ಬುಧವಾರ, ಆಗಸ್ಟ್ 4, 2021
27 °C
ಟೈಪಿಂಗ್‌ ಮೂಲಕವೇ ಕೃತಿ ರೂಪಿಸಿದ ನಿವೃತ್ತ ಅಧಿಕಾರಿ

ಬೈಬಲ್‌ಗೆ ಭಾವೈಕ್ಯ ರೂಪ ಕೊಟ್ಟ ದಿನಕರ್‌!

ಎಂ.ಎನ್‌.ಯೋಗೇಶ್‌‌ Updated:

ಅಕ್ಷರ ಗಾತ್ರ : | |

ಮಂಡ್ಯ: ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿರುತ್ತದೆ, ದೇವನೊಬ್ಬನಿಗೆ ಹಲವು ನಾಮಗಳಿರುತ್ತವೆ. ಹಿಂದೂಗಳ ವೇದ, ಉಪನಿಷತ್ತುಗಳಲ್ಲಿರುವ ತತ್ವಾದರ್ಶಗಳು ಕ್ರಿಶ್ಚಿಯನ್ನರ ಬೈಬಲ್‌, ಮುಸ್ಲಿಮರ ಕುರಾನ್‌ನಲ್ಲೂ ಇರುತ್ತವೆ. ಒಂದೇ ಸಂಸ್ಕಾರದಿಂದ ಸರ್ವಧರ್ಮಗಳು ಬಹುರೂಪ ಪಡೆದಿರುತ್ತವೆ...

ಕ್ರಿಶ್ಚಿಯನ್ನರ ಧರ್ಮಗ್ರಂಥ ಬೈಬಲ್‌ಗೆ ನಗರದ ನಿವೃತ್ತ ಅಧಿಕಾರಿಯೊಬ್ಬರು ಭಾವೈಕ್ಯ ರೂಪ ನೀಡಿದ್ದಾರೆ. ಇಡೀ ಗ್ರಂಥದ ಸಕಲ ಅಧ್ಯಾಯಗಳು, ವಚನ, ವಾಕ್ಯಗಳನ್ನು ಟೈಪಿಂಗ್‌ ಮಾಡಿ ಅದಕ್ಕೆ ಕೃತಿ ರೂಪ ಕೊಟ್ಟಿದ್ದಾರೆ. ತಮ್ಮ ಜೀವನದಲ್ಲಿ ಅಧ್ಯಯನ ಮಾಡಿದ ಬೈಬಲ್‌ ಗ್ರಂಥವನ್ನು ಸರಳವಾಗಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಟೈಪ್‌ ಮಾಡಿರುವುದು ವಿಶೇಷ ಎನಿಸುತ್ತದೆ.

ಅವರು ನಗರದ ಕುವೆಂಪು ನಗರದ ನಿವಾಸಿ ಕೆ.ವಿ.ದಿನಕರ್‌. ಅಬಕಾರಿ ಉಪ ಅಧೀಕ್ಷಕರಾಗಿ ನಿವೃತ್ತರಾಗಿರುವ ಅವರು ಮಂಡ್ಯ, ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ವೃತ್ತಿ ಮಾಡಿದ್ದಾರೆ. ಕನ್ನಡ ಬೈಬಲ್‌ ಗ್ರಂಥವನ್ನು ವಿಮರ್ಶಾತ್ಮಕವಾಗಿ ಕಂಡಿರುವ ಅವರು ಸರಳವಾದ ರೀತಿಯಲ್ಲಿ ನಿರೂಪಣೆ ಮಾಡಿದ್ದಾರೆ.

ಕೃತಿಯ ಪುಟ ತೆರೆಯುತ್ತಿದ್ದಂತೆ ಹಿಂದೂ, ಕ್ರೈಸ್ತ, ಮುಸ್ಲಿಂ ಧರ್ಮಗ್ರಂಥಗಳ ವಿವರ ನೀಡಿದ್ದಾರೆ. ಭಾರತದ ನಾಗರಿಕತೆ ಬಗ್ಗೆ ಬರೆದಿರುವ ಅವರು ಮೂಲ ನಿವಾಸಿಗಳಾದ ಆರ್ಯರ ಪ್ರಸ್ತಾಪ ಮಾಡಿದ್ದಾರೆ. ಧರ್ಮದ ಬಗ್ಗೆ ವೇದಗಳಲ್ಲಿ ಉಲ್ಲೇಖವಾಗಿರುವ ಅಂಶಗಳ ಮೇಲೆ ಬೆಳಕು ಚೆಲ್ಲಿದ್ದಾರೆ.

ನಂತರದ ಪುಟಗಳಲ್ಲಿ ಹಿಂದೂಗಳ ಪವಿತ್ರ ವೇದಗಳಲ್ಲಿರುಚ ಶ್ಲೋಕಗಳಿಗೆ ಅರ್ಥವಿವರಣೆ ನೀಡಿದ್ದಾರೆ. ವೇದಗಳಲ್ಲಿರುವ ಮಹತ್ವ ಬೈಬಲ್‌ನ ವಚನಗಳಲ್ಲೂ ಇದೆ ಎಂಬ ಬಗ್ಗೆ ಉಲ್ಲೇಖ ಮಾಡಿ ಎರಡೂ ಧರ್ಮಗಳಲ್ಲಿರುವ ಸಾಮ್ಯತೆ ಗುರುತಿಸಿದ್ದಾರೆ.

ನಂತರ ದಿನಕರ್‌ ಅವರು ಮಹಾಭಾರತದಲ್ಲಿ ‘ಓಂಕಾರ’ಕ್ಕೆ ಇರುವ ಪವಿತ್ರ ಸ್ಥಾನದ ಬಗ್ಗೆ ಮಾಹಿತಿ ಹಂಚಿಕೊಂಡಿದದ್ದಾರೆ.  ಓಂಕಾರ ಸ್ವರೂಪನಾದ ಭಗವಂತನು ಪಾಪಕರ್ಮಗಳನ್ನು ಸಂಪೂರ್ಣವಾಗಿ ತೊಳೆದುಹಾಕುತ್ತಾನೆ ಎಂಬ ಶ್ಲೋಕಕ್ಕೆ ಸಮಾನಾರ್ಥಕವಾಗಿ ಬೈಬಲ್‌ನಲ್ಲಿ ಇರುವ ವಾಕ್ಯಗಳು, ಅದರ ಅಧ್ಯಾಯ, ಪುಟಗಳ ಸಂಖ್ಯೆಯ ಮಾಹಿತಿ ನೀಡಿದ್ದಾರೆ. ಆ ಮೂಲಕ ಬೈಬಲ್‌ ಗ್ರಂಥಕ್ಕೆ ಭಾವೈಕ್ಯ ರೂಪ ಕೊಟ್ಟಿದ್ದಾರೆ.

ಚುಕ್ಕಿ ಚಿತ್ರ: ಕೃತಿಯ ನಡುವೆ ಅಲ್ಲಲ್ಲಿ ದಿನಕರ್‌ ಅವರು ಚುಕ್ಕಿ ಚಿತ್ರಗಳನ್ನು ರಚಿಸಿದ್ದಾರೆ. ಟೈಪಿಂಗ್‌ ಯಂತ್ರ ಬಳಸಿ ಚಿತ್ರ ಬಿಡಿಸಿದ್ದಾರೆ. ‘ಯೇಸು’ ಶಬ್ಧದಿಂದ ಬಿಡಿಸಿರುವ ಶಿಲುಬೆ ಚಿತ್ರ ಗಮನ ಸೆಳೆಯುತ್ತದೆ. ಜೊತೆಗೆ ಹೃದಯದ ಚಿತ್ರ, ನಕ್ಷತ್ರ ಚಿತ್ರಗಳು ಗಮನ ಸೆಳೆಯುತ್ತವೆ.

ಈ ಕಂಪ್ಯೂಟರ್‌, ಆಫ್‌ಸೆಟ್‌ ಪ್ರಿಂಟಿಂಗ್‌ ತಂತ್ರಜ್ಞಾನ ಯುಗದಲ್ಲಿ ದಿನಕರ್‌ ಅವರು ಅಳಿವಿನ ಅಂಚಿನಲ್ಲಿರುವ ಟೈಪಿಂಗ್‌ ಕಲೆಗೆ ಮರುಜೀವ ನೀಡುವ ಪ್ರಯತ್ನ ಮಾಡಿದ್ದಾರೆ.

***

ಹಲವು ವರ್ಷಗಳ ಕಾಲ ಅಧ್ಯಯನ ಮಾಡಿದ ಗ್ರಂಥವನ್ನು ಸರಳವಾಗಿ ಅರ್ಥೈಸುವ ಪ್ರಯತ್ನ ಮಾಡಿದ್ದೇನೆ. ಬಿಡುವು ಸಿಕ್ಕಾಗಲೆಲ್ಲಾ ಟೈಪ್‌ ಮಾಡಿದ್ದೇನೆ. ಹಲವರು ಮೆಚ್ಚುಗೆ ವ್ಯಕ್ತಪಡಿಸಿರುವುದು ಸಂತಸ ತಂದಿದೆ

–ಕೆ.ವಿ.ದಿನಕರ್‌, ಅಬಕಾರಿ ಇಲಾಖೆ ನಿವೃತ್ತ ಅಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು