ಗುರುವಾರ , ಜುಲೈ 29, 2021
22 °C
ಹೋರಾಟ ಕುರಿತ ಸಭೆ: ಸಿಎಂ ಭೇಟಿಗೆ ಬಿಜೆಪಿ ನಿರ್ಧಾರ; ಶಾಸಕ ಪುಟ್ಟರಾಜು ನೇತೃತ್ವ ವಹಿಸಲು ಆಗ್ರಹ

ಬೇಬಿಬೆಟ್ಟ: ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪಾಂಡವಪುರ: ಕೆಆರ್‌ಎಸ್ ಅಣೆ ಕಟ್ಟೆಗೆ ಅಪಾಯ ತಂದೊಡ್ಡಿರುವ ಬೇಬಿಬೆಟ್ಟ ಪ್ರದೇಶದಲ್ಲಿ ನಡೆಯುವ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿ ಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವ ವಹಿಸಲಿ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಚ್.ಎನ್.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಬೇಬಿ ಗ್ರಾಮದ ಮರಿದೇವರು ಸ್ವಾಮೀಜಿ ಅವರ ಗದ್ದುಗೆ ಆವರಣದಲ್ಲಿ ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ ರೂಪುರೇಷೆಯ ಸಭೆಯಲ್ಲಿ ಅವರು ಮಾತನಾಡಿದರು.

ಐದಾರು ವರ್ಷಗಳಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್‌ನಾರಾಯಣ್ ನೇತೃತ್ವದಲ್ಲಿ ಬೇಬಿಬೆಟ್ಟದಿಂದ ತಾಲ್ಲೂಕು ಕಚೇರಿ ವರೆಗೂ ಪಾದಯಾತ್ರೆ ನಡೆಸಲಾಗಿತ್ತು. ಗಣಿಗಾರಿಕೆಯಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ಅಪಾಯ ಇದ್ದು, ಈ ಭಾಗದ ಜನರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಗಣಿಗಾರಿಕೆ ನಿಷೇಧಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2018 ಸೆ.25ರಂದು ಕೇಳಿ ಬಂದ ನಿಗೂಢ ಶಬ್ದವು ಭೂ ಕಂಪನವಾಗಿದೆ ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ. ನಂತರ ಕೇಂದ್ರ ನೈಸರ್ಗಿಕ ವಿಕೋಪ ನಿರ್ವ ಹಣಾ ತಂಡದ ಅಧಿಕಾರಿಗಳು ಈ ಭಾಗದಲ್ಲಿ ಸ್ಫೋಟಕಗಳನ್ನು ಬಳಸಿ ಸ್ಫೋಟ ನಡೆಸಿದರೆ ಅಣೆಕಟ್ಟೆಗೆ ಅಪಾಯವಿದೆ ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರೂ ಗಣಿಗಾರಿಕೆ ಸಂಪೂ ರ್ಣವಾಗಿ ನಿಷೇಧವಾಗಿಲ್ಲ ಎಂದು ಅವರು ಹೇಳಿದರು.

ಗಣಿಗಾರಿಕೆಯ ವಿರುದ್ಧ ದನಿ ಎತ್ತಿದಾಗಲೆಲ್ಲ ತಾತ್ಕಾಲಿಕವಾಗಿ ಸ್ಥಗಿತವಾಗುತ್ತದೆ. ಸಂಸದೆ ಸುಮಲತಾ ಹಾಗೂ ಮಾಜಿ ಸಿ.ಎಂ.ಕುಮಾರಸ್ವಾಮಿ ನಡುವೆ ಇದೇ ವಿಚಾರವಾಗಿ ವಾಕ್‌ ಸಮರ ನಡೆಯುತ್ತಿದೆ. ರೈತರ ಜೀವನಾಡಿಯಾಗಿರುವ ಕನ್ನಂಬಾಡಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಪುಟ್ಟರಾಜು ದ್ವಂದ್ವ ನಿಲುವು: ಕ್ಷೇತ್ರದ ಶಾಸಕ ಸಿ.ಎಸ್.ಪುಟ್ಟರಾಜು ಮತ್ತು ಅವರ ಸಂಬಂಧಿಕರು ಮತ್ತು ಬೆಂಬಲಿಗರು ಅಕ್ರಮ ಗಣಿಗಾರಿಕೆಯಲ್ಲಿ ಪಾಲುದಾರರಾಗಿದ್ದಾರೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗಲೂ ಈ ಬಗ್ಗೆ ಕ್ರಮಕೈಗೊಳ್ಳಲು ಪುಟ್ಟರಾಜು ಅವರಿಗೆ ಸಾಧ್ಯವಾಗಲಿಲ್ಲ ಎಂದು ಅವರು ಆರೋಪಿಸಿದರು.

500 ಅಡಿ ಆಳ: ಬೇಬಿಬೆಟ್ಟದ ಪ್ರದೇಶದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಸುಮಾರು 250 ಅಡಿಯಿಂದ 500 ಅಡಿ ಅಳದವರೆಗೂ ರಿಗ್ ಬೋರ್ ಮೆಗಾ ಬ್ಲಾಸ್ಟ್‌ ನಡೆಸಲಾಗಿದೆ. ಬೆಟ್ಟಗಳು ಮಾಯವಾಗಿವೆ. ಇಲ್ಲಿನ ಸ್ಥಳಕ್ಕೆ ಹೋಗಬೇಕಾದರೆ ಭಯ ಉಂಟಾಗುತ್ತದೆ ಎಂದು ಹೇಳಿದರು.

ಕೆರೆಗಳು ನಾಪತ್ತೆ: ಗಣಿಗಾರಿಕೆಯಿಂದ ಬೇಬಿಬೆಟ್ಟದ ಪ್ರದೇಶಗಳಲ್ಲಿ ಇದ್ದ ಕೆರೆ ಕಟ್ಟೆಗಳು ನಾಶವಾಗಿವೆ. ಸುತ್ತಲಿನ ಗ್ರಾಮಗಳ ಮನೆಗಳು ಬಿರುಕು ಬಿಟ್ಟಿವೆ. ಕುಡಿಯುವ ನೀರು ಕಲುಷಿತಗೊಂಡಿದೆ. ಸ‌ರ್ಕಾರಿ ಶಾಲೆಗಳು ಬಿರುಕು ಬಿಟ್ಟಿವೆ. ರಸ್ತೆಗಳು ಹದಗೆಟ್ಟಿವೆ. ಈ ಭಾಗದ ಹಳ್ಳಿಗಳ ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡ ಸಿ.ಟಿ.ಮಂಜುನಾಥ್ ಮಾತ‌ನಾಡಿ, ಕೆಆರ್‌ಎಸ್‌ ಜಲಾಶಯ ವ್ಯಾಪ್ತಿಯ 20 ಕಿ.ಮೀ.ದೂರದಷ್ಟು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಸಿಎಂ ಭೇಟಿಗೆ ನಿರ್ಧಾರ: ಕೆಆರ್‌ಎಸ್ ಅಣೆಕಟ್ಟೆಯ ಸುರಕ್ಷತಾ ದೃಷ್ಟಿಯಿಂದ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸುವಂತೆ ಒತ್ತಾಯಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಭೆ ನಿರ್ಧರಿಸಿತು.

ಮುಖಂಡರಾದ ಶ್ರೀನಿವಾಸ್ ನಾಯ್ಕ, ಹಿರೇಮರಳಿ ರವಿಕುಮಾರ್, ನೀಲನಹಳ್ಳಿ ಧನಂಜಯ, ಪುಟ್ಟರಾಜು, ಉದಯ್‌ಕುಮಾರ್, ಬಾಲಗಂಗಾಧರ್, ಬೇಬಿಬೆಟ್ಟ ಉಳಿಸಿ ಹೋರಾಟ ಸಮಿತಿಯ ಸಿದ್ದರಾಜು, ಬಿ.ಎಂ.ಕುಮಾರ್, ಲೋಕೇಶ್, ನಟರಾಜು, ಮಂಜುನಾಥ್, ಕೆಂಪೇಗೌಡ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು