ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಣಿಲ್ಲದ ಸಿಸಿಟಿವಿ ಕ್ಯಾಮೆರಾ: ಪೊಲೀಸರ ಕುರುಡು

ಕೆಟ್ಟು ಹೋದ ಕ್ಯಾಮೆರಾಗಳ ರಿಪೇರಿ ಇಲ್ಲ, ಅಪಘಾತ ಪ್ರಕರಣಗಳಿಗೆ ಸಾಕ್ಷಿಯೇ ಸಿಗುವುದಿಲ್ಲ
Last Updated 24 ಮಾರ್ಚ್ 2020, 10:49 IST
ಅಕ್ಷರ ಗಾತ್ರ

ಮಂಡ್ಯ: ರಸ್ತೆ ಸುರಕ್ಷತೆ, ಸಂಚಾರ ದಟ್ಟಣೆ ನಿಯಂತ್ರಣ, ಅಪರಾಧ ಪ್ರಕರಣಗಳ ಪತ್ತೆಗೆ ಸಹಕಾರಿಯಾಗಲಿ ಎಂಬ ಉದ್ದೇಶದಿಂದ ನಗರದ ವಿವಿಧೆಡೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳು ಇದ್ದೂ ಇಲ್ಲದಂತಿವೆ. ಕ್ಯಾಮೆರಾಗಳು ಕಣ್ಣು ಮುಚ್ಚಿದ್ದು, ಪೊಲೀಸ್‌ ಇಲಾಖೆ ಕುರುಡಾಗಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಕಡೆ ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಅಂತರರಾಜ್ಯ ಕಳ್ಳರು, ದರೋಡೆಕೋರರು ಜಾಗೃತವಾಗಿರುವ ಸ್ಥಳ ಎಂದು ಮಂಡ್ಯ ಗುರುತಿಸಿಕೊಂಡಿದೆ. ಹಣ ದರೋಡೆ, ಮನೆಗಳ್ಳತನ, ಸರಗಳ್ಳತನ, ವಾಹನ ಕಳ್ಳತನಕ್ಕೆ ಲೆಕ್ಕವೇ ಇಲ್ಲದಾಗಿದೆ.

ಇಂತಹ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಲು ಸಹಾಯಕವಾಗಿರುವ ಸಿಸಿಟಿವಿ ಕ್ಯಾಮೆರಾಗಳು ನಗರದಾ ದ್ಯಂತ ಕೆಟ್ಟುಹೋಗಿದ್ದು, ಬೆದರು ಬೊಂಬೆಯಂತೆ ಕಾಣುತ್ತಿವೆ. ನಗರಸಭೆ ಹಾಗೂ ಪೊಲೀಸ್‌ ಇಲಾಖೆ ಕ್ಯಾಮೆರಾಗಳನ್ನು ನಿರ್ವಹಣೆ ಮಾಡದ ಕಾರಣ ಪ್ರಕರಣಗಳ ಪತ್ತೆಗೆ ಕ್ಯಾಮೆರಾ ದೃಶ್ಯಾವಳಿಗಳ ಮೇಲೆ ಅವಲಂಬಿತರಾಗದ ಪರಿಸ್ಥಿತಿ ಇದೆ.

ಪೊಲೀಸ್‌ ಇಲಾಖೆ ವತಿಯಿಂದ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟು ವರ್ಷಗಳೇ ಕಳೆದಿವೆ. ರಿಪೇರಿ ಮಾಡಿಸುವ, ನಿರ್ವಹಣೆ ಮಾಡುವ ಗೋಜಿಗೆ ಪೊಲೀಸ್ ಇಲಾಖೆ ಹೋದಂತಿಲ್ಲ. ನಗರಸಭೆಯಿಂದ ಅಳವಡಿಸಲಾಗಿದ್ದ ಕ್ಯಾಮೆರಾಗಳು ಕೂಡ ಹಲವು ವರ್ಷಗಳಿಂದಲೂ ಕೆಟ್ಟು ಹೋಗಿದ್ದವು. ಇತ್ತೀಚೆಗಷ್ಟೇ ಕೆಲವನ್ನು ರಿಪೇರಿ ಮಾಡಿಸಲಾಗಿದೆ.

ನಗರಸಭೆ ವತಿಯಿಂದ 11 ಕಡೆ ಕ್ಯಾಮೆರಾ ಅಳವಡಿಸಲಾಗಿದ್ದು, ಅವುಗಳನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ.

ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಲಕ್ಷಾಂತರ ವಾಹನಗಳು ಓಡಾಡುತ್ತವೆ. ಕೇರಳ, ತಮಿಳುನಾಡಿನ ಕೆಲ ಪ್ರಮುಖ ನಗರಗಳಿಗೆ ತೆರಳುವ ವಾಹನಗಳು ನಗರದ ಮೂಲಕವೇ ಹೋಗಬೇಕಿದೆ. ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟಿದ್ದು, ಹೆಸರಿಗಷ್ಟೇ ಇವೆ.

ಪೊಲೀಸ್‌ ಇಲಾಖೆ ವತಿಯಿಂದ 2012–13ರಲ್ಲಿ ನಗರದ 15 ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಒಂದೆರಡು ಅವುಗಳು ಚೆನ್ನಾಗಿ ಕೆಲಸ ಮಾಡಿದವು. ಅವು ಕೆಟ್ಟು ಹೋಗಿಯೇ 5 ವರ್ಷಗಳು ಕಳೆದಿದ್ದು, ಪೊಲೀಸ್‌ ಇಲಾಖೆ ಅವುಗಳಿಗೆ ಇಲ್ಲಿಯವರೆಗೂ ಪುನಶ್ಚೇತನ ನೀಡಿಲ್ಲ. ಜ್ಯೋತಿ ಇಂಟರ್‌ನ್ಯಾಷನ್‌ ಹೋಟೆಲ್‌, ಎಂ.ಸಿ.ರಸ್ತೆ, ಕಲ್ಲಹಳ್ಳಿ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಕೇಂದ್ರ ಉಪ ಕಾರಾಗೃಹ, ಹೊಳಲು ವೃತ್ತ, ಕಾಮಣ್ಣನ ವೃತ್ತ ಹಳೇ ಎಂಸಿ ರಸ್ತೆ, ಸಂಜಯ ವೃತ್ತ, ಅಗ್ನಿಶಾಮಕ ದಳ ಕಚೇರಿ ಬಳಿ, ಮುನೀರ್‌ ವೃತ್ತ ಗುತ್ತಲು ರಸ್ತೆ, ಫ್ಯಾಕ್ಟರಿ ವೃತ್ತ, ಮಹಾವೀರ ವೃತ್ತ, ವಿ.ವಿ ರಸ್ತೆ, ಹೊಸಹಳ್ಳಿ ವೃತ್ತ, ಕರ್ನಾಟಕ ಬಾರ್‌ ವೃತ್ತ, ನೂರಡಿ ರಸ್ತೆ, ಮೈಷುಗರ್‌ ಫ್ಯಾಕ್ಟರಿ ಬಳಿ ಪೊಲೀಸ್‌ ಇಲಾಖೆ
ಯಿಂದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

‘ಇಲಾಖೆಯಿಂದ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಯಾವುವೂ ಕಾರ್ಯನಿರ್ವಹಣೆ ಮಾಡುತ್ತಿಲ್ಲ’ ಎಂದು ಪೊಲೀಸ್‌ ವೈರ್‌ಲೆಸ್‌ ವಿಭಾಗದ ಸಿಬ್ಬಂದಿ ಹೇಳಿದರು.

ನಗರಸಭೆ ವತಿಯಿಂದ 2016–17ರಲ್ಲಿ 11 ಪ್ರಮುಖ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾ ನ್ಯಾಯಾಲಯದ ಬಳಿ, ಚೀರನಹಳ್ಳಿ ರಸ್ತೆ– ಉದಯಗಿರಿ ವೃತ್ತದ ಬಳಿ, ಕಾಳೇಗೌಡ ಪ್ರೌಢಶಾಲೆ ರಸ್ತೆ, ಚಿಕ್ಕಣ್ಣರವರ ಮನೆ ಬಳಿ, ಹೊಸಹಳ್ಳಿ, ಬಿಸಿಲು ಮಾರಮ್ಮ ದೇವಸ್ಥಾನದ ಬಳಿ, ನೂರಾನಿ ಮೊಹಲ್ಲಾ ಮುಖ್ಯ ರಸ್ತೆ 9ನೇ ಕ್ರಾಸ್‌ ಬಳಿ, ಆಜಾದ್‌ ನಗರ ಆಟೊ ನಿಲ್ದಾಣ ಬಳಿ, ರೈಲ್ವೆ ನಿಲ್ದಾಣ, ಟೆಂಪೊ ನಿಲ್ದಾಣದ ಬಳಿ, ಚಿಕ್ಕಮಂಡ್ಯ ಟೋಲ್‌ಗೇಟ್‌ ಬಳಿ, ಕಾಳಿಕಾಂಬ ದೇವಸ್ಥಾನದ ವೃತ್ತದ ಬಳಿ, ಜ್ಯೋತಿ ಇಂಟರ್‌ನ್ಯಾಷನಲ್‌ ಹೋಟೆಲ್‌ ಬಳಿ, ಅಗ್ನಿಶಾಮಕ ಜಂಕ್ಷನ್‌ ಬಳಿ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಇತ್ತೀಚೆಗೆ ರಿಪೇರಿ ಮಾಡಿಸಲಾಗಿದ್ದು, ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಈಚೆಗೆ ಪೊಲೀಸ್‌ ಇಲಾಖೆಗೆ ವರದಿ ನೀಡಲಾಗಿದೆ.

‘ಕೆಲವು ತಿಂಗಳ ಹಿಂದೆ ಕಾರು ಚಾಲಕ ನನಗೆ ಗುದ್ದಿ ನಿಲ್ಲಿಸದೇ (ಹಿಟ್‌ ಅಂಡ್‌ ರನ್‌) ಪರಾರಿಯಾದ. ನನ್ನ ಬಲಗಾಲು ಮುರಿದಿದ್ದು, ಚಿಕಿತ್ಸೆ ಪಡೆಯಲು ಮೂರು ತಿಂಗಳು ಪರದಾಡಿದೆ. ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಪಡೆಯಬೇಕಾಯಿತು. ಚಾಲಕ ಆರೋಪಿ ಪತ್ತೆಯಾಗಲೇ ಇಲ್ಲ. ಹೆದ್ದಾರಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದಿದ್ದರೆ ಆರೋಪಿಯನ್ನು ಪತ್ತೆ ಮಾಡಬಹುದಾಗಿತ್ತು. ಕ್ಯಾಮೆರಾ ಕೆಟ್ಟು ಹೋಗಿದ್ದ ಕಾರಣ ನನಗೆ ನ್ಯಾಯ ದೊರೆಯಲಿಲ್ಲ’ ಎಂದು ಗಾಯಾಳುವೊಬ್ಬರು ನೋವು ತೋಡಿಕೊಂಡರು.

‘ಸುಮಾರು ₹4 ಲಕ್ಷ ವೆಚ್ಚದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ರಿಪೇರಿ ಮಾಡಿಸಲಾಗಿದ್ದು, ಪೊಲೀಸ್‌ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಅವರೇ ನಿರ್ವಹಣೆ ಮಾಡಲಿದ್ದಾರೆ’ ಎಂದು ನಗರಸಭೆ ಪೌರಾಯುಕ್ತ ಎಸ್‌.ಲೋಕೇಶ್‌ ಹೇಳಿದರು.

ಪ್ಲೇಟ್‌ ನೋಂದಣಿ ಕ್ಯಾಮೆರಾ ಅಳವಡಿಕೆ

‘ನಗರದಲ್ಲಿ ಸಾಕಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಂಬರ್‌ ಪ್ಲೇಟ್‌ ನೋಂದಣಿ ಕ್ಯಾಮೆರಾಗಳನ್ನು ನಗರದ ವಿವಿಧೆಡೆ ಅಳವಡಿಸಲಾಗುವುದು. ಪೊಲೀಸ್‌ ಮತ್ತು ಆರ್‌ಟಿಒ ದತ್ತಾಂಶ ಮಾಹಿತಿ ಅನ್ವಯ ನಿಯಮ ಉಲ್ಲಂಘಿಸಿದ ಸವಾರರ ಮನೆಗೆ ದಂಡ ಪಾವತಿ ರಶೀದಿ ಕಳುಹಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಹೇಳಿದರು.
ಸಾರ್ವಜನಿಕರ ಆಕ್ರೋಶ

ನಗರದ ವಿವಿಧೆಡೆ ಮನೆಗಳ್ಳತನ, ಅಂಗಡಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿಯೊಂದು ಮುಖ್ಯ ರಸ್ತೆಯಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಕಳ್ಳತನ ನಡೆದಾಗ ಪೊಲೀಸರು ಖಾಸಗಿ ಸಿಸಿಟಿವಿ ಕ್ಯಾಮೆರಾ ಹುಡುಕುತ್ತಾರೆ. ಆದರೆ, ಪೊಲೀಸ್‌ ಇಲಾಖೆಯಿಂದಲೇ ಕ್ಯಾಮೆರಾ ಅಳವಡಿಸಿದರೆ ಪೊಲೀಸ್‌ ತನಿಖೆಗೆ ಸಹಾಯಕವಾಗುತ್ತದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪೊಲೀಸರು ಕ್ಯಾಮೆರಾ ಅಳವಡಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದರು.

ಜನ ಏನಂತಾರೆ?

ಹೆಸರಿಗಷ್ಟೇ ಕ್ಯಾಮೆರಾ

ಹೆಸರಿಗಷ್ಟೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸುಮ್ಮನಾದರೆ ಹೇಗೆ? ಜಿಲ್ಲಾ ಕೇಂದ್ರದಲ್ಲಿ ಕ್ಯಾಮೆರಾ ಅಳವಡಿಸದಿರುವುದು ದುರದೃಷ್ಟಕರ. ಪೊಲೀಸ್‌ ಸಿಬ್ಬಂದಿ ಕ್ಯಾಮೆರಾಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಐದು ವರ್ಷಗಳ ಹಿಂದೆ ಅಳವಡಿಸಲಾಗಿದ್ದ ಕ್ಯಾಮೆರಾಗಳು ಹಾಳಾಗಿದ್ದು, ಹೊಸ ಹಾಗೂ ಉತ್ತಮ ಗುಣಮಟ್ಟದ ಕ್ಯಾಮೆರಾ ಅಳವಡಿಸಬೇಕು.

-ಆತ್ಮಾನಂದ, ಮರೀಗೌಡ ಬಡಾವಣೆ ನಿವಾಸಿ

ಹೆದ್ದಾರಿಯಲ್ಲಿ ಕ್ಯಾಮೆರಾ ಅಳವಡಿಸಿ

ಸಂಚಾರ ವ್ಯವಸ್ಥೆ, ಕಳ್ಳತನ, ಸರ ಅಪಹರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಜಿಲ್ಲಾಡಳಿತ, ಪೊಲೀಸ್, ನಗರಸಭೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಪ್ರಕರಣ, ಹಿಟ್‌ ಅಂಡ್‌ ರನ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಹೆದ್ದಾರಿಯಲ್ಲೇ ಹೆಚ್ಚು ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು.

-ಎಚ್.ಡಿ.ಜಯರಾಂ, ಕರವೇ ಅಧ್ಯಕ್ಷ

ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ

ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲ ಎಂದರೆ ಜಿಲ್ಲೆಯಲ್ಲಿ ಆಡಳಿತ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಪೊಲೀಸ್ ಇಲಾಖೆ ವತಿಯಿಂದ ಅಳವಡಿಸಿರುವ ಕ್ಯಾಮೆರಾಗಳನ್ನು ಕೂಡಲೇ ಸರಿಪಡಿಸಿ ಸಾರ್ವಜನಿಕ ಸೇವೆಗೆ ನೀಡಬೇಕು. ಕ್ಯಾಮೆರಾ ದೃಶ್ಯಾವಳಿಗಳು ಅಪರಾಧ ಪತ್ತೆ ಪ್ರಕರಣಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

-ಮಂಜುನಾಥ್, ಚಾಮುಂಡೇಶ್ವರಿ ನಗರ

ಸರಗಳ್ಳರಿಗೆ ವರ

ಮಂಡ್ಯದ ವಿವಿಧೆಡೆ ಸರಗಳ್ಳತನಗಳು ವರದಿಯಾಗುತ್ತಲೇ ಇವೆ. ಮಹಿಳೆಯರು ಓಡಾಡಲು ಭಯ ಪಡುವ ಪರಿಸ್ಥಿತಿ ಇದೆ. ಒಬ್ಬೊಬ್ಬರೇ ಓಡಾಡಲು ಸಾಧ್ಯವೇ ಇಲ್ಲ. ನಗರದ ಪ್ರಮುಖ ಬಡಾವಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಿಸಿಟಿವಿ ಕ್ಯಾಮೆರಾ ಇಲ್ಲದಿರುವುದೇ ಸರಗಳ್ಳರಿಗೆ ವರವಾಗಿದೆ.

-ಮಮತಾ ರಾಧಾಕೃಷ್ಣ, ಮರಿಗೌಡ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT