ಮಂಡ್ಯ: ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಬಿಜೆಪಿ ಹಾಗೂ ಇತರ ಸಂಘಟನೆಗಳ ಮುಖಂಡರು ಕಿವಿಯಲ್ಲಿ ಚೆಂಡು ಹೂ ಮುಡಿದು, ಕೈಯಲ್ಲಿ ಕುಡಿಕೆ ಹಿಡಿದು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ರೈತರ ಕಿವಿಗೆ ಚೆಂಡು ಹೂವು ಮುಡಿಸಿದೆ. ಕೆಆರ್‌ಎಸ್ ಜಲಾಶಯಲ್ಲಿ ಇರುವ ಕಡಿಮೆ ನೀರನ್ನೂ ತಮಿಳುನಾಡಿಗೆ ಹರಿಸುತ್ತಿದೆ. ರೈತರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸರ್ಕಾರ ರೈತರ ಕಿವಿಗೆ ಚೆಂಡು ಹೂವು ಮುಡಿಸಿತಲ್ಲಪ್ಪೋ, ಕುಡಿಕೆ ನೀರನ್ನೂ ಹರಿಸಿತಲ್ಲಪ್ಪೋ’ ಎಂದು ಘೋಷಣೆ ಕೂಗಿದರು.
ನಗರದ ಜೆ.ಸಿ.ವೃತ್ತದಲ್ಲಿ ಬೆಂಗಳೂರಿನಿಂದ ಬಂದಿದ್ದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸ್ವಾಮೀಜಿ ಮೆರವಣಿಗೆ: ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಜೆ.ಸಿ.ವೃತ್ತದಿಂದ ಸರ್‌ಎಂವಿ ಪ್ರತಿಮೆವರೆಗೂ ಮೆರವಣಿಗೆಯಲ್ಲಿ ಬಂದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ತಮಿಳುನಾಡಿನಲ್ಲಿರುವ ರಾಜಕೀಯ ಇಚ್ಚಾಶಕ್ತಿ ನಮ್ಮ ಸರ್ಕಾರದಲ್ಲಿ ಕಾಣುತ್ತಿಲ್ಲ. ಸರ್ಕಾರ ಕಾವೇರಿ ನೀರಿನ ವಿಚಾರದಲ್ಲಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕು. ಕಾವೇರಿ ಮತ್ತು ಕೃಷ್ಣಾ ಕೊಳ್ಳದ ಜನರಿಗೆ ಅನ್ಯಾಯ ಆಗುತ್ತಿದೆ. ಈಗಾಗಲೇ ತಮಿಳುನಾಡಿಗೆ ನೂರಾರು ಟಿಎಂಸಿ ಅಡಿ ಹರಿದು ಹೋಗಿದೆ’ ಎಂದರು.
‘ಈ ಹಿಂದೆ ಕೂಡ ಜಿ.ಮಾದೇಗೌಡ ಅವರ ಪ್ರತಿಭಟನೆಯಲ್ಲಿಯೂ ನಾನು ಪಾಲ್ಗೊಂಡಿದ್ದೆ. ಇಲ್ಲಿಗೆ ಬರದೇ ಇದ್ದರೂ ರೈತರ ಪರವಾಗಿ ನಿಲ್ಲುತ್ತೇವೆ. ನಾವು ಹಂಚಿತಿನ್ನುವ ಜನರು, ಕಿತ್ತುಕೊಂಡು ತಿನ್ನುವ ಜನರಲ್ಲ, ನಾಳೆ ನೀರು ಖಾಲಿಯಾದರೆ ಗತಿಯೇನು? ಬೆಂಗಳೂರಿನಲ್ಲಿ 2 ಕೋಟಿಗೂ ಹೆಚ್ಚು ಜನರು ಕಾವೇರಿ ನೀರು ಕುಡಿಯುತ್ತಿದ್ದಾರೆ, ಅದನ್ನು ದಾಟಿ ಮೂರು ಕೋಟಿ ಜನರಿಗೆ ನೀರು ಬೇಕಿದೆ ಎಂಬುದನ್ನು ತಜ್ಞರ ಹೇಳಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದಿರುವವರು ನೀರು ಉಳಿಸಿಕೊಳ್ಳಲು ಕ್ರಮ ವಹಿಸಬೇಕು’ ಎಂದರು.
‘ಈಗಾಗಲೇ 96 ಅಡಿಗೆ ಕೆಆರ್‌ಎಸ್ ಅಣೆಕಟ್ಟೆ ಬಂದಿದೆ, ಮಳೆ ಬರುವ ಮುನ್ಸೂಚನೆ ಕಾಣುತ್ತಿಲ್ಲ. ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ? ಇದು ರಾಜಕೀಯ ಮಾಡುವ ಕಾಲವಲ್ಲ. ಸರ್ಕಾರ ನೇಮಿಸಿರುವ ವಕೀಲರು ಕಾವೇರಿ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು. ವರ್ಚುವಲ್ ಮೂಲಕ ಸಭೆಗೆ ಹೋಗುವುದನ್ನು ಬಿಡಬೇಕು. ಭೌತಿಕವಾಗಿ ಸಭೆಯಲ್ಲಿ ಪಾಲ್ಗೊಂಡು ಪ್ರಬಲ ವಾದ ಮಂಡಿಸಬೇಕು’ ಎಂದು ಒತ್ತಾಯಿಸಿದರು.
ಯುವಕ ಕರ್ನಾಟಕ ಸೇನೆ ಬೆಂಬಲ: ಧರಣಿಗೆ ಯುವ ಕರ್ನಾಟಕ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರೂಪೇಶ್ ರಾಜಣ್ಣ ಬೆಂಬಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ‘ಕಾವೇರಿ ನೀರು ಉಳಿಸಿಕೊಳ್ಳಲು ಮಂಡ್ಯ ರೈತರು ಹೋರಾಟ ಮಾಡಿಕೊಂಡೇ ಬರುತ್ತಿದ್ದಾರೆ. ಕರ್ನಾಟಕದ ಅರ್ಧ ರಾಜ್ಯದ ಜನ ಅನ್ನ ತಿನ್ನುತ್ತಿರೋದೇ ಮಂಡ್ಯ ರೈತರಿಂದ. ಕೆಆರ್‌ಎಸ್ ಅಣೆಕಟ್ಟೆಗೆ ಮಳೆಯಿಂದಲೇ ನೀರು ತುಂಬಬೇಕು. ಆದರೆ ಈಗ ಅದರ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ನಮ್ಮ ರೈತರ ಹಿತ ಕಾಯುವುದು ಸರ್ಕಾರದ ಕರ್ತವ್ಯ’ ಎಂದರು.
ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಮಾತನಾಡಿ ‘ಕಾವೇರಿ ವಿಷಯದಲ್ಲಿ ರೈತರಿಗೆ ಅನ್ಯಾಯವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬೇಜವಾಬ್ದಾರಿತನದಿಂದ ರೈತರ ಜೀವನ ಹಾಳು ಮಾಡಿ ತಮಿಳುನಾಡಿನ ರೈತರ ಹಿತಕಾಯಲು ಹೊರಟಿದೆ. ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂಬುದನ್ನೇ ತಿಳಿಸುವಲ್ಲಿ ವಿಫಲವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಹಾಗೂ ಐಎನ್‌ಡಿಐಎ ಒಕ್ಕೂಟವನ್ನು ಓಲೈಸುವ ರಾಜಕಾರಣ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
ಕನ್ನಡ ಹಿತರಕ್ಷಣಾ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಗೋವಿಂದೇಗೌಡ, ಕನ್ನಡ ಸೇನೆಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ರಾಜೇಶೇಖರ್, ಕಾರ್ಮಿಕ ಘಟಕದ ರಾಜ್ಯ ಘಟಕದ ಅಧ್ಯಕ್ಷ ರಾಮ್‌ಪ್ರಸಾದ್‌ಗೌಡ, ಉಪಾಧ್ಯಕ್ಷ ನವೀನ್‌ಗೌಡ, ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶಂಕರೇಗೌಡ, ರೈತ ಹಿತರಕ್ಷಣಾ ಸಮಿತಿಯ ಜಿ.ಬಿ.ಶಿವಕುಮಾರ್, ಕೆ.ಬೊರಯ್ಯ, ಸುನಂದಾ ಜಯರಾಂ, ಅಂಬುಜಮ್ಮ, ತಗ್ಗಹಳ್ಳಿ ವೆಂಕಟೇಶ್ ಭಾಗವಹಿಸಿದ್ದರು.
ಅನ್ನ ಬೆಳೆಯಲು ನೀರು ಬೇಕು: ವಿಜಯ್ ಆನಂದ್
ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್‌ಆನಂದ್ ಧರಣಿ ಬೆಂಬಲಿಸಿ ಮಾತನಾಡಿ ‘ನಾನು 8 ವರ್ಷದ ಹುಡುಗನಾಗಿದ್ದ ಕಾಲದಿಂದಲೂ ಕಾವೇರಿ ಹೋರಾಟ ನೋಡಿಕೊಂಡೇ ಬೆಳೆದಿದ್ದೇನೆ. 2013 2018ರಲ್ಲಿ ನಾನೂ ಹೋರಾಟದಲ್ಲಿ ಪಾಲ್ಗೊಂಡಿದ್ದೆ. ಕುಡಿಯುವ ನೀರು ಮಾತ್ರವಲ್ಲ ತಿನ್ನುವ ಅನ್ನ ಬೆಳೆದುಕೊಳ್ಳಲೂ ನಮಗೆ ನೀರು ಬೇಕು. ಸರ್ಕಾರ ರೈತರ ಹಿತ ಕಾಯುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು. ‘ತಮಿಳುನಾಡಿಗೆ ನೀರು ಹರಿದು ಹೋಗುತ್ತಿದ್ದರೆ ನಮ್ಮ ಅನ್ನವನ್ನು ಕಿತ್ತುಕೊಂಡ ಭಾವನೆ ಕಾಡುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿ ಬಾರಿಯೂ ತಮಿಳುನಾಡು ಪರವಾಗಿ ಆದೇಶ ನೀಡುತ್ತಿದೆ. ಜಲಾಶಯದಲ್ಲಿ ನೀರಿನ ಸಂಗ್ರಹ ಇಲ್ಲದಿದ್ದಾಗಲೂ ಅವೈಜ್ಞಾನಿಕ ಆದೇಶ ನೀಡುತ್ತಿರುವುದು ಅನುಮಾನಾಸ್ಪದ. ರಾಜ್ಯ ಸರ್ಕಾರ ಸಮರ್ಥ ವಾದ ಮಂಡನೆ ಮಾಡಿ ನಮ್ಮ ನೀರಿನ ಹಕ್ಕು ಉಳಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.