ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧ ಪೂಜೆ, ವಿಜಯದಶಮಿ: ಸರಳ ಆಚರಣೆ

ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ, ಬನ್ನಿ ಮರಕ್ಕೆ ಪೂಜೆ
Last Updated 26 ಅಕ್ಟೋಬರ್ 2020, 13:30 IST
ಅಕ್ಷರ ಗಾತ್ರ

ಮಂಡ್ಯ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೊರೊನಾ ನಡುವೆಯೂ ಭಾನುವಾರ ಆಯುಧ ಪೂಜೆ ಆಚರಣೆ ಸರಳವಾಗಿ ನಡೆಯಿತು. ಸೋಮವಾರ ವಿಜಯದಶಮಿ ಅಂಗವಾಗಿ ವಿವಿಧೆಡೆ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.

ಹೂವಿನ ಬೆಲೆ ಮೂರ್ನಾಲ್ಕು ಪಟ್ಟು ಹಾಗೂ ಬೂದುಗುಂಬಳ ಬೆಲೆ ದುಪ್ಪಟ್ಟಾಗಿತ್ತು. ಕೆಲವೆಡೆ ಬೂದುಗುಂಬಳಕಾಯಿ ಭಾನುವಾರ ಮಧ್ಯಾಹ್ನವೇ ಖಾಲಿಯಾಗಿ ಗ್ರಾಹಕರು ಪರದಾಡಿದರು. ಮಂಡ್ಯ ನಗರದ ಮಾರುಕಟ್ಟೆಯಲ್ಲೂ ಹೂವಿನ ಪೂರೈಕೆ ಕಡಿಮೆಯಿತ್ತು.

ಆಯುಧಪೂಜೆ ಅಂಗವಾಗಿ ವಾಹನ, ಕಚೇರಿ ಶುಚಿಗೊಳಿಸಿ ಪೂಜೆ ನೆರವೇರಿಸಲಾಯಿತು. ಈ ಬಾರಿ ಸಾಲುಸಾಲು ರಜೆಗಳ ಕಾರಣ ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರವೇ ಆಯುಧಪೂಜೆ ಮಾಡಲಾಯಿತು. ನಗರದ ಮಹಾವೀರ ವೃತ್ತ, ನೂರು ಅಡಿ ರಸ್ತೆ, ಹೊಸಹಳ್ಳಿ ವೃತ್ತದಲ್ಲಿ ಹೂವು ಖರೀದಿಸಲು ಜನರು ಮುಗಿಬಿದ್ದರು. ಕೆಲವೆಡೆ ಹೂವಿನ ಅಂಗಡಿ ಬಳಿಯೇ ವಾಹನಗಳನ್ನು ಅಲಂಕಾರ ಮಾಡಿಕೊಡಲಾಗುತ್ತಿತ್ತು.

ಮಹಾಲಯ ಅಮಾವಾಸ್ಯೆಯಂದು ಪಿತೃಪಕ್ಷ ಹಬ್ಬ ಆಚರಿಸದವರು ಆಯುಧ ಪೂಜೆಯಂದು ಮಾಂಸಾಹಾರ ತಯಾರಿಸಿ ಎಡೆ ಇಟ್ಟು ಭಕ್ತಿ ಮೆರೆದರು.

ಮಾವಿನ ಸೊಪ್ಪು, ಬಾಳೆಕಂದು ಕಟ್ಟಿ, ವಾಹನಗಳನ್ನು ಅಲಂಕಾರ ಮಾಡಿದ್ದರು. ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಸರ್ವೀಸ್‌ ಸ್ಟೇಷನ್‌ ಬಳಿ ಜನರು ತಮ್ಮ ವಾಹನಗಳನ್ನು ತೊಳೆಸಲು ಸಾಲುಗಟ್ಟಿ ನಿಂತಿದ್ದರು. ಅಂಗಡಿ, ಮುಂಗಟ್ಟು ಬಳಿ ಬೂದುಗುಂಬಳ ಹೊಡೆಯುವಾಗ ಚಿಲ್ಲರೆ ಕಾಸುಗಳನ್ನು ಎತ್ತಿಕೊಳ್ಳಲು ಚಿಣ್ಣರು ಪೈಪೋಟಿಗಿಳಿದಿದ್ದರು. ಮಾಂಸ ಖರೀದಿಗೆ ಜನರು ಮುಗಿಬಿದ್ದರು.

ನವರಾತ್ರಿ ಉತ್ಸವ: ಆದಿಚುಂಚನಗಿರಿ ಶಾಖಾ ಮಠದ ವತಿಯಿಂದ ನಗರದ ಶಂಕರಪುರದ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯಿತು. ಒಂಬತ್ತು ದಿನಗಳ ಉತ್ಸವದ ಬಳಿಕ ಸೋಮವಾರ ವಿಜಯದಶಮಿ ಅಂಗವಾಗಿ ದೇವಿಯನ್ನು ಬನ್ನಿ ಮರದ ಬಳಿಗೆ ಕೊಂಡೊಯ್ದು, ವಿಧಿ ವಿಧಾನಗಳಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಯಿತು.

ಶಾಖಾ ಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳ, ಸಾಂಪ್ರದಾಯವಾಗಿ ನವರಾತ್ರಿ ಉತ್ಸವವನ್ನು ನಡೆಸಲಾಯಿತು ಎಂದು ಹೇಳಿದರು.

ಶಾಖಾ ಮಠದ ಆಡಳಿತಾಧಿಕಾರಿ ಕಾಂತರಾಜು, ಪ್ರಧಾನ ಅರ್ಚಕರಾದ ಮಂಜುನಾಥ್, ಪ್ರಭು ಇದ್ದರು.

ಮಂಡ್ಯ ಯೂತ್‌ ಗ್ರೂಪ್‌ ಅಧ್ಯಕ್ಷ ಡಾ.ಅನಿಲ್ ಆನಂದ್ ನೇತೃತ್ವದಲ್ಲಿ ಪದಾಧಿಕಾರಿಗಳು ಗಜೇಂದ್ರ ಮೋಕ್ಷ ಕೊಳದ ಬಳಿ ಇರುವ ಬನ್ನಿಮರಕ್ಕೆ ಧನಸ್ಸು ಲಗ್ನದಲ್ಲಿ ಪೂಜೆ ಸಲ್ಲಿಸಿ ಬನ್ನಿ ಕತ್ತರಿಸಿದರು. ನಂತರ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಕೊರೊನಾ ಕಾರಣದಿಂದ ಅದ್ಧೂರಿ ದಸರಾ ಸಾಂಸ್ಕೃತಿಕ ಉತ್ಸವವನ್ನು ಕೈ ಬಿಡಲಾಗಿತ್ತು. ಸರಳ ಆಚರಣೆಗೆ ಸೀಮಿತಗೊಳಿಸಲಾಗಿತ್ತು.

ಗ್ರೂಪ್‌ ಉಪಾಧ್ಯಕ್ಷ ಎಚ್.ಎಸ್.ಮಂಜು, ಪದಾಧಿಕಾರಿಗಳಾದ ಮಲ್ಲೇಶ್, ನರೇಂದ್ರ, ಬಿ.ಎಂ.ಅಪ್ಪಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT