ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಬಿಕಾರ್ನ್‌ ಬೆಳೆದು ಚೈತನ್ಯ ಕಳೆದುಕೊಂಡ ಚೇತನ

ಲಾಕ್‌ಡೌನ್‌ ಪರಿಣಾಮ ಕೊಂಡುಕೊಳ್ಳುವವರಿಲ್ಲದೇ ನಷ್ಟದ ಭೀತಿ
Last Updated 18 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಭಾರತೀನಗರ: ಕೈತುಂಬಾ ಹಣ ಸಿಗುವ ಆಸೆಯಿಂದ ಬೆಳೆದ ಬೇಬಿಕಾರ್ನ್‌ ಫಸಲನ್ನು ಲಾಕ್‌ಡೌನ್‌ ಪರಿಣಾಮದಿಂದ ಕೊಂಡುಕೊಳ್ಳುವವರು ಬಾರದೇ ಯುವ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮದ್ದೂರು ತಾಲ್ಲೂಕಿನ ಕೂಳಗೆರೆ ಗ್ರಾಮದ ಕೆ.ಎಸ್‌. ಚೇತನ್‌ ಅವರೇ ಸಂಕಷ್ಟಕ್ಕೀಡಾದವರು. ತಮ್ಮ 3 ಎಕರೆ ಜಮೀನಿನಲ್ಲಿ ಬೆಳೆದಿರುವ ಬೇಬಿಕಾರ್ನ್‌ ಫಸಲು ಕೇಳುವವರಿಲ್ಲದೇ ಹೊಲದಲ್ಲೇ ಒಣಗಿ, ಜಾನುವಾರುಗಳಿಗೆ ಮೇವಾಗುತ್ತಿದೆ.

ಅವರಿವರ ಬಳಿ ಸುಮಾರು ₹ 70 ಸಾವಿರದಷ್ಟೂ ಕೈಸಾಲ ಮಾಡಿ, ಅಕ್ಕಪಕ್ಕದ ಜಮೀನಿನವರ ಬೋರ್‌ವೆಲ್‌ಗಳಿಂದ ನೀರು ಬಾಡಿಗೆ ಪಡೆದು ಹಾಕಿದ ಬೆಳೆ ಲಾಕ್‌ಡೌನ್‌ ಪರಿಣಾಮದಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲದಂತಾಗಿದೆ.

ಬೇಬಿ ಕಾರ್ನ್‌ ಬೆಳೆಯಿಂದ ಜರೂರು ಹಣ ಸಂಪಾದನೆ ಮಾಡಬಹುದೆಂಬ ಯುವ ರೈತನ ಆಸೆ ಕೈಗೂಡದೇ ಮತ್ತಷ್ಟು ಸಾಲದ ಸುಳಿಗೆ ತಳ್ಳಿದೆ. ಬೇಬಿ ಕಾರ್ನ್‌ ಬೀಜಕೊಟ್ಟು, ಫಸಲನ್ನು ಉತ್ತಮ ಬೆಲೆಗೆ ಕೊಂಡುಕೊಳ್ಳುತ್ತೇವೆಂದು ಭರವಸೆ ನೀಡಿದ್ದ ಡೀಲರ್‌ ಲಾಕ್‌ಡೌನ್‌ ನೆಪ ಹೇಳುತ್ತಿದ್ದಾರೆ.

ಸ್ವತಃ ತಾನೇ ಫಸಲನ್ನು ಮಾರಾಟ ಮಾಡುವ ಸಲುವಾಗಿ ಹಲವು ಕಂಪನಿಗಳನ್ನು ಸಂಪರ್ಕಿಸಲಾಗಿ, ಬೇಬಿ ಕಾರ್ನ್‌ನಿಂದ ತಯಾರು ಮಾಡುವ ವಿವಿಧ ಉತ್ಪನ್ನಗಳ ಕಾರ್ಖಾನೆಗಳು ಲಾಕ್‌ಡೌನ್‌ ಪರಿಣಾಮ ಮುಚ್ಚಿದ್ದು, ಫಸಲನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದಾರೆ. ತನ್ನ ಫಸಲನ್ನು ಮಾರಾಟ ಮಾಡುವ ಆಸೆಯನ್ನು ಕೈಬಿಟ್ಟಿರುವ ರೈತ ಚೇತನ್‌ ಸಾಲದ ಭೀತಿಯಿಂದ ಪ್ರತಿನಿತ್ಯ ನರಳುತ್ತಿದ್ದಾರೆ.

ಭಾರತೀನಗರದ ಭಾರತೀ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿರುವ ಇವರು, ಮುಂದಿನ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಟ್ಟು ವ್ಯವಸಾಯವನ್ನು ನಂಬಿ ತನ್ನ ಕುಟುಂಬದ ನೊಗ ಹೊತ್ತಿದ್ದಾರೆ. ತಂದೆ ಕಾಡೇಗೌಡ ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ತೀರಿಕೊಂಡಿದ್ದಾರೆ. ತನ್ನ 3 ವರ್ಷದ ಪುತ್ರಿ ತನ್ವೀ ಗೌಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ವಿವಿಧ ಜನರ ಬಳಿ ಶೇ 3 ರ ಬಡ್ಡಿ ದರದಲ್ಲಿ ₹ 4.5 ಲಕ್ಷ ಸಾಲ, ಬೆಂಗಳೂರಿನ ಖಾಸಗಿ ಬ್ಯಾಂಕ್‌ವೊಂದರಲ್ಲಿ ₹ 1.5 ಲಕ್ಷ ಸಾಲ ಮಾಡಿರುವ ರೈತ ಚೇತನನಿಗೆ ಬೆಳೆದ ಬೆಳೆಯೂ ಕೈಗೆ ಬಾರದ್ದರಿಂದ ಆತಂಕಕ್ಕೀಡಾಗಿದ್ದಾರೆ. ಮುಂದೇನು ಎಂಬ ದಾರಿ ಕಾಣದಾಗಿದೆ ಎಂದು ಅಳಲು ಹೇಳಿಕೊಂಡಿದ್ದಾರೆ.

ಖರೀದಿಗೆ ಯಾವುದಾದರೂ ಕಂಪನಿ ಇದ್ದರೆ ಚೇತನ್‌ ಅವರನ್ನು (ಮೊ. 9980368441) ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT