ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಜೋಡೆತ್ತು ಎಂದರೆ ಸೀನಪ್ಪಗೆ ಪಂಚಪ್ರಾಣ

ಸಂಕ್ರಾಂತಿ ಹಬ್ಬಕ್ಕೆ ಕಿಚ್ಚು ಹಾಯಿಸಲು ಸಕಲ ಸಿದ್ಧತೆ, ಎತ್ತುಗಳಿಗೆ ಅಲಂಕಾರ
Last Updated 13 ಜನವರಿ 2021, 19:30 IST
ಅಕ್ಷರ ಗಾತ್ರ

ಮಂಡ್ಯ: ಗಾಂಧಿನಗರದ ನಿವಾಸಿ ಸೀನಪ್ಪ ಅವರಿಗೆ ಎತ್ತುಗಳೆಂದರೆ ಸಾಕ್ಷಾತ್‌ ದೇವರಿಗೆ ಸಮ. ಅವರು ಮುಂಜಾನೆದ್ದು ದೇವರಿಗೆ ನಮಸ್ಕಾರ ಮಾಡುವುದಕ್ಕೂ ಮೊದಲು ಕೊಟ್ಟಿಗೆಗೆ ತೆರಳಿ ಎತ್ತುಗಳಿಗೆ ನಮಸ್ಕಾರ ಮಾಡುತ್ತಾರೆ.

‘ಎತ್ತಿನ ಸೀನಪ್ಪ’ ಎಂದೇ ಪ್ರಸಿದ್ಧಿ ಪಡೆದಿರುವ ಅವರು ಈ ಸಂಕ್ರಾಂತಿ ಸಂಭ್ರಮಕ್ಕೆ ತಮ್ಮ ಜೋಡೆತ್ತುಗಳನ್ನು ತೊಳೆದು, ಕೋಡುಗಳಿಗೆ ಎಣ್ಣೆ ಹಚ್ಚಿ ಅಲಂಕಾರ ಮಾಡುವಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆಯಲಿರುವ ಕಿಚ್ಚು ಹಾಯಿಸುವ ಸಮಾರಂಭದಲ್ಲಿ ಸಂಭ್ರಮದಿಂದ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಸದ್ಯ ಸೀನಪ್ಪ ಅವರ ಬಳಿ ₹4ಲಕ್ಷ ಬೆಲೆ ಬಾಳುವ ಜೋಡೆತ್ತುಗಳಿವೆ. ಇವುಗಳನ್ನು ಹುಬ್ಬಳ್ಳಿಯಿಂದ ತಂದಿದ್ದು, ಕಳೆದ ಒಂದು ವರ್ಷದಿಂದ ಪೌಷ್ಟಿಕ ಆಹಾರ ನೀಡಿ, ದಷ್ಟಪುಷ್ಟವಾಗಿ ಸಾಕಿದ್ದಾರೆ. ಮತ್ತೆರಡು ಕರುಗಳಿದ್ದು ₹1.2ಲಕ್ಷ ಮೌಲ್ಯ ಹೊಂದಿವೆ. ಇವುಗಳನ್ನು ಅವರಿಗೆ ಹೊಂದುವ ರೀತಿಯಲ್ಲಿ ಪೌಷ್ಟಿಕ ಆಹಾರ ನೀಡಿ ಸಾಕಿ ಸಲಹುತ್ತಿದ್ದಾರೆ.

ಎತ್ತುಗಳೆಂದರೆ ಸೀನಪ್ಪ ಅವರಿಗೆ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿ. ಹಲವು ಉತ್ಸವಗಳಲ್ಲಿ ಅವರ ಎತ್ತುಗಳು ಭಾಗವಹಿಸಿ ಬಹುಮಾನ ಗೆದ್ದಿವೆ. ಜಾತ್ರೆ, ಸಂತೆ, ಕೃಷಿ ಮೇಳಗಳಲ್ಲಿ ಎತ್ತುಗಳು ಭಾಗವಹಿಸಿವೆ. ಎತ್ತುಗಳ ಆರೋಗ್ಯದ ಕಾಳಜಿ ಮಾಡುವ ಅವರು ಕಾಲಕಾಲಕ್ಕೆ ಲಸಿಕೆ ಹಾಕಿಸಿದ್ದಾರೆ.

ಕಟುಕರಿಗೆ ಎತ್ತು ನೀಡದ ಸೀನಪ್ಪ: ಪ್ರಸ್ತುತ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದ್ದು, ಅನುಪಯಕ್ತ ಹಸುಗಳನ್ನು ಏನು ಮಾಡುವುದು ಎಂಬ ಪ್ರಶ್ನೆ ರೈತರಲ್ಲಿ ಸಾಮಾನ್ಯವಾಗಿದೆ. ಮೊದಲು ವಯಸ್ಸಾದ ಜಾನುವಾರುಗಳನ್ನು ಕಟುಕರಿಗೆ ಮಾರುತ್ತಿದ್ದರು. ಈಗ ಕಾಯ್ದೆಯ ಭಯದಿಂದ ಮಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದರೆ ಸೀನಪ್ಪ ಅವರು ಎಂದಿಗೂ ತಾವು ಸಾಕಿದ ಎತ್ತುಗಳನ್ನು ಕಟುಕರಿಗೆ ನೀಡಿಲ್ಲ. ಎತ್ತುಗಳಿಗೆ ಏನೋ ತೊಂದರೆ ಆಯಿತು, ಅದು ಬದುಕುವುದಿಲ್ಲ ಎಂದಾದರೆ ಹಣ ನಷ್ಟ ಆಗುವುದನ್ನು ತಪ್ಪಿಸಲು ಕೆಲವರು ಅವುಗಳನ್ನು ಮಾರಾಟ ಮಾಡುತ್ತಾರೆ. ಆದರೆ ಸೀನಪ್ಪ ಅವರು ನಷ್ಟವಾದರೂ ಪ್ರೀತಿಯಿಂದ ಸಾಕಿದ ಜಾನುವಾರುವನ್ನು ಕಟುಕರಿಗೆ ನೀಡದೆ ಗೌರವಯುತವಾಗಿ ನಡೆಸಿಕೊಳ್ಳುತ್ತಾರೆ. ಸಹಜವಾಗಿ ಮೃತಪಟ್ಟರೆ ಅಂತ್ಯಸಂಸ್ಕಾರ ಮಾಡುತ್ತಾರೆ.

ಅದು 1999ರಲ್ಲಿ ಪ್ರೀತಿಯಿಂದ ಸಾಕಿದ್ದ ಎತ್ತಿನ ಕಾಲು ಮುರಿದಿತ್ತು. ಇದರಿಂದ ಮೇಲೇಳಲು ಆಗದಂತಾಗಿತ್ತು. ನಂತರ ವೈದ್ಯರನ್ನು ಕರೆಸಿ ಪರೀಕ್ಷಿಸಿದಾಗ ಗುಣಪಡಿಸಲು ಆಗುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಸಾಕಷ್ಟು ಜನರು ಕಟುಕರಿಗೆ ಕೊಟ್ಟು ಬಿಡಲು ಸಲಹೆ ನೀಡುತ್ತಾರೆ. ಅಲ್ಲದೆ ₹1,2600 ಖರೀದಿಸಲು ವ್ಯಾಪಾರಿಯೊಬ್ಬ ಸಿದ್ಧನಾಗಿದ್ದ. ಆದರೆ ಅದಕ್ಕೆ ಒಪ್ಪದ ಸೀನಪ್ಪ ಮೈಸೂರಿನ ಹಸು ಸಾಕಾಣಿಕೆ ಕೇಂದ್ರಕ್ಕೆ ಬಿಟ್ಟು ಬಂದರು.

ಇದಲ್ಲದೆ ಇನ್ನೂ ಮೂರು ಎತ್ತುಗಳು ಕಾಲುಗಳು ಮುರಿದಿದ್ದವು. ಒಂದು ಎತ್ತು ಸಹಜವಾಗಿ ಸಾವನ್ನಪ್ಪಿತ್ತು. ಅದನ್ನು ಮಣ್ಣು ಮಾಡಿದರು. ‘ಎತ್ತುಗಳ ಮೇಲಿರುವ ಪ್ರೀತಿಯಿಂದ ನಾನು ಅವುಗಳನ್ನು ಸಾಕಣೆ ಮಾಡುತ್ತೇನೆ. ಅದರೊಂದಿಗೆ ಭಾವನಾತ್ಮಕ ಸಂಬಂಧ ಇದೆ’ ಎಂದು ಸೀನಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT