ್ಪೆಕ್ಟರ್, ಡಿವೈಎಸ್ಪಿಗಳನ್ನು ಅಮಾನತು ಮಾಡಿರುವುದು ಕಣ್ಣೊರೆಸುವ ತಂತ್ರವಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಅಮಾನತು ಮಾಡಬೇಕಿತ್ತು. ಕಳೆದ ಬಾರಿ ಗಣೇಶ ಮೆರವಣಿಗೆ ವೇಳೆ ಗಲಾಟೆಯಾಗಿದ್ದರೂ ಎಚ್ಚೆತ್ತುಕೊಂಡಿಲ್ಲ. ‘ಕಾಮನ್‌ಸೆನ್ಸ್’ ಇಲ್ಲದ ಸರ್ಕಾರ ಎಂದು ದೂರಿದರು.
ಬಾಯಿ ಮುಚ್ಚಿಸುವ ಕೆಲಸ: ನಾಗಮಂಗಲಕ್ಕೆ ಭೇಟಿ ನೀಡಿ, ಜನರಿಗೆ ಸಾಂತ್ವನ ಹೇಳಿದ್ದೆ. ನಾನು ಭಾಷಣವನ್ನೂ ಮಾಡಲಿಲ್ಲ, ಠಾಣೆ ಮುಂದೆ ಪ್ರತಿಭಟನೆಯನ್ನೂ ಮಾಡಲಿಲ್ಲ. ಪಾಕ್ ಪರ ಘೋಷಣೆಗಳು ಮೊಳಗಿವೆ ಎಂಬ ಮಾಹಿತಿಯಿದೆ. ಈ ಬಗ್ಗೆ ತನಿಖೆ ನಡೆಸಿ ಎಂದು ಪೋಸ್ಟ್ ಮಾಡಿ ಆಗ್ರಹಿಸಿದ್ದೆ. ಇಷ್ಟಕ್ಕೇ ನನ್ನ ಮೇಲೆ ಎಫ್‌ಐಆರ್ ಹಾಕಿದ್ದಾರೆ. ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷದ ನಾಯಕನ ಬಾಯಿ ಮುಚ್ಚಿಸುವ ಮತ್ತು ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇವರು ಹೇಳಿದ ಹಾಗೆ ಭಜನೆ, ತಾಳ ಹಾಕಿಕೊಂಡು ಇರಬೇಕಾ? ಎಂದು ಕಿಡಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.