ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಸಂಖ್ಯೆ ಹೆಚ್ಚಳ: ಮೇವು ಕೊರತೆ

ಗೋವುಗಳ ಸಾಕಣೆ ಗೋಶಾಲೆಗಳಿಗೂ ಸವಾಲು, ಅನುದಾನ ಹೆಚ್ಚಳ ಮಾಡುವಂತೆ ಒತ್ತಾಯ
Last Updated 10 ಮಾರ್ಚ್ 2021, 14:34 IST
ಅಕ್ಷರ ಗಾತ್ರ

ಮಂಡ್ಯ: ರಾಜ್ಯ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾದ ನಂತರ ಜಿಲ್ಲೆಯಲ್ಲಿರುವ ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಗೋಶಾಲೆಗಳಲ್ಲೂ ಮೇವಿನ ಕೊರತೆ ಉಂಟಾಗಿದ್ದು ಜಾನುವಾರು ಸಾಕಣೆ ಸವಾಲಾಗಿ ಪರಿಣಮಿಸಿದೆ.

ಕಾಯ್ದೆಯ ಜಾರಿ ಪರಿಣಾಮದಿಂದಾಗಿ ವಯಸ್ಸಾದ ಗೋವುಗಳು, ಗಂಡು ಕರುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ಜಾನುವಾರುಗಳನ್ನು ಗೋಶಾಲೆಗಳಿಗೆ ತಂದು ಬಿಟ್ಟು ಹೋಗುತ್ತಿದ್ದಾರೆ. ಹಾಲು ಕರೆಯುವ ಮಿಶ್ರತಳಿ ಹಸುಗಳ ಗಂಡು ಕರುವನ್ನು ರೈತರು ಸಾಕಣೆ ಮಾಡಲು ಇಷ್ಟಪಡುತ್ತಿಲ್ಲ. ಮಾರಾಟ ಮಾಡಲಾಗದ ಸ್ಥಿತಿಯಲ್ಲಿ ಕರುಗಳನ್ನು ಕೆ.ಆರ್‌.ಪೇಟೆ ತಾಲ್ಲೂಕು ಗವಿರಂಗನಾಥಸ್ವಾಮಿ ದೇವಾಲಯದ ಕಾರಂಚಿನಲ್ಲಿ ಬಿಟ್ಟುಬರುತ್ತಿದ್ದಾರೆ ಎಂಬ ಸುದ್ದಿ ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದೆ.

ಗೋಶಾಲೆಗಳಲ್ಲಿ ಏಕಾಏಕಿ ಗೋವುಗಳ ಸಂಖ್ಯೆ ಹೆಚ್ಚಳವಾಗಿರುವ ಕಾರಣ ಅವುಗಳಿಗೆ ಮೇವು ಒದಗಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಗೋಶಾಲೆಗಳಿಗೆ ಅವಶ್ಯವಿರುವ ಮೇವನ್ನು ಅಲ್ಲಿಯ ಜಮೀನಿನಲ್ಲೇ ಬೆಳೆದುಕೊಳ್ಳಲಾಗುತ್ತದೆ. ಇಲ್ಲವೇ, ಹಣ ಕೊಟ್ಟು ಮೇವು ಖರೀದಿಸಬೇಕು. ಮೇವಿನ ಬೆಲೆ ಗಗನಕ್ಕೇರಿದ್ದು ಗೋಸಾಕಣೆ ಕಡುಕಷ್ಟವಾಗಿದೆ. ಮೇವಿಗಾಗಿ, ಕರುಗಳಿಗೆ ಹಾಲು ಪೂರೈಕೆಗಾಗಿ ಗೋಶಾಲೆ ಸಿಬ್ಬಂದಿ ದಾನಿಗಳ ಮೊರೆ ಹೋಗುತ್ತಿದ್ದಾರೆ.

ಪಾಂಡವಪುರ ತಾಲ್ಲೂಕು ದೊಡ್ಡಬ್ಯಾಡರಹಳ್ಳಿ ಸಮೀಪ ಇರುವ ಚೈತ್ರಾ ಗೋಶಾಲೆಯಲ್ಲಿ ಈಗ ಗೋವುಗಳ ಸಂಖ್ಯೆ 800ಕ್ಕೇರಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ನಂತರ ಏಕಾಏಕಿ 250ಕ್ಕೂ ಹೆಚ್ಚು ಜಾನುವಾರುಗಳು ಬಂದಿವೆ. ಅವುಗಳಲ್ಲಿ ಶೇ 90ರಷ್ಟು ಗಂಡು ಕರುಗಳೇ ಆಗಿವೆ. ರೈತರು ಎಲ್ಲೆಂದರಲ್ಲಿ ಬಿಟ್ಟುಬಂದಿದ್ದ ಕರುಗಳನ್ನು ಗೋಶಾಲೆ ಸಿಬ್ಬಂದಿ ರಕ್ಷಿಸಿದ್ದಾರೆ. ಅವುಗಳ ಆರೈಕೆಗೆ ಬೇಕಾದ ಹಾಲು, ಮೇವು ಒದಗಿಸುವುದು ಸಿಬ್ಬಂದಿಗೆ ಸವಾಲಾಗಿದೆ.

‘ಕರುಗಳಿಗೆ ಹಾಲು ಒದಗಿಸುವುದು ಕಷ್ಟ. ಬೇರೆ ಊರುಗಳಿಗೆ ತೆರಳಿ ಹಾಲು ತರಬೇಕಾಗಿದೆ. ಗೋವುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಅವುಗಳನ್ನು ಸಾಕಣೆ ಮಾಡುವುದು ಸುಲಭವಲ್ಲ’ ಎಂದು ಗೋಶಾಲೆ ಸಿಬ್ಬಂದಿಯೊಬ್ಬರು ತಿಳಿಸಿದರು.

ಅನುದಾನಕ್ಕೆ ಮನವಿ: ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಐದು ಗೋಶಾಲೆಗಳು ಜಿಲ್ಲಾ ವ್ಯಾಪ್ತಿಯಲ್ಲಿವೆ. ದೊಡ್ಡಬ್ಯಾಡರಹಳ್ಳಿ ಚೈತ್ರಾ ಗೋಶಾಲೆ, ಪಾಂಡವಪುರ ತಾಲ್ಲೂಕು ಯತಿರಾಜ ಸೇವಾ ಟ್ರಸ್ಟ್‌ ಗೋಶಾಲೆ, ನಾಗಮಂಗಲ ತಾಲ್ಲೂಕು ಹಡೇನಹಳ್ಳಿಯ ಶ್ರೇಯಸ್‌ ಇಂಟರ್‌ನ್ಯಾಷನಲ್‌ ಫೌಂಡೇಷನ್‌ ಗೋಶಾಲೆ, ಆದಿಚುಂಚನಗಿರಿ ಮಠದ ವತಿಯಿಂದ ನಡೆಯುವ ನಾಗಮಂಗಲ ಹಾಗೂ ಕೊಮ್ಮೇರಹಳ್ಳಿ ಗೋಶಾಲೆಗಳು ಸರ್ಕಾರದ ಅನುದಾನದಿಂದ ನಡೆಯುತ್ತಿವೆ. ಈಗ ಪ್ರತಿ ಗೋಶಾಲೆಯಲ್ಲೂ ಜಾನುವಾರುಗಳ ಸಂಖ್ಯೆ ಸಾವಿರದ ಗಡಿ ಸಮೀಪಿಸುತ್ತಿದೆ.

ಗೋವುಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೋಶಾಲೆಗಳ ಸಿಬ್ಬಂದಿ ಸರ್ಕಾರದಿಂದ ನೀಡುವ ಅನುದಾನವನ್ನು ಹೆಚ್ಚಳ ಮಾಡಬೇಕು ಎಂದು ಪಶು ಸಂಗೋಪನಾ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.

‘ಅನುದಾನ ಹೆಚ್ಚಳ ಕುರಿತಾದ ಮನವಿಯಲ್ಲಿ ಸರ್ಕಾರದ ಗಮನಕ್ಕೆ ತರಲಾಗಿದೆ. ಸದ್ಯ ನಿಯಮಿತವಾಗಿ ಗೋಶಾಲೆಗಳಿಗೆ ಹಣ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮಂಜುನಾಥ್‌ ತಿಳಿಸಿದರು.

*******

ಗೊಬ್ಬರ, ಗಂಜಲ ಬಿಟ್ಟರೆ ಏನಿಲ್ಲ...

‘ಸರ್ಕಾರ ದಿನಕ್ಕೆ ಒಂದು ಹಸುವಿಗೆ ₹ 17 ನೀಡುತ್ತದೆ. ಗೋವುಗಳ ಮಿತಿಯನ್ನು 200ಕ್ಕೆ ಮಿತಿಗೊಳಿಸಲಾಗಿದೆ. ಗೋಶಾಲೆಯಲ್ಲಿ ಅದಕ್ಕಿಂತ ಹೆಚ್ಚು ಜಾನುವಾರುಗಳಿದ್ದು ಸಾಕಣೆ ಕಷ್ಟವಾಗಿದೆ. ವಯಸ್ಸಾದ ಜಾನುವಾರು, ಕರುಗಳಿಂದ ಗೊಬ್ಬರ, ಗಂಜಲ ಬಿಟ್ಟರೆ ಮತ್ತೇನೂ ಸಿಗುವುದಿಲ್ಲ’ ಎಂದು ಗೋಶಾಲೆಯೊಂದರ ಸಿಬ್ಬಂದಿ ಹೇಳಿದರು.

‘ಗೋಶಾಲೆ ನಿರ್ವಹಣೆಗೆ ಕಾರ್ಮಿಕರ ಕೊರತೆ ಹೆಚ್ಚಾಗಿದೆ, ಸಗಣಿ ಎತ್ತಲು ಬರುವವರು ತೀರಾ ಕಡಿಮೆ. ಜಾನುವಾರುಗಳ ಚಿಕಿತ್ಸೆಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ನೀರಿಗಾಗಿ ಕೊಳವೆ ಬಾವಿ ಹಾಕಿಸಿಕೊಳ್ಳಬೇಕು, ಇಲ್ಲದಿದ್ದರೆ ಹಣ ಕೊಟ್ಟು ಟ್ಯಾಂಕರ್‌ ನೀರು ತರಬೇಕು. ಗೋಪಾಲರು ಎಲ್ಲಿಂದಲೋ ಗೋವುಗಳನ್ನು ತಂದು ಬಿಡುತ್ತಾರೆ. ನಾವು ಪೊಲೀಸ್‌ ಠಾಣೆ, ಕೋರ್ಟ್‌ಗಳಿಗೆ ಅಲೆಯಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT