ಬುಧವಾರ, ಅಕ್ಟೋಬರ್ 21, 2020
25 °C
ತಮಟೆಯ ಸದ್ದಿಗೆ ಹೆಜ್ಜೆ ಹಾಕಿದ ಯುವಕರು

ಹೊಸಹೊಳಲು: ರಂಗದ ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆ.ಆರ್.ಪೇಟೆ: ಐತಿಹಾಸಿಕ ಹಿನ್ನೆಲೆಯಿಂದ ಗಮನ ಸೆಳೆದಿರುವ ಪಟ್ಟಣದ ಹೊರವಲಯದಲ್ಲಿರುವ ಹೊಸಹೊಳಲು ಗ್ರಾಮದಲ್ಲಿ ಶನಿವಾರ ರಾರಿ ಮತ್ತು ಭಾನುವಾರ ರಂಗದ ಹಬ್ಬದ ಸಂಭ್ರಮ ನೆಲೆ ಮಾಡಿತ್ತು. ವಯಸ್ಸಿನ ಭೇದವಿಲ್ಲದೆ ವಯೋವೃದ್ಧರಿಂದ ಮಕ್ಕಳವರೆವಿಗೂ ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕುತ್ತಾ ರಂಗದಲ್ಲಿ ಕುಣಿದು ಕುಪ್ಪಳಿಸಿದರು.

ಪ್ರತಿವರ್ಷದಂತೆ ನಡೆಯುವ ಗ್ರಾಮದ ಹಬ್ಬವು ಆಂಜನೇಯಸ್ವಾಮಿ ಆರಾಧನೆಯೊಂದಿಗೆ ಶನಿವಾರ ಆರಂಭವಾಯಿತು. ಗ್ರಾಮವು ಪುರಸಭೆ ವ್ಯಾಪ್ತಿಗೆ ಸೇರಿದೆಯಾದರೂ ಗ್ರಾಮೀಣ ಸೊಗಡಿನ ಅದ್ಭುತವಾದ ಕಲ್ಪನೆಗಳನ್ನು ಇಂದಿಗೂ ಸಹ ಮೈಗೂಡಿಸಿಕೊಂಡಿರುವ ಗ್ರಾಮದಲ್ಲಿ ಎಲ್ಲ ಧರ್ಮದ ಮತ್ತು ಜಾತಿಯ ಜನರು  ಒಟ್ಟಿಗೆ ಹಬ್ಬದಲ್ಲಿ ಸೇರಿ ಸಂಭ್ರಮಿಸುವುದು ವೈಶಿಷ್ಟ್ಯ.

ವಿವಿಧ ಪ್ರಕಾರಗಳಲ್ಲಿ ರಂಗ ಕುಣಿಯುವ ಮೂಲಕ ರಂಗದ ಹಬ್ಬದಲ್ಲಿ ಪಾಲ್ಗೊಂಡ ಯುವಕರು ಸೇರಿದ್ದ ಜನರ ಗಮನ ಸೆಳೆದರು. ಹೊಸಹೊಳಲು ಭೈರ ಮತ್ತು ತಂಡದವರ ತಮಟೆಯ ನಾದಕ್ಕೆ ಎಲ್ಲರೂ ತಲೆದೂಗುವಂತೆ ಹೆಜ್ಜೆ ಹಾಕಿದರು.

ಹಲವು ದಿನಗಳಿಂದ ಪ್ರತಿದಿನ ರಂಗ ಕುಣಿತ ಅಭ್ಯಾಸ ಮಾಡಿ ಅಂತಿಮವಾಗಿ ರಂಗದ ಹಬ್ಬವನ್ನು ಆಚರಣೆ ಮಾಡುವ ಪದ್ಧತಿ ರೂಢಿಸಿಕೊಂಡಿರುವ ಗ್ರಾಮಸ್ಥರು ಆಧುನಿಕ ಜೀವನದಲ್ಲಿಯೂ ಗ್ರಾಮೀಣ ಕಲೆಯನ್ನು ಅಸ್ವಾದಿಸುತ್ತಾ ಕಲಾಸಿರಿವಂತಿಕೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದನ್ನು ಇಲ್ಲಿ ಕಾಣಬಹುದಾಗಿದೆ.

ಗ್ರಾಮದ ಪ್ರಮುಖ ರಸ್ತೆಗಳಿಗೆ, ರಂಗಸ್ಥಳಕ್ಕೆ ಹಾಗೂ ಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ಗ್ರಾಮದ ವಿವಿಧೆಡೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದರಿಂದ ಗ್ರಾಮ ನವವಧುವಿನಂತೆ ಕಂಗೊಳಿಸುತ್ತಿತ್ತು.

ಗ್ರಾಮದ ರಸ್ತೆಗಳಲ್ಲಿಯೂ ತಳಿರು- ತೋರಣಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ ದೇವರ ಉತ್ಸವವನ್ನು ಗ್ರಾಮಸ್ಥರು ಬರಮಾಡಿಕೊಂಡರು. ಭಾನುವಾರದ ಬೆಳಗಿನ ಜಾವದವರೆಗೂ ಪ್ರದರ್ಶನ ಮಾಡಲಾಯಿತು.

ಗ್ರಾಮದವರು ಮತ್ತು ನೆರೆಹೊರೆ ಊರಿನಿಂದ ಬಂದ ಜನ ರಂಗ ಕುಣಿತಗಾರರಿಗೆ ಹೂವಿನ ಹಾರ ಹಾಕಿ ಶಿಳ್ಳೆ ಹಾಕುವ ಮೂಲಕ ಪ್ರೊತ್ಸಾಹ ನೀಡಿದರು.  ರಂಗದ ಹಬ್ಬದ ಅಂಗವಾಗಿ ಕನ್ನಂಕಾಡಿಯನ್ನು ಬಾಲೆಯರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೊತ್ತು ತರುವ ಜೊತೆಗೆ ಮೆರವಣಿಗೆಯಲ್ಲಿ ಹುಲಿವೇಷ, ಪಾಳೆಗಾರ ವೇಷ, ಬಾಯಿಬೀಗ, ಮರಗಾಲು ಕುಣಿತ, ವಿವಿಧ ವೇಷಭೂಷಣ ಮೆರವಣಿಗೆ ಮೆರುಗು ತಂದವು. ಈ ಸಮಯದಲ್ಲಿ ಬಾಣ-ಬಿರುಸು, ಪಟಾಕಿ ಸಿಡಿಸಿ ಯುವಕರು ಸಂಭ್ರಮಿಸಿದರೆ, ಇದು ಹಬ್ಬಕ್ಕೆ ವಿಶೇಷ ಕಳೆ ತಂದಿತು.

ಭಾನುವಾರ ಗ್ರಾಮದ ರಂಗಸ್ಥಳದಲ್ಲಿ ಓಕುಳಿ ಸಂಭ್ರಮ ನೆಲೆ ಮಾಡಿತ್ತು. ಓಕುಳಿ ಗುಂಡಿಯಲ್ಲಿರುವ ನೀರನ್ನು ತೆಗೆದುಕೊಂಡು ಎಲ್ಲ ವಯೋಮಾನದವರು  ಪರಸ್ಪರ ಎರಚಿದ್ದಲ್ಲದೆ ಮನೆ-ಮನೆಗೆ ತೆರಳಿ ಮನೆಯವರಿಗೂ ಕೂಡಾ ಓಕುಳಿ ನೀರನ್ನು ಎರಚಿ ಸಂಭ್ರಮಿಸಿದರು.

ಗ್ರಾಮದೇವ ಆಂಜನೇಯಸ್ವಾಮಿಯ ಮೂಲ ಮೂರ್ತಿಗೆ ಹಬ್ಬದ ಅಂಗವಾಗಿ ವಿಶೇಷಪೂಜೆಯನ್ನು ಸಲ್ಲಿಸಲಾಯಿತು. ಅಲ್ಲದೇ ವಿವಿಧ ಅಲಂಕಾರ ಮಾಡಲಾಗಿತ್ತು. ರಂಗಕುಣಿತದ ನೇತೃತ್ವವನ್ನು ಗ್ರಾಮದ ಯಜಮಾನರು, ಪುರಸಭೆಯ ಸದಸ್ಯರು, ಮಾಜಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.