ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೈವೆಯ ಸರ್ವೀಸ್ ರಸ್ತೆಯಲ್ಲಿ ಪ್ರಾಣಕ್ಕೆ ಕಂಟಕ!

ಸ್ಥಳೀಯರ ಓಡಾಟಕ್ಕೆ ಪಾದಾಚಾರಿ ಮಾರ್ಗವಿಲ್ಲ: ಬಸ್‌ ನಿಲ್ದಾಣಕ್ಕೆ ಜಾಗವಿಲ್ಲ, ಜೀವದ ಜೊತೆ ಚೆಲ್ಲಾಟ
Last Updated 27 ಫೆಬ್ರುವರಿ 2023, 10:30 IST
ಅಕ್ಷರ ಗಾತ್ರ

ಮಂಡ್ಯ: ಬೆಂಗಳೂರು– ಮೈಸೂರು ದಶಪಥ ಕಾಮಗಾರಿಯನ್ನು ಮಾರ್ಚ್‌ 11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಆದರೆ, ಸರ್ವೀಸ್‌ ರಸ್ತೆ ಕಾಮಗಾರಿ ಗೊಂದಲಗಳ ಗೂಡಾಗಿದ್ದು ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸ್ಥಳೀಯರ ಓಡಾಟಕ್ಕೆ ಸೌಲಭ್ಯಗಳಿಲ್ಲದ ಕಾರಣ ಅವರ ಪ್ರಾಣಕ್ಕೂ ಕಂಟಕ ಎದುರಾಗಿದೆ.

‘ಮೈಸೂರಿನಿಂದ ಹೊರಟರೆ ಶ್ರೀರಂಗಪಟ್ಟಣಕ್ಕೆ ಹೋಗಬೇಕಾಗಿಲ್ಲ. ಮಂಡ್ಯ, ಮದ್ದೂರು, ಚನ್ನಪಟ್ಟಣಕ್ಕೂ ಹೋಗಬೇಕಿಲ್ಲ. ಸೀದಾ ಬೆಂಗಳೂರು ತಲುಪಬಹುದು’ ಎಂದು ಹೇಳುವ ಮೈಸೂರು ಸಂಸದ ಪ್ರತಾಪ್‌ ಸಿಂಹ ಬೆಂಗಳೂರು ಮತ್ತು ಮೈಸೂರು ನಡುವಿನ ಸಂಪರ್ಕಕ್ಕೆ ಮಾತ್ರ ಮಹತ್ವ ನೀಡಿದ್ದಾರೆ.

ಎರಡೂ ನಗರಗಳ ನಡುವೆ ಜಮೀನು, ನಿವೇಶನ ಕಳೆದುಕೊಂಡವರಿಗೂ ಸೌಲಭ್ಯ ಒದಗಿಸಬೇಕು ಎಂಬ ಚಿಂತನೆ ಸಂಸದ ಪ್ರತಾಪ್‌ ಸಿಂಹ್‌ ಅವರಿಗೂ ಇಲ್ಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೂ ಇಲ್ಲ. ಪ್ರಮುಖವಾಗಿ ಸ್ಥಳೀಯರು ಓಡಾಡಲು ಸರ್ವೀಸ್‌ ರಸ್ತೆಗಳನ್ನೇ ಬಳಸಬೇಕು. ಸರ್ವೀಸ್‌ ರಸ್ತೆ ಹೆಸರಿಗಷ್ಟೇ ದ್ವಿಪಥವಾಗಿದ್ದು, ಅತ್ಯಂತ ಕಿರಿದಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಯಾವುದೇ ಸೌಲಭ್ಯ ನೀಡಿಲ್ಲ.

ಸರ್ವೀಸ್‌ ರಸ್ತೆಯಲ್ಲಿ ಏಕಮುಖ ಸಂಚಾರವೋ ದ್ವಿಮುಖ ಸಂಚಾರವೋ ಎಂಬ ಬಗ್ಗೆ ಹಳ್ಳಿ ಜನರಿಗೆ ಯಾವುದೇ ಸ್ಪಷ್ಟನೆ ಇಲ್ಲ. ವಾಹನ ಸವಾರರು ಈಗಾಗಲೇ ಸರ್ವೀಸ್‌ ರಸ್ತೆಯಲ್ಲಿ ದ್ವಿಮುಖವಾಗಿ ಚಲಿಸುತ್ತಿದ್ದು ಅಪಘಾತಗಳಿಗೆ ಅಹ್ವಾನ ನೀಡುತ್ತಿದೆ. ಒಂದು ರಸ್ತೆಯಿಂದ ಇನ್ನೊಂದು ರಸ್ತೆಗೆ ತೆರಳಲು ಕಿ.ಮೀಗಟ್ಟಲೇ ಹೋಗಬೇಕು. ಹೀಗಾಗಿ ವಾಹನ ಸವಾರರು ಕೆಳಸೇತುವೆ ಸಿಗುವವರೆಗೂ ಎದುರು ಬದಿಯಲ್ಲೇ ವಾಹನ ಚಾಲನೆ ಮಾಡುತ್ತಿರುವುದು ಪ್ರಾಣಕ್ಕೆ ಕುತ್ತು ತಂದಿದೆ.

ಸರ್ವೀಸ್‌ ರಸ್ತೆಗಳಲ್ಲಿ ಸ್ಥಳೀಯರು, ರೈತರು ನಡೆದುಕೊಂಡು ಹೋಗಲು ಸಣ್ಣ ಪಾದಾಚಾರಿ ಮಾರ್ಗವೂ ಇಲ್ಲದ ಕಾರಣ ಪ್ರಾಣಕ್ಕೆ ಕುತ್ತು ಬಂದಿದೆ. ಟೋಲ್‌ ಸಂಗ್ರಹ ಆರಂಭವಾದ ನಂತರ ಬಹುತೇಕ ವಾಹನಗಳು ಸರ್ವೀಸ್‌ ರಸ್ತೆಯಲ್ಲೇ ಓಡಾಡುತ್ತವೆ. ಆಗ ಸ್ಥಳೀಯ ರೈತರು, ಮಕ್ಕಳು, ಮಹಿಳೆಯರು ರಸ್ತೆ ದಾಟಲು, ರೈತರು ಹೊಲಕ್ಕೆ ಹೋಗುವುದು ಎಲ್ಲಿ ಎಂಬ ಪ್ರಶ್ನೆ ನಿರ್ಮಾಣವಾಗಿದೆ.

‘ರೈತರು ಜಾನುವಾರುಗಳನ್ನು ಹೊಡೆದುಕೊಂಡು ಹೊಲಕ್ಕೆ ತೆರಳಬೇಕು. ಪಾದಾಚಾರಿಗಳು ಓಡಾಡಲು ಸಣ್ಣ ಜಾಗವೂ ಇಲ್ಲದ ಕಾರಣ ಹೊಲಕ್ಕೆ ಹೋಗುವುದು ಹೇಗೆ ಎಂಬ ಪ್ರಶ್ನೆ ನಿರ್ಮಾಣವಾಗಿದೆ. ಸರ್ವೀಸ್‌ ರಸ್ತೆಯಲ್ಲೇ ನಡೆದುಕೊಂಡು ಹೋದರೆ ಪ್ರಾಣಕ್ಕೆ ಕುತ್ತು ಗ್ಯಾರಂಟಿ’ ಎಂದು ಹಳೇಬೂದನೂರು ಗ್ರಾಮದ ರೈತ ಶಂಕರೇಗೌಡ ಆತಂಕ ವ್ಯಕ್ತಪಡಿಸಿದರು.

ಶಾಲಾ ಮಕ್ಕಳಿಗೆ ಸಂಕಷ್ಟ: ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ನೂರಾರು ವಾಹನಗಳು ಸರ್ವೀಸ್‌ ರಸ್ತೆಯಲ್ಲೇ ಓಡಾಡುತ್ತವೆ. ಬಸ್‌ಗಳು ರಸ್ತೆ ಬದಿಯಲ್ಲಿ ನಿಂತು ಮಕ್ಕಳನ್ನು ಬಸ್‌ಗೆ ಹತ್ತಿಸಿಕೊಳ್ಳಲಾಗುತ್ತಿತ್ತು. ಆದರೆ, ಈಗ ಸರ್ವೀಸ್‌ ರಸ್ತೆಯಲ್ಲಿ ರಸ್ತೆ ಬದಿಯೇ ಇಲ್ಲವಾಗಿದೆ. ಈಗ ವಾಹನಗಳ ದಟ್ಟಣೆ ನಡುವೆ ಮಕ್ಕಳನ್ನು ಹತ್ತಿಸಿಕೊಳ್ಳುವುದು ಸವಾಲಾಗಿದೆ.

ಕಾಲೇಜುಗಳಿಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳು ಕೂಡ ಕಿರಿದಾದ, ಅವ್ಯವಸ್ಥೆಯಿಂದ ಕೂಡಿದ ಸರ್ವೀಸ್‌ ರಸ್ತೆಯಲ್ಲಿ ಬಸ್‌ ಹತ್ತಬೇಕಾಗಿದೆ. ವಿದ್ಯಾರ್ಥಿಗಳು ಯಾವ ಸ್ಥಳದಲ್ಲಿ ಬಸ್‌ಗೆ ಕಾಯಬೇಕು, ಎಲ್ಲಿ ಬಸ್‌ಗಳು ನಿಲುಗಡೆ ನೀಡುತ್ತವೆ ಎಂಬ ಬಗ್ಗೆ ಯಾರಿಗೂ ಮಾಹಿತಿ ನಿಲ್ಲ. ಮೊದಲು ಇದ್ದ ಬಸ್‌ ಶೆಲ್ಟರ್‌ಗಳನ್ನೂ ತೆರವುಗೊಳಿಸಲಾಗಿದೆ. ಗ್ರಾಮಗಳ ಮಾಹಿತಿ ನೀಡುವ ಫಲಕವೂ ಇಲ್ಲವಾಗಿದ್ದು, ಜನರು ಹತ್ತುವ, ಇಳಿಯುವ ಗ್ರಾಮಗಳ ಮಾಹಿತಿ ತಿಳಿಯದಾಗಿದೆ.

ಸ್ಥಳೀಯರು ಓಡಾಡಲು ಸಾರಿಗೆ ಸಂಸ್ಥೆ ಬಸ್‌ಗಳು ಕಡಿಮೆ. ಹೀಗಾಗಿ ವಿದ್ಯಾರ್ಥಿಗಳು, ಜನರು ಆಟೊಗಳನ್ನೇ ಆಶ್ರಯಿಸಿದ್ದಾರೆ. ಆಟೊಗಳು ರಸ್ತೆ ಮಧ್ಯೆ ನಿಂತಾಗ ಅಪಘಾತವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಹಳ್ಳಿಗಳ ಸಮೀಪ ವಾಹನಗಳ ನಿಲುಗಡೆಗೆ ಪ್ರತ್ಯೇಕ ಶೆಲ್ಟರ್‌ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಆದರೆ, ಸರ್ವೀಸ್‌ ರಸ್ತೆ ಕಿರಿದಾಗಿರುವ ಕಾರಣ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒತ್ತಾಯಕ್ಕೆ ಸ್ಪಂದಿಸಿಲ್ಲ.

ಚರಂಡಿಯ ದುರವಸ್ಥೆ: ಸರ್ವೀಸ್‌ ರಸ್ತೆಯಲ್ಲಿ ಚರಂಡಿಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಯಾವುದೇ ಯೋಜನೆ ಇಲ್ಲದೇ ರಸ್ತೆಯಿಂದ ಮೇಲ್ಮಟ್ಟಕ್ಕೆ ಚರಂಡಿ ನಿರ್ಮಿಸಲಾಗಿದೆ. ರಸ್ತೆಗೆ ಸಮಾನಾಂತರವಾಗಿ, ಇಳಿಜಾರಾಗಿ, ರಸ್ತೆಯ ನೀರು ಚರಂಡಿಗೆ ಹರಿಯುವಂತೆ ಚರಂಡಿ ನಿರ್ಮಾಣ ಮಾಡಬೇಕಾಗಿತ್ತು.

ಆದರೆ, ಚರಂಡಿಗಳನ್ನು ಸರ್ವೀಸ್‌ ರಸ್ತೆಗಿಂತಲೂ ಮೇಲ್ಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಇಂತಹ ಕಡೆಗಳಲ್ಲಿ ಚರಂಡಿ ವ್ಯರ್ಥವಾಗಲಿದ್ದು, ಹೆದ್ದಾರಿ ನಿರ್ಮಾಣದ ಉದ್ದೇಶವೇ ಹಾಳಾಗಲಿದೆ. ಜೋರು ಮಳೆ ಬಂದಾಗ ಸರ್ವೀಸ್‌ ರಸ್ತೆ ಮುಚ್ಚಿಕೊಳ್ಳಲಿದ್ದು, ಸಂಚಾರ ಬಂದ್‌ ಆಗುವ ಅಪಾಯವಿದೆ.

‘ಹೆದ್ದಾರಿಗಷ್ಟೇ ಪ್ರಾಮುಖ್ಯತೆ ಕೊಟ್ಟಿರುವ ಅಧಿಕಾರಿಗಳೂ ಸರ್ವೀಸ್‌ ರಸ್ತೆಯತ್ತ ತಿರುಗಿ ನೋಡುತ್ತಿಲ್ಲ. ಹೆದ್ದಾರಿಯಲ್ಲಿ ಸ್ಥಳೀಯರ ಹಿತವನ್ನು ಬಲಿಕೊಡಲಾಗಿದೆ’ ಎಂದು ಇಂಡುವಾಳು ಗ್ರಾಮದ ರೈತ ಮುಖಂಡ ಬಸವರಾಜು ಆರೋಪಿಸಿದರು.

ಕಗ್ಗತ್ತಲು; ದರೋಡೆಕೋರರ ಭಯ

6 ಪಥಕ್ಕಷ್ಟೇ ಪ್ರಾಮುಖ್ಯತೆ ನೀಡಿರುವ ಹೆದ್ದಾರಿ ಪ್ರಾಧಿಕಾರ ನಾಲ್ಕು ಪಥ ಎನ್ನಲಾದ ಸರ್ವೀಸ್‌ ರಸ್ತೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಮೇಲ್ಸೇತುವೆಗಳು ಹಾದು ಹೋಗಿರುವ ಕೆಳ ಭಾಗದಲ್ಲಿ ಕಗ್ಗತ್ತಲು ಕವಿದಿದೆ. ಸಂಜೆಯಾಗುತ್ತಿದ್ದಂತೆ ಈ ಭಾಗದಲ್ಲಿ ಜನಸಂದಣಿ ಕಡಿಮೆಯಾಗಲಿದ್ದು ಕಳ್ಳಕಾಕರ ಭಯ ಎದುರಾಗಿದೆ, ದರೋಡೆಗಳು ನಡೆಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಾರೆ.

ಕೆಳಸೇತುವೆಗಳ ಬಳಿ ಈವರೆಗೂ ಲೈಟ್ ಅಳವಡಿಸಿಲ್ಲ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ ಎಂದು ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ರಾತ್ರಿ ನಗರದಿಂದ ಹೊರಟರೆ ಇಂಡುವಾಳು ಆರಂಭವಾಗುತ್ತಿದ್ದಂತೆ ಭಯವೂ ಆರಂಭವಾಗುತ್ತದೆ. ಸೇತುವೆಯ ಕೆಳಗೆ ಯಾರು ಏನೂ ಮಾಡಿದರೂ ಕೇಳುವವರಿರುವುದಿಲ್ಲ. ಹೆದ್ದಾರಿ ನಿರ್ಮಾಣ ಮಾಡಿರುವ ಪ್ರಾಧಿಕಾರ ಸ್ಥಳೀಯರಿಗೆ ಭದ್ರತೆಯನ್ನೂ ನೀಡಬೇಕು’ ಎಂದು ಕಾಳೇನಹಳ್ಳಿ ಗ್ರಾಮದ ನಂಜೇಗೌಡ ಒತ್ತಾಯಿಸಿದರು.

ಸಂಪರ್ಕ ರಸ್ತೆ; ಹೋರಾಟಕ್ಕೆ ಸಿದ್ಧತೆ

ಜಿಲ್ಲಾ ವ್ಯಾಪ್ತಿಯಲ್ಲಿ ಮದ್ದೂರು, ಮಂಡ್ಯ, ಶ್ರಿರಂಗಪಟ್ಟಣಕ್ಕೂ ಹಾಗೂ ದಶಪಥಕ್ಕೆ ಸಂಬಂಧವೇ ಇಲ್ಲವಾಗಿದೆ. ಸ್ಥಳೀಯ ನಗರ ಮತ್ತು ಪಟ್ಟಣಗಳನ್ನು ಸಂಪರ್ಕಿಸುವ ಆಗಮನ, ನಿರ್ಗಮನ ಪಥ ಇನ್ನೂ ನಿರ್ಮಾಣವಾಗಿಲ್ಲ. ನಿರ್ಮಾಣದ ಮಾತು ಹಾಗಿರಲಿ ಅದಕ್ಕೆ ಬೇಕಾದ ಭೂಸ್ವಾಧೀನ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ.

ಸ್ಥಳೀಯ ನಗರಗಳನ್ನು ನಿರ್ಲಕ್ಷ್ಯ ಮಾಡಿ ಹೆದ್ದಾರಿ ನಿರ್ಮಾಣ ಮಾಡಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.

ದಶಪಥ ತಡೆಯ ಎಚ್ಚರಿಕೆ

ಸರ್ವೀಸ್‌ ರಸ್ತೆಯಲ್ಲಿ ಸೌಲಭ್ಯ ನೀಡದ ಪರಿಣಾಮ ಸ್ಥಳೀಯ ರೈತರು, ಸಾರ್ವಜನಿಕರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಸ್ಥಳೀಯರ ಬೇಡಿಕೆಗಳಿಗೆ ಮನ್ನಣೆ ನೀಡದೇ ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದಕ್ಕೆ ಅಸಮಾಧಾನವಿದೆ.

‘ಟೋಲ್‌ ಸಂಗ್ರಹ ಮಾಡುವುದಕ್ಕೂ ಮೊದಲೇ ಸಂಪರ್ಕ ರಸ್ತೆ ನಿರ್ಮಾಣ ಮಾಡಬೇಕು, ಸರ್ವೀಸ್‌ ರಸ್ತೆಗೆ ಸಕಲ ಸೌಲಭ್ಯ ಒದಗಿಸಬೇಕು. ಇಲ್ಲದಿದ್ದರೆ ದಶಪಥ ತಡೆದು ಹೋರಾಟ ನಡೆಸಲಾಗುವುದು’ ಎಂದು ರೈತಸಂಘದ ಮುಖಂಡರು ಎಚ್ಚರಿಸಿದರು.

***

ಹೆದ್ದಾರಿ ಕಾಮಗಾರಿಯ ಜೊತೆಜೊತೆಗೆ ಸರ್ವೀಸ್‌ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳಲಿದೆ. ಸ್ಥಳೀಯ ಗ್ರಾಮಸ್ಥರಿಗೂ ಸಕಲ ಸೌಲಭ್ಯ ನೀಡಲಾಗುವುದು. ಈ ಬಗ್ಗೆ ಭಯ ಬೇಡ
– ಶ್ರೀಧರ್‌, ಯೋಜನಾ ನಿರ್ದೇಶಕ, ಹೆದ್ದಾರಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT