ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ | ಇಂಧನ ದರ ಏರಿಕೆ; ಬಿಜೆಪಿ ಪ್ರತಿಭಟನೆ

ಪೆಟ್ರೋಲ್‌ ಬೆಲೆ ಇಳಿಸಲು ಆಗ್ರಹ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Published 21 ಜೂನ್ 2024, 5:24 IST
Last Updated 21 ಜೂನ್ 2024, 5:24 IST
ಅಕ್ಷರ ಗಾತ್ರ

ಮಂಡ್ಯ: ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಪಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಜೆ.ಸಿ.ವೃತ್ತದ ಬಳಿ ಜಮಾಯಿಸಿದ ಕಾರ್ಯಕರ್ತರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳುಗಳ ಸರಮಾಲೆ ಕಟ್ಟಿ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕಾಂಗ್ರೆಸ್‌ನವರ ಆಟ ನಡೆಯುವುದಿಲ್ಲ. ಸತ್ಯ ಏನೆಂಬುದನ್ನು ರಾಜ್ಯದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಖರಿ ರಾಜ್ಯಕ್ಕೆ ಕಪ್ಪು ಚುಕ್ಕೆ ತರುವ ರೀತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾಲಿನ ದರ ಹೆಚ್ಚಳ, ಮೋಟಾರ್ ವಾಹನ ತೆರಿಗೆ ದರ ಹೆಚ್ಚಳ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯುವ ತನಕ ಪ್ರತಿಭಟನೆ ನಿರಂತರವಾಗಿರುತ್ತದೆ. ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ ಪೆಟ್ರೋಲ್, ಡೀಸೆಲ್‌ಗೆ ₹7 ತೆರಿಗೆ ಕಡಿಮೆ ಮಾಡಿದ್ದರು. ಬಿಜೆಪಿ ಸರ್ಕಾರ ಇರುವ ಅರುಣಾಚಲ ಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಇಲ್ಲಿಗಿಂತ ₹10 ಕಡಿಮೆ ಇದೆ ಎಂದು ಹೇಳಿದರು. 

ಇಂಧನ ದರ ಏರಿಕೆಯಾದರೆ ಅದರ ನೇರ ಹೊಡೆತ ಬಡವರ ಮೇಲೆ ಬೀಳುತ್ತದೆ. ಹಾಗಾಗಿ ಸರ್ಕಾರ ತಕ್ಷಣ ಬೆಲೆ ಏರಿಕೆ ಮಾಡಿರುವ ದರವನ್ನು ಇಳಿಸಬೇಕು. ಜನರ ಕಿಸೆಯನ್ನು ಬರಿದು ಮಾಡದೇ ಆಡಳಿತ ನಡೆಸುವ ಮಾರ್ಗವಿದ್ದರೆ ಮುನ್ನಡೆಯಿರಿ. ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುವ ಸರಮಾಲೆ ಹೆಣೆಯುವ ವಸೂಲಿ ಯೋಜನೆಗಳಿದ್ದರೆ ಈ ಕೂಡಲೇ ರಾಜೀನಾಮೆ ಕೊಟ್ಟು ಪ್ರಜೆಗಳನ್ನು ಉಳಿಸಿ ಎಂದು ಆಗ್ರಹಿಸಿದರು.

ಮುಖಂಡರಾದ ಅಶೋಕ್‌ ಜಯರಾಂ, ವಸಂತ್‌ ಕುಮಾರ್, ಸಿ.ಟಿ.ಮಂಜುನಾಥ್‌, ಶಿವಕುಮಾರ ಆರಾಧ್ಯ, ವಿವೇಕ್‌, ಹೊಸಹಳ್ಳಿ ಶಿವು, ಚಾಮರಾಜು, ಸಿದ್ದರಾಜುಗೌಡ, ಭೀಮೇಶ್‌, ಶಂಕರ್‌, ಚಂದ್ರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT