ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗಮಂಗಲಕ್ಕೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ

Published : 16 ಸೆಪ್ಟೆಂಬರ್ 2024, 21:00 IST
Last Updated : 16 ಸೆಪ್ಟೆಂಬರ್ 2024, 21:00 IST
ಫಾಲೋ ಮಾಡಿ
Comments

ನಾಗಮಂಗಲ (ಮಂಡ್ಯ ಜಿಲ್ಲೆ): ಗಲಭೆಯಿಂದ ಇಲ್ಲಿ ಹಾನಿಯಾಗಿರುವ ಅಂಗಡಿಗಳಿಗೆ ಮತ್ತು ಬದ್ರಿಕೊಪ್ಪಲು ಬಡಾವಣೆಗೆ ಸೋಮವಾರ ಬಿಜೆಪಿಯ ಸತ್ಯಶೋಧನಾ ಸಮಿತಿ ಸದಸ್ಯರು ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ಕಾಣದ ಕೈಗಳನ್ನು ಪತ್ತೆ ಮಾಡಲು ಸಮಗ್ರ ತನಿಖೆಯಾಗಬೇಕು. ‌ಮಾದಕ ವಸ್ತು ಸೇವನೆ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತಿವೆ. ಗಲಭೆಯ ಆಳ-ಅಗಲ ಹೊರಬರಬೇಕು’ ಎಂದು  ಸಮಿತಿ ಸದಸ್ಯ ಹಾಗೂ ಶಾಸಕ ಸಿ.ಎನ್‌. ಅಶ್ವತ್ಥನಾರಾಯಣ ಒತ್ತಾಯಿಸಿದರು.

‘ಗಣೇಶ ಮೂರ್ತಿ ಇಟ್ಟವರನ್ನೇ ಬಂಧಿಸುವ ಸರ್ಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ಕೊಡಲೆಂದೇ ಬಂದಿದ್ದೇವೆ. ನೊಂದವರಿಗೆ ನ್ಯಾಯ, ಪರಿಹಾರ ಸಿಗಬೇಕೆಂಬುದು ನಮ್ಮ ಉದ್ದೇಶ. ವರದಿಯನ್ನು ಪಕ್ಷದ ವೇದಿಕೆಯಲ್ಲಿಡುತ್ತೇವೆ, ಸರ್ಕಾರಕ್ಕೂ ಕೊಡುತ್ತೇವೆ. ಸದನದಲ್ಲೂ ಕೂಲಂಕಷವಾಗಿ ಚರ್ಚಿಸುತ್ತೇವೆ’ ಎಂದರು. 

ಮಾಜಿ ಐಪಿಎಸ್‌ ಅಧಿಕಾರಿ ಭಾಸ್ಕರರಾವ್‌ ಮಾತನಾಡಿ, ‘ಇದು ಪೂರ್ವನಿಯೋಜಿತ. ಮುಸ್ಲಿಮರಿಗಿಂತ ಹಿಂದೂಗಳಿಗೆ ಹೆಚ್ಚು ನಷ್ಟವಾಗಿದೆ’ ಎಂದರು.  ಸಮಿತಿಯ ಸದಸ್ಯರಾದ ಶಾಸಕ ಬೈರತಿ ಬಸವರಾಜ, ಮಾಜಿ ಸಚಿವ ಕೆ.ಸಿ. ನಾರಾಯಣಗೌಡ, ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಲಕ್ಷ್ಮಿ ಅಶ್ವಿನ್‌ಗೌಡ ಉಪಸ್ಥಿತರಿದ್ದರು.

ಬಂಧನ ಭೀತಿಯಿಂದ ನಾಗಮಂಗಲದ 400 ಮಂದಿ ಊರು ಬಿಟ್ಟಿದ್ದಾರೆ. ಅವರಿಗೆ ನಿರೀಕ್ಷಣಾ ಜಾಮೀನು ಕೊಡಿಸುತ್ತೇವೆ. ನ್ಯಾಯಾಂಗ ಹೋರಾಟಕ್ಕೂ ನೆರವು ನೀಡುತ್ತೇವೆ –
ವಿವೇಕ ಸುಬ್ಬಾರೆಡ್ಡಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ
ನಾಗಮಂಗಲದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಹೀಗಿರುವಾಗ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ ನೀಡಿದೆ. ವರದಿಯನ್ನು ಅವರ ಪಕ್ಷಕ್ಕೆ ಕೊಡಲಿ. ಆದರೆ ರಾಜಕೀಯ ಮಾಡುವುದು ಸರಿಯಲ್ಲ
ಜಿ.ಪರಮೇಶ್ವರ್ ಗೃಹ ಸಚಿವ (ಮದ್ದೂರಿನಲ್ಲಿ ನೀಡಿದ ಹೇಳಿಕೆ)

ಜಿಹಾದಿಗಳ ಆಟ ಮಿತಿ ಮೀರಿದೆ: ವಿಎಚ್‌ಪಿ

ನಾಗಮಂಗಲ (ಮಂಡ್ಯ): ‘ಕಾಂಗ್ರೆಸ್‌ ಸರ್ಕಾರ ಬಂದ ಬಳಿಕ ಜಿಹಾದಿಗಳ ಆಟ ಮಿತಿ ಮೀರಿದೆ. ನಿನ್ನೆ ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ಟೀನ್ ಧ್ವಜ ಹಾರಿಸಲಾಗಿದೆ. ರಾಜ್ಯದ ವಿವಿಧೆಡೆ ಗಲಭೆಗಳಾಗುತ್ತಿವೆ. ಕಾಂಗ್ರೆಸ್‌ ಸರ್ಕಾರದ ತುಷ್ಟೀಕರಣ ನೀತಿಯೇ ಇದಕ್ಕೆ ಕಾರಣ’ ಎಂದು ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ದಕ್ಷಿಣ ಪ್ರಾಂತ್ಯ ಧರ್ಮಪ್ರಚಾರ ಪ್ರಮುಖ ಸೂರ್ಯನಾರಾಯಣ ಆರೋಪಿಸಿದರು. ‘ನಿಷೇಧಿತ ಸಂಘಟನೆಯಾದ ಪಿ.ಎಫ್‌.ಐ ರಾಜ್ಯದಲ್ಲಿ ಶಾಂತಿ ಕೆಡಿಸಲು ಸಂಚು ಮಾಡುತ್ತಿದೆ. ಮಾಸ್ಕ್‌ ಖರೀದಿ ಪೆಟ್ರೋಲ್‌ ಬಾಂಬ್‌ ಎಲ್ಲವೂ ಪೂರ್ವನಿಯೋಜಿತ. ನಾಗಮಂಗಲ ಗಲಭೆಯಲ್ಲಿ ರೌಡಿಶೀಟರ್‌ಗಳು ಭಾಗಿಯಾಗಿದ್ದಾರೆ. ‘ಕೋಕಾ ಕೇಸ್‌’ ದಾಖಲಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT