ಮಂಡ್ಯ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಸೋಮವಾರ ನಗರದಲ್ಲಿ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮದ ಬಗ್ಗೆ ಜಾಗೃತಿ ಜಾಥಾ ನಡೆಯಿತು.
ಯುವ ಮತದಾರರಿಗೆ ಹೆಸರನ್ನು ನೋಂದಾಯಿಸಿಕೊಳ್ಳಲು ಸಹಾಯವಾಗುವ ನಿಟ್ಟಿನಲ್ಲಿ ಮಿಂಚಿನ ನೊಂದಣಿ ಹಮ್ಮಿಕೊಳ್ಳಲಾಗಿತ್ತು. ಗ್ರಹಣ ಬರೀ 3ಗಂಟೆ ಆದರೆ ನೋಂದಣಿ ನಿಮಗೋಸ್ಕರ ಮೂರು ದಿನ ಇರುತ್ತದೆ. 18 ವರ್ಷ ತುಂಬಿದ ಯುವಜನರು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು ಎಂಬ ಕರ ಪತ್ರಗಳನ್ನು ವಿತರಣೆ ಮಾಡಲಾಯಿತು.
ಮತ ಚಲಾಯಿಸಿ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿ ದೇಶದ ಘನತೆ ಹೆಚ್ಚಿಸಿ, ಮತದಾನ ಮಾಡುವುದು ನಮ್ಮ ಹಕ್ಕೂ ಹೌದು, ಕರ್ತವ್ಯವೂ ಹೌದು, ಕರೆ ಮಾಡಿ, ಕರೆ ಮಾಡಿ 1950ಕ್ಕೆ, ಬರ್ತಾರೆ ಬರ್ತಾರೆ ಮನೆಗೆ ಬಿಎಲ್‌ಒ ಬರ್ತಾರೆ, ನಮ್ಮ ಮತ ನಮ್ಮ ಹಕ್ಕು, ಮತದಾರನಾಗಲು ಹೆಮ್ಮೆ, ಗಣತಂತ್ರ ವ್ಯವಸ್ಥೆಯ ಬುನಾದಿ ಮತದಾನ ಸೇರಿದಂತೆ ವಿವಿಧ ಮಾಹಿತಿಗಳನ್ನೊಳಗೊಂಡ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಜಾಥಾದಲ್ಲಿ ಹೆಜ್ಜೆ ಹಾಕಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಸಂಜಯ್ ವೃತ್ತದವರೆಗೆ ನಡೆದ ಜಾಥಾದಲ್ಲಿ ನಗರದ ಹಲವು ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು ಮತದಾರರ ಮಿಂಚಿನ ನೋಂದಣಿ ಬಗ್ಗೆ ಘೋಷಣೆ ಕೂಗಿದರು.
ಜಾಥಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬಿ ಭದ್ರ ಬುನಾದಿ ಹಾಕಬೇಕು. ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಿಂದ ಗ್ರಾಮ ಪಂಚಾಯಿತಿವರೆಗೂ ಸ್ವೀಪ್ ಮಟ್ಟದ ಕಾರ್ಯಕ್ರಮವನ್ನು ಜಾಗೃತಗೊಳಿಸಲಾಗಿದೆ. ಬಿಎಲ್‌ಒ, ತಾಲ್ಲೂಕು, ಉಪ ವಿಭಾಗದ ಕಚೇರಿಗೆ ತೆರಳಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು’ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಎಲ್ಲಾ ಪ್ರೌಢಶಾಲೆ, ಕಾಲೇಜುಗಳಲ್ಲಿ ಜ.8 ರವರೆಗೆ ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ಮತದಾರರ ನೋಂದಣಿ ಬಗ್ಗೆ ಅರಿವು ಮೂಡಿಸುವ ಮನೆಯಲ್ಲಿ ತಿಳಿಯದಿದ್ದವರಿಗೆ ತಿಳಿಸಲು ಮಿಂಚಿನ ನೋಂದಣಿ ಸಹಾಯವಾಗಲಿದೆ ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.