ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ | ಸವಾರರ ನಿರ್ಲಕ್ಷ್ಯ; ಪೊಲೀಸರು ಹೈರಾಣ

ದಂಡ ವಿಧಿಸಿದರೂ ಹೆಲ್ಮೆಟ್‌ ಕಡ್ಡಾಯ ನಿಯಮ ಪಾಲಿಸದ ಬೈಕ್‌ ಸವಾರರು
Last Updated 6 ಸೆಪ್ಟೆಂಬರ್ 2022, 5:58 IST
ಅಕ್ಷರ ಗಾತ್ರ

ಮಂಡ್ಯ: ವಾಹನ ಸವಾರರ ಪ್ರಾಣ ರಕ್ಷಣೆಗೆಂದು ಹೆಲ್ಮೆಟ್‌ ಕಡ್ಡಾಯ ನಿಯಮ ಜಾರಿ ಮಾಡಿದ್ದರೂ ಬಹುತೇಕ ಸವಾರರು ನಿರ್ಲಕ್ಷ್ಯ ಮಾಡುತ್ತಿದ್ದಾರೆ.‌

ನಿಯಮ ಉಲ್ಲಂಘಿಸಿ ಪೊಲೀಸರಿಗೆ ಸಿಕ್ಕಿಬಿದ್ದಾಗ ದಂಡ ಪಾವತಿ ಮಾಡಿದರೂ ನಿಯಮ ಉಲ್ಲಂಘನೆ ಪ್ರಕರಣ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದ ಪೊಲೀಸರಿಗೂ ಕಿರಿಕಿರಿ ಉಂಟಾಗಿದೆ.

ಪದೇ ಪದೇ ನಿಯಮ ಉಲ್ಲಂಘಿಸುತ್ತಿರುವ ದ್ವಿಚಕ್ರ ವಾಹನ ಸವಾರರು ಪೊಲೀಸರು ತಪಾಸಣೆ ಮಾಡುವಾಗ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಪೊಲೀಸರು ಗದರಿಸಿದರೆ ಅವರ ಮೇಲೆಯೇ ಸಾರ್ವಜನಿಕವಾಗಿ ನಿಂದಿಸುತ್ತಿದ್ದು, ಸಂಚಾರ ಪೊಲೀಸರಿಗೆ ಕಿರಿಕಿರಿ ಉಂಟುಮಾಡುತ್ತಾರೆ.

ಬೈಕ್‌ ಸವಾರರು ಹೆಲ್ಮೆಟ್ ಹಾಕದೆ ಇರುವ ಪ್ರಕರಣಗಳು ಹೆಚ್ಚಾಗಿದ್ದು, ಆಗಾಗ ತಪಾಸಣೆ ಮಾಡಬೇಕು. ಹೆಲ್ಮೆಟ್‌ ಧರಿಸಿದರೆ ಅಪಘಾತವಾದಾಗ ಪ್ರಾಣ ರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂಬ ಬಗ್ಗೆ ಅರಿವು ಮೂಡಿಸುವ ಅಗತ್ಯವೂ ಇದೆ. ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಮಾತ್ರ ಹೆಲ್ಮೆಟ್‌ ಬಳಸುವ ಧೋರಣೆ ಹೆಚ್ಚಾಗಿದ್ದು ಇದು ಸರಿಯಲ್ಲ ಎನ್ನುತ್ತಾರೆ ಬೈಕ್‌ ಸವಾರರಾದ ತರಕಾರಿ ಮಹೇಶ್‌, ಎ.ವಿ.ರುದ್ರೇಶ, ಅಶೋಕ.

‘ವಾಹನ ತಪಾಸಣೆಗಾಗಿ ನಗರದಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ನಿಂತಿರುತ್ತೇವೆ. ಪೊಲೀಸ್‌ ವಾಹನ ಕಂಡ ತಕ್ಷಣವೇ ಹಿಂದೆ ಮುಂದೆ ನೋಡದೆ ಕೆಲವು ಬೈಕ್‌ ಸವಾರರು ‘ಯು ಟರ್ನ್‌’ ಮಾಡುತ್ತಾರೆ. ಇದರಿಂದ ಅಪಘಾತ ಸಂಭವಿಸುವ ಸಂದರ್ಭಗಳೇ ಹೆಚ್ಚು. ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗುತ್ತಾರೆ. ನಾವು ಅವರನ್ನು ಹಿಂಬಾಲಿಸುವದೂ ಇಲ್ಲ. ಆದರೂ ಬೆದರಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇದು ಮತ್ತಷ್ಟು ಅಪಾಯಕಾರಿಯಾಗಿದೆ. ದಂಡ ಪಾವತಿಸುವಾಗಲೂ ಚೌಕಾಸಿ ಮಾಡಿ ಕಿರಿಕಿರಿ ಉಂಟು ಮಾಡುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಸಂಚಾರ ಪೊಲೀಸ್‌ ಸಿಬ್ಬಂದಿ ಅಳಲು ತೋಡಿಕೊಂಡರು.

‘ಆಸ್ಪತ್ರೆಗೆ ಕರೆದುಕೊಂಡು ಹೋಗಲು ತರಾತುರಿಯಲ್ಲಿ ಬೈಕ್‌ ತೆಗೆದುಕೊಂಡು ಬಂದಿದ್ದೇನೆ. ಬೈಕ್‌ನಲ್ಲಿ ಮೂರು ಮಂದಿ ಬಂದಿರುವುದು ನಿಜ. ದಂಡ ಪಾವತಿಸುತ್ತೇನೆ. ಗದ್ದೆ ಕಡೆ ಹೋಗುತ್ತಿದ್ದೆ. ಹಾಗಾಗಿ ಹೆಲ್ಮೆಟ್‌ ತೆಗೆದುಕೊಂಡು ಬಂದಿಲ್ಲ. ಹೆಲ್ಮೆಟ್‌ ಕಚೇರಿಯಲ್ಲಿದೆ, ಸ್ನೇಹಿತರು ಬರ ಹೇಳಿದರೂ ಎಂದು ಇಷ್ಟು ದೂರ ಬಂದೆ...’ ಎಂದು ಕಾರಣ ನೀಡುವ ವಾಹನ ಸವಾರರು ಹೆಲ್ಮೆಟ್‌ ಧರಿಸುವುದಿಲ್ಲ. ಜತೆಗೆ ವಾಹನ ವಿಮೆಯನ್ನೂ ಮಾಡಿಸಿರುವುದಿಲ್ಲ. ವಾಹನದ ದಾಖಲೆ ಕೇಳಿದರೂ ಜನಪ್ರತಿನಿಧಿಗಳಿಗೆ ಮೊಬೈಲ್‌ ಕರೆ ಮಾಡಿ ಶಿಫಾರಸು ಮಾಡಿಸುವವರೇ ಹೆಚ್ಚು. ಈ ಕಾರಣದಿಂದ ನಿಯಮ ಉಲ್ಲಂಘಿಸುವವರ ನಿಯಂತ್ರಣ ಮಾಡುವುದೇ ಕಷ್ಟ ಎನ್ನುವುದು ಸಂಚಾರ ವಿಭಾಗದ ಪಿಎಸ್‌ಐಗಳ ಸಂಕಷ್ಟ.

ದಂಡ ವಸೂಲಿ ಮಾಡುವುದರ ನೆಪದಲ್ಲಿ ಕೆಲವು ಪೊಲೀಸರು ರಶೀದಿ ನೀಡದೆ ಹಣ ತೆಗೆದುಕೊಳ್ಳುತ್ತಿದ್ದಾರೆ. ಈ ಕಾರಣದಿಂದಲೇ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಮತ್ತು ದಾಖಲೆಗಳನ್ನು ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ಈ ವ್ಯವಸ್ಥೆ ಬದಲಾಗಬೇಕು. ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಸವಾರರು ಕಾನೂನು ಪಾಲನೆ ಮಾಡುತ್ತಾರೆ ಎಂದು ಕದಂಬ ಸೈನ್ಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT